ADVERTISEMENT

ಕೈಗಾರಿಕೆಗಳ ತೆರಿಗೆ ತಗ್ಗಿಸುವ ಪ್ರಸ್ತಾವ: ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2020, 11:03 IST
Last Updated 29 ಫೆಬ್ರುವರಿ 2020, 11:03 IST
   

ಮಂಗಳೂರು: ಕೈಗಾರಿಕೆಗಳಿಗೆ ಸ್ಥಳೀಯ ಸಂಸ್ಥೆಗಳು ವಿಧಿಸುವ ತೆರಿಗೆಯ ಪ್ರಮಾಣವನ್ನು ಇಳಿಸುವ ಪ್ರಸ್ತಾವವಿದೆ. ಬಜೆಟ್‌ನಲ್ಲಿ ಈ ಸಂಬಂಧ ಘೋಷಣೆ ಹೊರಬೀಳಲಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.

ನಗರದಲ್ಲಿ ಶನಿವಾರ ನಡೆದ ದಕ್ಷಿಣ ಕನ್ನಡ ಜಿಲ್ಲಾ ಕೈಗಾರಿಕಾ ಅಭಿವೃದ್ಧಿ ಸಭೆಯಲ್ಲಿ ಮಾತನಾಡಿದ ಅವರು, 'ಈಗ ಕೈಗಾರಿಕೆಗಳಿಗೆ ವಾಣಿಜ್ಯ ವಿಭಾಗದಲ್ಲಿ ತೆರಿಗೆ ವಿಧಿಸಲಾಗುತ್ತಿದೆ. ವಸತಿಯೂ ಅಲ್ಲದ, ವಾಣಿಜ್ಯವೂ ಅಲ್ಲದ ಹೊಸ ತೆರಿಗೆ ದರವನ್ನು ಕೈಗಾರಿಕಾ ವಲಯಕ್ಕೆ ಅನ್ವಯಿಸಲು ಯೋಚಿಸಲಾಗಿದೆ' ಎಂದರು.

ಕೆಲವು ಕಡೆಗಳಲ್ಲಿ ಇನ್ನೂ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರ ಆಗದ ಕೈಗಾರಿಕಾ ಬಡಾವಣೆಗಳಲ್ಲಿ ಕೈಗಾರಿಕೆಗಳಿಗೆ ಎರಡು ತೆರಿಗೆ ವಿಧಿಸಲಾಗುತ್ತಿದೆ. ಸ್ಥಳೀಯ ಸಂಸ್ಥೆಗಳು ತೆರಿಗೆ ವಿಧಿಸಿದರೆ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಅಭಿವೃದ್ಧಿ ಶುಲ್ಕ ವಿಧಿಸುತ್ತಿದೆ. ಒಂದು ತೆರಿಗೆ ಮಾತ್ರ ವಿಧಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ADVERTISEMENT

ಕೈಗಾರಿಗಾ ಪ್ರದೇಶಾಭಿವೃದ್ಧಿ ಪ್ರಾಧಿಕಾರಗಳ ರಚನೆಗೆ ಪ್ರಕ್ರಿಯೆ ಆರಂಭಿಸಲಾಗಿದೆ. ಕೈಗಾರಿಕಾ ಕ್ಷೇತ್ರದ ವಿಸ್ತರಣೆಗೆ ಜಮೀನು ಖರೀದಿ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ. ಭೂ ಪರಿವರ್ತನೆ ಪ್ರಕ್ರಿಯೆಗೂ ವೇಗ ನೀಡಲಾಗಿದೆ ಎಂದರು.

ಕನಿಷ್ಠ ವೇತನ ಪರಿಷ್ಕರಣೆ: ರಾಜ್ಯವು ದೇಶದಲ್ಲೇ ಅತ್ಯಧಿಕ ಕನಿಷ್ಠ ವೇತನ ದರ ಹೊಂದಿದೆ. ಇದರಿಂದ ಹೊರೆ ಆಗುತ್ತಿರುವುದಾಗಿ ಕೈಗಾರಿಕೋದ್ಯಮಿಗಳು ಹೇಳುತ್ತಿದ್ದಾರೆ. ಯಾರಿಗೂ ಹೊರೆಯಾಗದ ರೀತಿಯಲ್ಲಿ ಕನಿಷ್ಠ ವೇತನ ದರ ಪರಿಷ್ಕರಣೆಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡಲು ಹೂಡಿಕೆದಾರರ ಸಮ್ಮೇಳನ ನಡೆಸಲಾಗುತ್ತಿದೆ. ಮಂಗಳೂರಿನಲ್ಲಿ ಏಪ್ರಿಲ್ ಕೊನೆಯ ವಾರ ಅಥವಾ ಮೇ ಮೊದಲ ವಾರ ಹೂಡಿಕೆದಾರರ ಸಮ್ಮೇಳನ ನಡೆಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.