ADVERTISEMENT

ಕಾಡಿಗೆ ಕೊಡಲಿ: ನಾಡಿಗೆ ಆಪತ್ತು

ಅರಣ್ಯದಲ್ಲಿ ಮಾನವ ಹಸ್ತಕ್ಷೇಪ: ಜನವಸತಿ ಕಡೆ ಬರುತ್ತಿರುವ ವನ್ಯಪ್ರಾಣಿಗಳು

ಸಂಧ್ಯಾ ಹೆಗಡೆ
Published 15 ಫೆಬ್ರುವರಿ 2021, 5:34 IST
Last Updated 15 ಫೆಬ್ರುವರಿ 2021, 5:34 IST
ಸುಬ್ರಹ್ಮಣ್ಯ ಸಮೀಪ ರೆಂಜಿಲಾಡಿ ಬಳಿ ತೋಟದಲ್ಲಿ ಹಿಡಿದ ಚಿರತೆಯನ್ನು ಬಲೆಯಲ್ಲಿ ಹೊತ್ತೊಯ್ದ ಅರಣ್ಯ ಇಲಾಖೆ ಸಿಬ್ಬಂದಿಚಿತ್ರ: ಲೋಕೇಶ ಬಿ.ಎನ್
ಸುಬ್ರಹ್ಮಣ್ಯ ಸಮೀಪ ರೆಂಜಿಲಾಡಿ ಬಳಿ ತೋಟದಲ್ಲಿ ಹಿಡಿದ ಚಿರತೆಯನ್ನು ಬಲೆಯಲ್ಲಿ ಹೊತ್ತೊಯ್ದ ಅರಣ್ಯ ಇಲಾಖೆ ಸಿಬ್ಬಂದಿಚಿತ್ರ: ಲೋಕೇಶ ಬಿ.ಎನ್   

ಮಂಗಳೂರು: ಕಾಡುಪ್ರಾಣಿಗಳು ನಾಡಿಗೆ ಬಂದು ಮನುಷ್ಯರಲ್ಲಿ ಆತಂಕ ಸೃಷ್ಟಿಸುತ್ತಿರುವ ವಿದ್ಯಮಾನಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ಅರಣ್ಯದಂಚಿನ ಗ್ರಾಮಗಳ ಜನರಿಗೆ ಭಯದಿಂದ ಸ್ವಯಂ ರಕ್ಷಣೆಗೆ ಕೈಗೊಳ್ಳುವ ಕ್ರಮಗಳು ಪ್ರಾಣಿಗಳ ಜೀವಕ್ಕೆ ಅಪಾಯವನ್ನು ತಂದೊಡ್ಡುತ್ತಿವೆ.

ಒಂದು ತಿಂಗಳ ಈಚೆಗೆ ಜಿಲ್ಲೆಯಲ್ಲಿ ಇಂತಹ ಹಲವಾರು ಘಟನೆಗಳು ನಡೆದಿವೆ. ಸುಬ್ರಹ್ಮಣ್ಯ ಸಮೀಪದ ಕೈಕಂಬ ಮೂಲೆಮನೆಯಲ್ಲಿ ನಾಯಿ ಹಿಡಿಯಲು ಬಂದಿದ್ದ ಚಿರತೆಯೊಂದು, ಶೌಚಾಲಯದ ಒಳಗೆ ಸಿಲುಕಿ, ಹಿಡಿಯಲು ಸಿಗದೇ, ತಪ್ಪಿಸಿಕೊಂಡು ಹೋಗಿತ್ತು. ಎರಡು ದಿನಗಳ ಹಿಂದೆ ಪಂಜ ಸಮೀಪ ಏನಕಲ್ಲು ಭಾಗದಲ್ಲಿ ಚಿರತೆ ಓಡಾಡಿದ್ದನ್ನು ಜನರು ಕಂಡಿದ್ದಾರೆ. ವಿಟ್ಲ ಸಮೀಪ ಕೊಳ್ನಾಡು ಗ್ರಾಮದಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದವರು ಚಿರತೆ ಓಡಾಟ ಗಮನಿಸಿ, ಬೆಚ್ಚಿದ್ದಾರೆ.

ಕಡಬ ಸಮೀಪದ ಸರ್ವೆ, ಬಡಕ್ಕೊಡಿ, ಪಾಲ್ತಾಡಿ, ಬಣ್ಣೂರು ಈ ಭಾಗಗಳಲ್ಲೂ ಚಿರತೆ ಆಗಾಗ ದರ್ಶನ ನೀಡುತ್ತದೆ. ನರಿಮೊಗರು ಗ್ರಾಮದಲ್ಲಿ ಚಿರತೆ ಹಿಡಿಯಲು ಬೋನನ್ನು ಸಹ ಇಡಲಾಗಿತ್ತು. ಕಾಡಂಚಿನ ಸಿಬಾಜೆ, ಸಿರಿಬಾಗಿಲು ಮತ್ತಿತರ ಊರುಗಳಲ್ಲಿ ಪ್ರತಿವರ್ಷ ಒಂದೆರಡು ಬಾರಿಯಾದರೂ, ಆನೆಗಳ ಹಿಂಡು ಸಂಚರಿಸುತ್ತದೆ. ಕೋಡಿಂಬಾಲದಲ್ಲಿ ಒಂಟಿ ಸಲಗ ಝೇಂಕರಿಸಿದ್ದು, ಇನ್ನೂ ಜನರ ಕಿವಿಯಿಂದ ದೂರವಾಗಲಿಲ್ಲ.

ADVERTISEMENT

ಪುತ್ತೂರು ತಾಲ್ಲೂಕಿನ ಸುಳ್ಯಪದವು, ಅರಿಯಡ್ಕ, ಕೌಡಿಚಾರು ಭಾಗಗಳಲ್ಲಿ ಕಾಡುಕೋಣಗಳ ಹಾವಳಿಯಿಂದ ಕೃಷಿಕರು ಬೇಸತ್ತಿದ್ದಾರೆ. ಇನ್ನು ಕಾಡುಹಂದಿ ರಾತ್ರಿ ವೇಳೆ ಬಂದು, ತೋಟದಲ್ಲಿ ಬೆಳೆ ಹಾನಿ ಮಾಡಿ ಹೋಗುವುದು ಸಾಮಾನ್ಯವಾಗಿದೆ. ‘ಬೆಳೆಹಾನಿಗೆ ಅರಣ್ಯ ಇಲಾಖೆ ಪರಿಹಾರ ನೀಡುತ್ತದೆ. ಆದರೆ, ಆಗುವ ಹಾನಿಗೆ ಅವರು ನೀಡುವ ಪರಿಹಾರ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ. ವನ್ಯಪ್ರಾಣಿಗಳ ಹಾವಳಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ಆದರೆ, ಊರಿಗೆ ಚಿರತೆಯಂತಹ ಕ್ರೂರ ಪ್ರಾಣಿಗಳು ಬರುತ್ತಿರುವುದು ಹೆದರಿಕೆ ಮೂಡಿಸಿದೆ’ ಎನ್ನುತ್ತಾರೆ ಹಳ್ಳಿಗರು.

‘ಕೊಳ್ನಾಡು ಗ್ರಾಮದಲ್ಲಿ ವಾರದ ಹಿಂದೆ ಕಾಡುಕೋಣಗಳ ಹಿಂಡು ಓಡಾಡಿದೆ. ಸಮೀಪದಲ್ಲೇ ಶಾಲೆ ಇದೆ. ಮನೆಗಳು ಇವೆ. ಅರಣ್ಯದ ನಡುವೆ ರಸ್ತೆ ನಿರ್ಮಾಣವಾಗಿದೆ. ವನ್ಯಪ್ರಾಣಿಗಳ ಸಂಚಾರ ಹೆಚ್ಚಿರುವ ಈ ರಸ್ತೆಯಲ್ಲಿ ಹಗಲಿನಲ್ಲೂ ಬೈಕ್‌ ಮೇಲೆ ಒಬ್ಬರೇ ಓಡಾಡಲು ಭಯವಾಗುತ್ತದೆ’ ಎನ್ನುತ್ತಾರೆ ಸ್ಥಳೀಯ ಮೊಹಮ್ಮದ್ ಅಲಿ.

ಚಿಕ್ಕದಾಗುತ್ತಿರುವ ಕಾಡು:

‘ಕಾಡಿನಲ್ಲಿ ಆಹಾರದ ಕೊರತೆಯಾದಾಗ ಮಾಂಸಾಹಾರಿ ಪ್ರಾಣಿಗಳು, ಆಹಾರ ಹುಡುಕಿಕೊಂಡು ಊರಿಗೆ ಬರುತ್ತವೆ. ಅರಣ್ಯದಲ್ಲಿ ಮಾನವ ಹಸ್ತಕ್ಷೇಪ ಹೆಚ್ಚಿದಾಗ ಅವುಗಳ ಸ್ವಚ್ಛಂದ ಓಡಾಟಕ್ಕೆ ಅಡ್ಡಿಯಾಗುತ್ತದೆ. ಕಾಡು ಚಿಕ್ಕದಾಗುತ್ತಿದೆಯೇ ವಿನಾ ಪ್ರಾಣಿಗಳ ಸಂಖ್ಯೆ ಹೆಚ್ಚಾಗುತ್ತಿಲ್ಲ’ ಎ‌ನ್ನುತ್ತಾರೆ ವನ್ಯಜೀವಿ ಸಂರಕ್ಷಣಾ ದಳದ ಭುವನೇಶ್ ಕೈಕಂಬ.

‘ಅಭಿವೃದ್ಧಿ ಹೆಸರಿನಲ್ಲಿ ನಡೆಯುವ ಕಾಮಗಾರಿಗಳು ಪ್ರಾಣಿಗಳ ಜೀವನಕ್ರಮಕ್ಕೆ ಮಾರಕವಾಗಿವೆ. ಕಾಡಿನಲ್ಲಿ ನಿರ್ಮಿಸುವ ರಸ್ತೆಗಳಿಂದ, ದಟ್ಟಾರಣ್ಯ ಎರಡು ಸೀಳಾಗಿ ಹೋಗುತ್ತದೆ. ತುಂಡು ತುಂಡಾದ ಕಾಡಿನಲ್ಲಿ ಆಹಾರ, ನೆಲೆಗಾಗಿ ಪ್ರಾಣಿಗಳು ಅತ್ತಿಂದಿತ್ತ ಸಂಚರಿಸುವಾಗ, ಆ ಮಾರ್ಗದಲ್ಲಿ ಸಂಚರಿಸುವ ಜನರಿಗೆ ಭಯವಾಗುತ್ತದೆ. ಕಾಡಿನಲ್ಲಿ ಆಹಾರ ಕೊರತೆ ಆದಾಗ, ಪ್ರಾಣಿಗಳು ಊರಿನೆಡೆಗೆ ಮುಖ ಮಾಡುತ್ತವೆ’ ಎಂದು ಅವರು ವಿಶ್ಲೇಷಿಸಿದರು.

‘ಅಭಿವೃದ್ಧಿ ಏಕಮುಖವಾಗಬಾರದು. ಅದಕ್ಕೆ ಸಮಗ್ರ ದೃಷ್ಟಿಕೋನ ಇರಬೇಕು. ಉಳಿದ ಅಭಿವೃದ್ಧಿ ಜತೆಗೆ ಕಾಡು ಕೂಡ ಸುಧಾರಣೆ ಆಗಬೇಕು. ಹೊಸ ಅರಣ್ಯ ಬೆಳೆಸುವುದಕ್ಕಿಂತ ಇರುವ ಕಾಡಿನ ಉಳಿಕೆಗೆ ಆದ್ಯತೆ ನೀಡಬೇಕಾಗಿದೆ. ಅರಣ್ಯ ನಿರ್ವಹಣೆಯ ಪಾಠ ನಮಗೆ ತುರ್ತಾಗಿ ಬೇಕಾಗಿದೆ. ಕಾಡುಪ್ರಾಣಿಗಳು ಮನುಷ್ಯನನ್ನು ಕೊಲ್ಲಲು ಊರಿಗೆ ಬರುತ್ತವೆ ಎಂಬ ಭಾವನೆಯಲ್ಲಿ ಜನರು ಚಿರತೆಯಂತಹ ಪ್ರಾಣಿಯನ್ನು ಕಂಡಾಗ ಗಲಿಬಿಲಿಗೊಳ್ಳುತ್ತಾರೆ. ಇದರ ಮೂಲ ಅರಿಯುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ’ ಎಂದು ಅವರು ಪ್ರತಿಕ್ರಿಯಿಸಿದರು.

‘ಚಿರತೆ ಸಂಚಾರ ಸಹಜ ಪ್ರಕ್ರಿಯೆ’

‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 1.25 ಲಕ್ಷ ಹೆಕ್ಟೇರ್ ಕಾಡು ಇದೆ. ಕಾಡಂಚಿನಲ್ಲಿ ಅನೇಕ ಊರುಗಳು ಇವೆ. ಇಂತಹ ಪ್ರದೇಶಗಳಲ್ಲಿ ಕಾಡುಪ್ರಾಣಿಗಳ ಹಾವಳಿ ಆಗಾಗ ನಡೆಯುತ್ತದೆ’ ಎಂದು ಮಂಗಳೂರು ವಿಭಾಗದ ಡಿಸಿಎಫ್ ಡಾ. ಕರಿಕ್ಕಾಲನ್ ಹೇಳಿದರು.

‘ಚಿರತೆಗೆ ಹುಲಿಯಂತೆ ಗಡಿ ಸರಹದ್ದು ಇರುವುದಿಲ್ಲ. ಅವು ಆಹಾರಕ್ಕಾಗಿ ಸಂಚರಿಸುತ್ತ ಇರುತ್ತವೆ. ಅವುಗಳಿಗೆ ನಾಯಿ, ಕೋಳಿ ನೆಚ್ಚಿನ ಆಹಾರವಾಗಿರುವ ಕಾರಣ, ಬೇಟೆಯಾಡಲು ಕೆಲವೊಮ್ಮೆ ಊರಿಗೆ ಬರುತ್ತವೆ. ಮುಸ್ಸಂಜೆಗೆ ಹೊರ ಬೀಳುವ ಅವು, ಬೆಳಗಿನ ಜಾವದಲ್ಲಿ ಮತ್ತೆ ಕಾಡು ಸೇರುತ್ತವೆ. ಬೆಂಗಳೂರು, ಮೈಸೂರಿನಂತಹ ನಗರಗಳಲ್ಲೂ ಅನೇಕ ಬಾರಿ ಚಿರತೆಗಳು ಕಾಣಸಿಕೊಂಡಿದ್ದವು’ ಎಂದು ಮಂಗಳೂರು ವಿಭಾಗದ ಡಿಸಿಎಫ್ ಡಾ. ಕರಿಕ್ಕಾಲನ್ ‘ಪ್ರಜಾವಾಣಿ’ಗೆ ತಿಳಿಸಿದರು.

* ವನ್ಯಪ್ರಾಣಿಗಳ ಬದುಕುವ ಹಕ್ಕನ್ನು ಕಸಿದಿರುವ ಮನುಷ್ಯ, ಈಗ ಅವುಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾನೆ.
–ಭುವನೇಶ್ ಕೈಕಂಬ, ವನ್ಯಜೀವಿ ಅಪರಾಧ ತಡೆ ದಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.