ADVERTISEMENT

ಸ್ವಾರ್ಥ ಬಿಡಿ: ಸಮಾಜದ ಹಿತ ಯೋಚಿಸಿ: ಅಮೋಘಕೀರ್ತಿ ಮುನಿ ಮಹಾರಾಜರು

ವಿದ್ಯಾರ್ಥಿ ನಿಲಯದ ಉದ್ಘಾಟನಾ ಸಮಾರಂಭದಲ್ಲಿ ಅಮೋಘಕೀರ್ತಿ ಮುನಿ ಮಹಾರಾಜರು

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2024, 5:35 IST
Last Updated 8 ಮಾರ್ಚ್ 2024, 5:35 IST
<div class="paragraphs"><p>ಮಂಗಳೂರಿನ ಜೈಲ್ ರಸ್ತೆಯಲ್ಲಿರುವ ಜೈನ ವಿದ್ಯಾರ್ಥಿ ನಿಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಮೋಘಕೀರ್ತಿ ಮುನಿ ಮಹಾರಾಜರು ಮಾತನಾಡಿದರು</p></div>

ಮಂಗಳೂರಿನ ಜೈಲ್ ರಸ್ತೆಯಲ್ಲಿರುವ ಜೈನ ವಿದ್ಯಾರ್ಥಿ ನಿಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಮೋಘಕೀರ್ತಿ ಮುನಿ ಮಹಾರಾಜರು ಮಾತನಾಡಿದರು

   

ಮಂಗಳೂರು: ಮನುಷ್ಯನ ಜೀವನವು ಆಗಸದಲ್ಲಿ ಮೂಡುವ ಮಿಂಚಿನಂತೆ ಕ್ಷಣಭಂಗುರ. ಬದುಕಿದಷ್ಟು ಕಾಲ ಸ್ವಾರ್ಥವನ್ನು ತೊಡೆದು, ಪ್ರೀತಿ, ಸೌಹಾರ್ದ, ಪರೋಪಕಾರ ಗುಣದೊಂದಿಗೆ ಸಮಾಜದ ಹಿತದ ಬಗ್ಗೆ ಯೋಚಿಸಬೇಕು ಎಂದು ಅಮೋಘಕೀರ್ತಿ ಮುನಿ ಮಹಾರಾಜರು ಹೇಳಿದರು.

ಕಾರ್ಕಳ ಜೈನಧರ್ಮ ಜೀರ್ಣೋದ್ಧಾರಕ ಸಂಘದ ನೇತೃತ್ವದಲ್ಲಿ ನಗರದ ಜೈಲ್ ರಸ್ತೆಯಲ್ಲಿ ದಿವಂಗತ ಮಾಲ್ದಬೆಟ್ಟು ನೇಮಿರಾಜ ಪಡಿವಾಳರು ದಾನವಾಗಿ ನೀಡಿರುವ ಲಾರ್ಡ್ ಮಹಾವೀರ ಜೈನ್ ಬೋರ್ಡಿಂಗ್ ಆವರಣದಲ್ಲಿ ನಿರ್ಮಿಸಿರುವ ನೂತನ ವಿದ್ಯಾರ್ಥಿ ನಿಲಯದ ಉದ್ಘಾಟನಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ADVERTISEMENT

ಧನದ ರೂಪದಲ್ಲಿರಲಿ ಅಥವಾ ಆಸ್ತಿಯ ರೂಪದಲ್ಲಿರಲಿ ‘ಲಕ್ಷ್ಮಿ’ ಯಾವತ್ತಿಗೂ ಚಂಚಲೆ. ಸಂಪತ್ತಿನ ಬೆನ್ನತ್ತಿ ಜಗಳ, ಗಲಾಟೆ, ದ್ವೇಷದ ಭಾವಕ್ಕೆ ಒಳಗಾಗುವವರು ಅಜ್ಞಾನಿಗಳು. ಭೂಮಿಯನ್ನು ತ್ಯಜಿಸುವಾಗ ದೇಹ ಕೂಡ ಇಲ್ಲಿಯೇ ಅಂತ್ಯವಾಗುತ್ತದೆ. ಈ ಪ್ರಜ್ಞೆ ಬೆಳೆಸಿಕೊಂಡು, ಸಂಪತ್ತಿನ ದ್ವಿಗುಣದ ಬಗ್ಗೆ ಯೋಚಿಸದೆ, ಸಮಾಜದ ಹಿತದ ಬಗ್ಗೆ ಕೆಲಸ ಮಾಡಬೇಕು. ಸಂಘಟನೆಯಿಂದ ವಿಘಟನೆ ಆಗಬಾರದು. ಸಂಘಟಿತ ಸಮಾಜದಿಂದ ವಿಕಾಸ ಸಾಧ್ಯವಾಗುತ್ತದೆ ಎಂದು ಹೇಳಿದರು.

ಅಮರಕೀರ್ತಿ ಮಹಾರಾಜರು ಆಶೀರ್ವಚನ ನೀಡಿ, ‘ಜೀವನದಲ್ಲಿ ಹಣ, ಸಂಪತ್ತಿಗಾಗಿ ಸದಾ ಜಗಳವಾಗುತ್ತದೆ. ಆದರೆ, ಪ್ರಾಣ ತೊರೆಯುವ ವೇಳೆ ಸಂಪತ್ತು ನಮ್ಮ ಜತೆಗೆ ಬರುವುದಿಲ್ಲ. ನಾವು ನಮ್ಮ ಕುಟುಂಬದ ಜತೆಗೆ ಸಮಾಜದ ಅಭಿವೃದ್ಧಿ ಬಗ್ಗೆಯೂ ಯೋಚಿಸಬೇಕು’ ಎಂದರು.

ಮೂಡುಬಿದಿರೆ ಜೈನ ಮಠದ  ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಸಮುದಾಯದ ಹಿರಿಯರು ಮಾಡಿರುವ ಮಾದರಿ ಕಾರ್ಯಗಳು ಇಂದಿನ ತಲೆಮಾರಿಗೆ ಆದರ್ಶವಾಗಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರಕುಮಾರ್ ಮಾತನಾಡಿ, ಪ್ರತಿಯೊಬ್ಬರೂ ಆದಾಯದ ಒಂದು ಭಾಗವನ್ನು ಸಮಾಜದ ಶ್ರೇಯೋಭಿವೃದ್ಧಿಗೆ ಮೀಸಲಿಡಬೇಕು ಎಂದರು.

ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಶಾಸಕ ವೇದವ್ಯಾಸ ಕಾಮತ್, ಮಾಜಿ ಸಚಿವ ಅಭಯಚಂದ್ರ ಜೈನ್, ಜೈನ ಸಮುದಾಯದ ಪ್ರಮುಖರಾದ ಸುರೇಶ್ ಬಲ್ಲಾಳ್, ಎಂ.ಕೆ. ವಿಜಯಕುಮಾರ್, ಜೀವಂಧರ್ ಬಲ್ಲಾಳ್,  ಡಾ. ಮಾಲತಿ ಹೆಗ್ಡೆ, ಎನ್. ಜಗತ್ಪಾಲ್, ಎಂ. ಸುಧೀರ್, ಸಿ.ಕೆ. ಬಲ್ಲಾಳ್ ಇದ್ದರು. ಪುಷ್ಪರಾಜ ಜೈನ್ ಸ್ವಾಗತಿಸಿದರು.

ಲಾರ್ಡ್ ಮಹಾವೀರ ಜೈನ್ ಬೋರ್ಡಿಂಗ್ ಆವರಣದಲ್ಲಿ ಬಸದಿ ಹಾಗೂ ಸಭಾಭವನ ನಿರ್ಮಾಣ ಶೀಘ್ರದಲ್ಲಿ ಆಗಲಿ.
ಅಮೋಘಕೀರ್ತಿ ಮುನಿ ಮಹಾರಾಜರು ಜೈನ ಮುನಿ

ತ್ಯಾಗಿಗಳ ಭವನ

ಕಾರ್ಕಳ ಜೈನಧರ್ಮ ಜೀರ್ಣೋದ್ಧಾರಕ ಸಂಘದ ಖಾತೆಗೆ ಈವರೆಗೆ ₹2.75 ಕೋಟಿ ಜಮಾ ಆಗಿದ್ದು ವಿದ್ಯಾರ್ಥಿ ನಿಲಯಕ್ಕೆ ₹2.35 ಕೋಟಿ ವೆಚ್ಚ ಮಾಡಲಾಗಿದೆ. ಇನ್ನೂ ಸಣ್ಣಪುಟ್ಟ ಕೆಲಸಗಳು ಬಾಕಿ ಇದ್ದು ಒಂದೆರಡು ತಿಂಗಳುಗಳಲ್ಲಿ ಪೂರ್ಣಗೊಳಿಸಲಾಗುವುದು. 19 ಕೊಠಡಿಗಳನ್ನು ಒಳಗೊಂಡಿರುವ ಕಟ್ಟಡದಲ್ಲಿ ಮುನಿಗಳ ವಾಸ್ತವ್ಯಕ್ಕೆ ತ್ಯಾಗಿಗಳ ಭವನ ನಿರ್ಮಿಸಲಾಗಿದೆ ಎಂದು ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಪುಷ್ಪರಾಜ್ ಜೈನ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.