ಮಂಗಳೂರು: ಪ್ರತಿ ವರ್ಷ ದೀಪಾವಳಿಯ ಅಂಗವಾಗಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಕಾಂಗ್ರೆಸ್ ಮುಖಂಡ ಐವನ್ ಡಿಸೋಜ ಅವರು ಈ ಬಾರಿ ಭಾವೈಕ್ಯ ಸಂಗಮ ಎಂಬ ಕಾರ್ಯಕ್ರಮದಡಿ ಕದ್ರಿ ಉದ್ಯಾನದಲ್ಲಿ ಕುಣಿತ ಭಜನೆ ಸ್ಪರ್ಧೆ ಏರ್ಪಡಿಸಿದ್ದಾರೆ ಎಂದು ಕಾರ್ಯಕ್ರಮದ ಆಯೋಜನಾ ಸಮಿತಿ ಮುಖಂಡ ಜೆ.ನಾಗೇಂದ್ರ ಕುಮಾರ್ ತಿಳಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇದೇ 12ರಂದು ಸಂಜೆ 4 ಗಂಟೆಯಿಂದ ಕಾರ್ಯಕ್ರಮ ವೈವಿಧ್ಯ ನಡೆಯಲಿದ್ದು ಗೂಡುದೀಪ ಸ್ಪರ್ಧೆ ಮತ್ತು ಚಿತ್ರಕಲಾ ಸ್ಪರ್ಧೆಯೂ ಏರ್ಪಡಿಸಲಾಗಿದೆ ಎಂದರು.
ಕುಣಿತ ಭಜನೆಯ ಮೂಲಕ ಆರಂಭವಾಗಲಿರುವ ಕಾರ್ಯಕ್ರಮವನ್ನು ಮೂಡುಬಿದಿರೆಯ ಕೆಮ್ಮಾರಿನ ಸಾಂದೀಪನಿ ಮಠದ ಈಶಾ ವಿಠ್ಠಲದಾಸ ಸ್ವಾಮೀಜಿ ಉದ್ಘಾಟಿಸುವರು. ರಾಜ್ಯ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಕಾರ್ಯದರ್ಶಿ ರಿಚರ್ಡ್ ವಿನ್ಸೆಂಟ್ ಡಿಸೋಜ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಕೆ ಮಂತಾದವರು ಪಾಲ್ಗೊಳ್ಳುವರು ಎಂದು ಅವರು ವಿವರಿಸಿದರು.
ಚಿತ್ರಕಲಾ ಸ್ಪರ್ಧೆ 1ರಿಂದ 7ನೇ ತರಗತಿ, 8ರಿಂದ 12ನೇ ತರಗತಿ ಮತ್ತು 12ಕ್ಕಿಂತ ಮೇಲಿನ ತರಗತಿಯವರ ವಿಭಾಗಗಳಲ್ಲಿ ನಡೆಯಲಿದೆ. ಸಾಂಪ್ರದಾಯಿಕ ಮತ್ತು ಆಧುನಿಕ ಶೈಲಿಯಲ್ಲಿ ಗೂಡುದೀಪ ಸ್ಪರ್ಧೆ ನಡೆಯಲಿದೆ ಎಂದು ಅವರು ತಿಳಿಸಿದರು.
ಭಾಸ್ಕರ ರಾವ್, ಮಹೇಶ್ ಕೋಡಿಕಲ್, ವಿವೇಕ್ ರಾಜ್ ಪೂಜಾರಿ, ವೀಣಾ, ಮನೋರಾಜ್ ಮತ್ತು ಸತೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.