ADVERTISEMENT

ಮೂಡುಬಿದಿರೆ | ಜಲಜೀವನ್‌ ಮಿಷನ್ ಕಾಮಗಾರಿ ಸ್ಥಗಿತಗೊಳಿಸಿ: ಪುರಸಭೆ ಸದಸ್ಯರ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 5:00 IST
Last Updated 16 ಜುಲೈ 2025, 5:00 IST
ಮೂಡುಬಿದಿರೆ ಪುರಸಭೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡಿದ್ದ ಸದಸ್ಯರು
ಮೂಡುಬಿದಿರೆ ಪುರಸಭೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡಿದ್ದ ಸದಸ್ಯರು    

ಮೂಡುಬಿದಿರೆ: ಪುರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿ ಅಸಮರ್ಪಕವಾಗಿದ್ದು, ಸಮಸ್ಯೆಯೆ ಹೆಚ್ಚಾಗಿದೆ. ಈ ಕಾಮಗಾರಿಯನ್ನು ಸ್ಥಗಿತಗೊಳಿಸಲು ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಪುರಸಭೆ ಸದಸ್ಯರು ‌ಆಗ್ರಹಿಸಿದರು.

ಪುರಸಭೆ ಅಧ್ಯಕ್ಷೆ ಜಯಶ್ರೀ ಕೇಶವ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸುರೇಶ್ ಪ್ರಭು, ಜಲಜೀವನ್‌ ಮಿಷನ್ ಕಾಮಗಾರಿಗೆ ತೆಗೆಯಲಾದ ಗುಂಡಿಗಳನ್ನು ಸರಿಯಾಗಿ ಮುಚ್ಚದೆ ವಾಹನಗಳ ಸಂಚಾರ, ಸಾರ್ವಜನಿಕರ ಓಡಾಟಕ್ಕೆ ತೊಂದರೆ ಆಗಿದೆ. ಸರಿಪಡಿಸಲು ಹೇಳಿದರೂ ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿರೋಧ ಪಕ್ಷದ ನಾಯಕ ಪಿ.ಕೆ.ಥಾಮಸ್ ಮಾತನಾಡಿ, ಜಲಜೀವನ್ ಮಿಷನ್‌ನ ಕಾಮಗಾರಿಯಲ್ಲಿ ಕೆಲವೆಡೆ 9 ಇಂಚ್‌ ಆಳದಲ್ಲಿ ಪೈಪ್ ಅಳವಡಿಸಿದ್ದಾರೆ. ಇದರ ಪರಿಶೀಲನೆ ಆಗಿಲ್ಲ ಎಂದರು.

ADVERTISEMENT

ಸುರೇಶ್ ಕೋಟ್ಯಾನ್, ಪ್ರಸಾದ್ ಕುಮಾರ್, ರೂಪಾ ಶೆಟ್ಟಿ ಸೇರದಿಂತೆ ಸದಸ್ಯರು ಧ್ವನಿಗೂಡಿಸಿದರು.

ಕಾಮಗಾರಿ ಸ್ಥಗಿತಗೊಳಿಸಲು ಸಂಬಂಧಪಟ್ಟ ಇಲಾಖೆಗೆ ನೋಟಿಸ್‌ ನೀಡುವುದಾಗಿ ಮುಖ್ಯಾಧಿಕಾರಿ ಇಂದು ಸಭೆಗೆ ತಿಳಿಸಿದರು.

ಬೀದಿ ನಾಯಿಗಳ ಉಪಟಳದ ಬಗ್ಗೆ ರಾಜೇಶ್ ನಾಯಕ್, ಕೊರಗಪ್ಪ, ರೂಪಾ ಶೆಟ್ಟಿ ಪ್ರಸ್ತಾಪಿಸಿದರು.

ಬೀದಿ ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲು ಟೆಂಡರ್ ಕರೆಯಲಾಗುವುದು ಎಂದು ಉಪಾಧ್ಯಕ್ಷ ನಾಗರಾಜ ಪೂಜಾರಿ ತಿಳಿಸಿದರು.

ವಿದ್ಯಾಗಿರಿಯ ವಸತಿ ಸಮುಚ್ಛಯದ ಗಲೀಜು ನೀರನ್ನು ರಾತ್ರಿ ಸಾರ್ವಜನಿಕ ಸ್ಥಳಕ್ಕೆ ಬಿಡಲಾಗುತ್ತಿದೆ. ಪುರಸಭೆಗೆ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ ಎಂದು ದಿವ್ಯಾ ಜಗದೀಶ್ ಹೇಳಿದರು.

ಸಾರ್ವಜನಿಕ ಸ್ಥಳಕ್ಕೆ ಬಿಡುವ ತ್ಯಾಜ್ಯ ನೀರಿನ ಪೈಪ್‌ ಬಂದ್ ಮಾಡುವ ಹಾಗೂ ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡುವ ಬಗ್ಗೆ ತೀರ್ಮಾನಿಸಲಾಯಿತು. ಎಲ್ಲ ವಸತಿ ಸಮುಚ್ಛಯಗಳಲ್ಲಿ ಎಸ್‌ಟಿಪಿ ಅಳವಡಿಸುವುದನ್ನು ಕಡ್ಡಾಯಗೊಳಿಸಬೇಕು ಎಂದು ಸದಸ್ಯರು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.