ADVERTISEMENT

ಕೇಂದ್ರ ಮತ್ತು ರಾಜ್ಯ ಸರಕಾರದಿಂದ ರೈತರಿಗೆ ಅನ್ಯಾಯ: ಕೃಷ್ಣಪ್ಪ ಸಾಲ್ಯಾನ್

​ಪ್ರಜಾವಾಣಿ ವಾರ್ತೆ
Published 26 ಮೇ 2021, 7:06 IST
Last Updated 26 ಮೇ 2021, 7:06 IST
ಕಿಸಾನ್ ಸಂಯುಕ್ತ ಮೋರ್ಚಾ ದೇಶವ್ಯಾಪಿ ಕರೆ ನೀಡಿರುವ  ಕಪ್ಪು ಪಟ್ಟಿ ಪ್ರದರ್ಶನ ಅಂಗವಾಗಿ ಕುತ್ತಾರು ತೇವುಲದಲ್ಲಿ ನಡೆದ ಪ್ರತಿಭಟನೆ
ಕಿಸಾನ್ ಸಂಯುಕ್ತ ಮೋರ್ಚಾ ದೇಶವ್ಯಾಪಿ ಕರೆ ನೀಡಿರುವ ಕಪ್ಪು ಪಟ್ಟಿ ಪ್ರದರ್ಶನ ಅಂಗವಾಗಿ ಕುತ್ತಾರು ತೇವುಲದಲ್ಲಿ ನಡೆದ ಪ್ರತಿಭಟನೆ    

ಉಳ್ಳಾಲ: ಕೇಂದ್ರ ಮತ್ತು ರಾಜ್ಯ ಸರಕಾರ ಎಪಿಎಂಸಿಯನ್ನು ಖಾಸಗೀಕರಣಗೊಳಿಸುವ ಮೂಲಕ ದೇಶದ ಬೆನ್ನೆಲುಬು ರೈತನಿಗೆ ಅನ್ಯಾಯ ಮಾಡುವುದರ ಜೊತೆಗೆ ವಿದ್ಯುತ್ ಶಕ್ತಿ ಇಲಾಖೆಯನ್ನು ಖಾಸಗೀಕರಣಗೊಳಿಸಿ ರೈತರನ್ನು ಕಂಗಾಲಾಗಿ ಮಾಡಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಸಾಲ್ಯಾನ್ ಹೇಳಿದರು.

ಅವರು ಕಿಸಾನ್ ಸಂಯುಕ್ತ ಮೋರ್ಚಾ ದೇಶವ್ಯಾಪಿ ಕರೆ ನೀಡಿರುವ ಕಪ್ಪು ಪಟ್ಟಿ ಪ್ರದರ್ಶನ ಅಂಗವಾಗಿ ಕುತ್ತಾರು ತೇವುಲದಲ್ಲಿ ಹಮ್ಮಿಕೊಂಡ ಕಪ್ಪು ಪಟ್ಟಿ ಪ್ರದರ್ಶನದಲ್ಲಿ ಭಾಗವಹಿಸಿ ಮಾತನಾಡಿದರು.

ರೈತರ ಉತ್ಪತ್ತಿಗೆ ಎಪಿಎಂಸಿ ಯಲ್ಲಿ ಸೂಕ್ತ ಬೆಲೆ ದೊರೆಯುತಿತ್ತು. ಇದೀಗ ಅದನ್ನು ಖಾಸಗೀಕರಣಗೊಳಿಸು ಮೂಲಕ ರೈತರನ್ನು ಕಂಗಾಲಾಗಿ ಮಾಡಿದೆ.

ADVERTISEMENT

ಹೋರಾಟ ನಡೆಸಿ ಪಡೆದಂತಹ ಕೃಷಿಭೂಮಿಯನ್ನು ಭೂಸುಧಾರಣೆ ಕಾಯಿದೆ ಜಾರಿಗೆ ತಂದು ಬಂಡವಾಳಶಾಹಿ, ಬಹುರಾಷ್ಟ್ರೀಯ ಕಂಪೆನಿಗಳ ಪಾಲಾಗುವ ವ್ಯವಸ್ಥೆ ಸರಕಾರ ಮಾಡಿದೆ. ಇದೆಲ್ಲವನ್ನು ಮುಂದಿಟ್ಟು 500 ರೈತ ಸಂಘಟನೆಗಳು ದೆಹಲಿಯಲ್ಲಿ ಆರು ತಿಂಗಳಿನಿಂದ ಬಿಸಿಲು-ಮಳೆಯೆನ್ನದೆ ಕುಳಿತು ಪ್ರತಿಭಟನೆ ನಡೆಸುತ್ತಿದೆ. 180 ದಿನಗಳ ಪ್ರತಿಭಟನೆ ಮುಂದುವರಿದರೂ ಕೇಂದ್ರ ಸರಕಾರ ಮಾತ್ರ ಕಿವಿ ಕೇಳಿಸದ ರೀತಿಯಲ್ಲಿ ವರ್ತಿಸಿ ರೈತವಿರೋಧಿ, ಜನವಿರೋಧಿಯಾಗಿ ವರ್ತಿಸುತ್ತಿದೆ.ಕೊರೊನಾ ವಿರುದ್ಧ ಹೋರಾಡುವಲ್ಲಿ ದೇಶ ವಿಫಲವಾಗಿದೆ. ಸೂಕ್ತ ವ್ಯವಸ್ಥೆ ಇಲ್ಲದೆ ಸಾವಿರ ಲೆಕ್ಕದಲ್ಲಿ ದಿನನಿತ್ಯ ಜನ ಸಾಯುತ್ತಿದ್ದಾರೆ. ಆಕ್ಸಿಜನ್, ವೆಂಟಿಲೇಟರ್ , ಬೆಡ್ ವ್ಯವಸ್ಥೆ ಉಚಿತವಾಗಿ ರೋಗಿಗಳಿಗೆ , ಲಸಿಕೆಯನ್ನು ಉಚಿತವಾಗಿ ನೀಡಬೇಕು ಅನ್ನುವ ಒತ್ತಾಯವನ್ನು ಇದೇ ವೇಳೆ ಮಾಡುತ್ತಿದ್ದೇವೆ ಎಂದರು.

ಪ್ರತಿಭಟನೆಗೆ ಸಿದ್ಧರಾಗಿ: ಜಿಲ್ಲೆಯ ಜಾಗದಲ್ಲಿ ನೆಲೆಯೂರಿರುವ ಎಂಆರ್‍ಪಿಎಲ್‍ನಲ್ಲಿ ಉಡುಪಿ-ದ.ಕ ಜಿಲ್ಲೆಯ ಯುವಕರಿಗೆ ಕೆಲಸ ಕೊಡಿಸದೆ, ಹೊರರಾಜ್ಯದವರನ್ನು ಸೇರ್ಪಡೆಗೊಳಿಸಿರುವುದು ಯುವಜನರಿಗೆ ಮಾಡಿರುವ ದ್ರೋಹ. ಉಡುಪಿ-ದ.ಕ ಜಿಲ್ಲೆಯ ಶೇ.80 ರಷ್ಟು ಮಂದಿಗೆ ಎಂಆರ್ ಪಿಎಲ್ ನಲ್ಲಿ ಉದ್ಯೋಗ ದೊರಕಿಸಿ ಕೊಡುವಂತೆ ಒತ್ತಾಯಿಸಿ ರೈತ ಸಂಘ, ವಿದ್ಯಾರ್ಥಿ ಸಂಘ, ಮಹಿಳಾ ಸಂಘ, ಜನಪರ ಸಂಘಟನೆಗಳು ಒಗ್ಗೂಡಿ ಪ್ರತಿಭಟನೆಗೆ ಸಿದ್ಧರಾಗಬೇಕಿದೆ ಎಂದರು.

ಈ ವೇಳೆ ರೈತ ಸಂಘ ಜಿಲ್ಲಾ ನಾಯಕ ಶೇಖರ್ ಕುಂದರ್, ದೆಪ್ಪೆಲಿಮಾರು ತ್ಯಾಂಪನ್ಣ, ಮಹಾಬಲ ದೆಪ್ಪೆಲಿಮಾರ್, ದಾಮೋದರ್ ಡಿ, ಮಾಧವ ಸಾಲಿಯಾನ್, ಅಶೋಕ್, ಜಯಂತ್ ಬಂಗೇರ, ನಾರಾಯಣ ಕಂಪ, ರಾಘವ ಮುಳಿಹಿತ್ಲು, ಶಿವಾನಂದ ಕುಂಡಳಾಯಿ, ವಿದ್ಯಾರ್ಥಿ ನಾಯಕ ಭುವನ್ ಕುಂದರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.