ADVERTISEMENT

ಪುತ್ತೂರು-ಕಾಟುಕುಕ್ಕೆ ನಡುವೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭ

ಶಕ್ತಿ ಯೋಜನೆ: ಗಡಿಭಾಗದ ವಿದ್ಯಾರ್ಥಿನಿಯರಿಗೂ ಅವಕಾಶ: ಶಾಸಕ ಅಶೋಕ್‌ಕುಮಾರ್‌

​ಪ್ರಜಾವಾಣಿ ವಾರ್ತೆ
Published 6 ಮೇ 2025, 12:27 IST
Last Updated 6 ಮೇ 2025, 12:27 IST
ಪುತ್ತೂರಿನಿಂದ ಕೇರಳದ ಕಾಟುಕುಕ್ಕೆಗೆ ಆರಂಭಿಸಲಾದ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಶಾಸಕ ಅಶೋಕ್‌ಕುಮಾರ್ ರೈ ಮಂಗಳವಾರ ಚಾಲನೆ ನೀಡಿದರು
ಪುತ್ತೂರಿನಿಂದ ಕೇರಳದ ಕಾಟುಕುಕ್ಕೆಗೆ ಆರಂಭಿಸಲಾದ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಶಾಸಕ ಅಶೋಕ್‌ಕುಮಾರ್ ರೈ ಮಂಗಳವಾರ ಚಾಲನೆ ನೀಡಿದರು   

ಪುತ್ತೂರು: ಪುತ್ತೂರಿನಿಂದ ಬೆಟ್ಟಂಪಾಡಿ-ಪಾಣಾಜೆ ಮೂಲಕ ಕೇರಳದ ಕಾಟುಕುಕ್ಕೆಗೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರವನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ.

ಕರ್ನಾಟಕ ಕೇರಳ ಗಡಿಪ್ರದೇಶವಾದ ಪಾಣಾಜೆ ಗ್ರಾಮದ ಅರ್ಧಮೂಲೆಯಲ್ಲಿ ಶಾಸಕ ಅಶೋಕ್‌ಕುಮಾರ್‌ ರೈ ಅವರು ಪುತ್ತೂರು -ಕಾಟುಕುಕ್ಕೆ ಅಂತರರಾಜ್ಯ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಮಂಗಳವಾರ ಚಾಲನೆ ನೀಡಿದರು.

ಕಾಟುಕುಕ್ಕೆ ಸುಬ್ರಾಯ ದೇವಸ್ಥಾನದಲ್ಲಿ ಆರಂಭಗೊಂಡಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಮುಗಿಯುವವರೆಗೆ ಸುಮಾರು 7 ದಿನ ಪ್ರಾಯೋಗಿಕವಾಗಿ ಬಸ್ ಸಂಚಾರ ನಡೆಯಲಿದೆ. ಜೂನ್‌ನಲ್ಲಿ ಕಾಲೇಜು ಆರಂಭವಾದ ಬಳಿಕ ನಿರಂತರವಾಗಿ ಬಸ್ ಓಡಾಟ ನಡೆಯಲಿದೆ ಎಂದು ಅಶೋಕ್‌ಕುಮಾರ್ ರೈ ಹೇಳಿದರು.

ADVERTISEMENT

ಕಾಟುಕುಕ್ಕೆ ಭಾಗದಿಂದ ಬೆಟ್ಟಂಪಾಡಿ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಸಮಸ್ಯೆಗಳಾಗುತ್ತಿದ್ದು, ಈ ಭಾಗಕ್ಕೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ವ್ಯವಸ್ಥೆ ಮಾಡಬೇಕೆಂದು 1 ವರ್ಷದ ಹಿಂದೆಯೇ ಬೇಡಿಕೆ ಇತ್ತು. ಈ ಬೇಡಿಕೆಯನ್ನು ಈಡೇರಿಸಿದ್ದು, ಕೇರಳದ ಮಕ್ಕಳಿಗೂ ಶಕ್ತಿ ಯೋಜನೆಯಡಿ ಅವಕಾಶ ಕಲ್ಪಿಸಲಾಗುವುದು. ಈ ಭಾಗದಿಂದ ಸ್ಪಂದನೆ ವ್ಯಕ್ತವಾದರೆ ಪಾಣಾಜೆ ಭಾಗಕ್ಕೆ ಇನ್ನಷ್ಟು ಬಸ್‌ ಸಂಚಾರ ಆರಂಭಿಸಲಾಗುವುದು. ಕರ್ನಾಟಕ– ಕೇರಳ ಗಡಿಭಾಗದ ಮಧ್ಯದ ಹದಗೆಟ್ಟಿರುವ ರಸ್ತೆ ದುರಸ್ತಿಗೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

‘ನಮ್ಮಲ್ಲಿ ಬಸ್‌ನ ಕೊರತೆ ಇಲ್ಲ. ಆದರೆ, ಚಾಲಕ ಮತ್ತು ನಿರ್ವಾಹಕರ ಕೊರತೆ ಇದೆ. ಪುತ್ತೂರಿಗೆ 500 ಮಂದಿ ಚಾಲಕ ಕಂ ನಿರ್ವಾಹಕರ ಬೇಡಿಕೆ ಮುಂದಿಡಲಾಗಿದ್ದು, ಒಂದು ತಿಂಗಳೊಳಗೆ ನಿಯೋಜನೆ ಆಗುವ ನಿರೀಕ್ಷೆ ಇದೆ. ಆ ಬಳಿಕ ಬೇಡಿಕೆ ಇರುವ ಎಲ್ಲ ಕಡೆಗಳಿಗೂ ಬಸ್ ಸಂಚಾರ ಕಲ್ಪಿಸಲಾಗುವುದು. ಸ್ವರ್ಗಕ್ಕೂ ಬಸ್‌ ಸಂಚಾರದ ಬೇಡಿಕೆ ಇದ್ದು, ಈ ಹಿಂದೆ ಓಡಾಡುತ್ತಿದ್ದ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಬಸ್ ಓಡಾಟಕ್ಕೆ ತೊಂದರೆ ನೀಡುವುದು, ಚಾಲಕ, ನಿರ್ವಾಹಕರಿಗೆ ಅಡ್ಡಿ ಮಾಡಿದರೆ ಸಂಚಾರ ಸ್ಥಗಿತಗೊಳಿಸಬೇಕಾಗುತ್ತದೆ ಎಂದರು.

ಪಾಣಾಜೆ ಗ್ರಾ.ಪಂ.ಅಧ್ಯಕ್ಷೆ ಮೈಮನುತ್ತುಲ್ ಮೆಹರಾ, ಉಪಾಧ್ಯಕ್ಷೆ ಜಯಶ್ರೀ, ಕೆಎಸ್‌ಆರ್‌ಟಿಸಿ ಜಿಲ್ಲಾ ಮ್ಯಾನೇಜರ್‌ ಜೈಶಾಂತ್, ಪುತ್ತೂರು ಘಟಕದ ಮ್ಯಾನೇಜರ್ ಸುಬ್ರಹ್ಮಣ್ಯ ಪ್ರಕಾಶ್, ಅಧಿಕಾರಿ ನಟರಾಜ್, ಪಾಣಾಜೆ ಗ್ರಾ.ಪಂ.ಸದಸ್ಯೆ ವಿಮಲಾ ಮಹಾಲಿಂಗ ನಾಯ್ಕ, ಪಾಣಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಸದಾನಂದ ನಾಯ್ಕ್, ಕಾಟುಕುಕ್ಕೆ ಸುಬ್ರಾಯ ದೇವಸ್ಥಾನದ ಮಾಜಿ ಮೊಕ್ತೇಸರ ನಾರಾಯಣ ಮವ್ವಾರ್, ಎಣ್ಮಕಜೆ ಗ್ರಾ.ಪಂ.ಸದಸ್ಯ ರಾಮಚಂದ್ರ, ಪ್ರಮುಖರಾದ ವಿಶ್ವನಾಥ ರೈ ಕಡಮಾಜೆ, ಲಕ್ಷ್ಮೀನಾರಾಯಣ ರೈ ಕೆದಂಬಾಡಿ, ಬಾಬು ರೈ ಕೋಟೆ, ಜಗನ್ಮೋಹನ್ ರೈ ಸೂರಂಬೈಲು, ಅಬೂಬಕ್ಕರ್ ಆರ್ಲಪದವು, ರಘುನಾಥ ರೈ ಪಡ್ಡಂಬೈಲು, ಸದಾಶಿವ ರೈ ಸೂರಂಬೈಲು, ಪದ್ಮನಾಭ ರೈ ಸೂರಂಬೈಲು ಭಾಗವಹಿಸಿದ್ದರು.

ಎಣ್ಮಕಜೆ ಗ್ರಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್ ಸ್ವಾಗತಿಸಿದರು. ಯುವ ಕಾಂಗ್ರೆಸ್ ರಾಜ್ಯ ಘಟಕದ ಕಾರ್ಯದರ್ಶಿ ಶ್ರೀಪ್ರಸಾದ್ ಪಾಣಾಜೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.