ADVERTISEMENT

ಉಪ್ಪಿನಂಗಡಿ | ಶುದ್ಧೀಕರಣಗೊಂಡ ನೀರೇ ಬೇಕು: ಗ್ರಾಮಸ್ಥರ ಅಹವಾಲು

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2024, 14:02 IST
Last Updated 20 ಸೆಪ್ಟೆಂಬರ್ 2024, 14:02 IST
ಉಪ್ಪಿನಂಗಡಿ ಸಮೀಪದ 34-ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಪಂಚಾಯಿತಿ ಆಡಳಿತ ಮತ್ತು ನಗರ ಸಭೆಯ ಜಲಸಿರಿ ಯೋಜನೆಯ ಅಧಿಕಾರಿಗಳ ಸಭೆಯಲ್ಲಿ ಮಾದೇಶ್ ಮಾತನಾಡಿದರು
ಉಪ್ಪಿನಂಗಡಿ ಸಮೀಪದ 34-ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಪಂಚಾಯಿತಿ ಆಡಳಿತ ಮತ್ತು ನಗರ ಸಭೆಯ ಜಲಸಿರಿ ಯೋಜನೆಯ ಅಧಿಕಾರಿಗಳ ಸಭೆಯಲ್ಲಿ ಮಾದೇಶ್ ಮಾತನಾಡಿದರು   

ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾಮದಲ್ಲಿ ಪೂರೈಕೆಯಾಗುತ್ತಿರುವ ಕುಡಿಯುವ ನೀರು ಸೇವಿಸಲು ಯೋಗ್ಯವಿಲ್ಲ ಎಂಬುದು ಪ್ರಯೋಗಾಲಯದ ವರದಿಯಿಂದ ಸಾಬೀತಾಗಿದೆ. ನಮ್ಮ ಗ್ರಾಮದಿಂದ ಪುತ್ತೂರು ನಗರಸಭೆಗೆ ಪೂರೈಕೆಯಾಗುವ ಶುದ್ಧ ಕುಡಿಯುವ ನೀರನ್ನು ನಮ್ಮ ಗ್ರಾಮಕ್ಕೂ ನೀಡಬೇಕು. ಇಲ್ಲದೆ ಇದ್ದರೆ ನೆಕ್ಕಿಲಾಡಿಯಲ್ಲಿರುವ ಪುತ್ತೂರು ನಗರ ಸಭೆಯ ಪಂಪ್ ಹೌಸ್‌ಗೆ ಬೀಗ ಹಾಕಿ ಪ್ರತಿಭಟಿಸುವುದಾಗಿ 34-ನೆಕ್ಕಿಲಾಡಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

34-ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಪಂಚಾಯಿತಿ ಅಧ್ಯಕ್ಷೆ ಸುಜಾತಾ ರೈ ಅಧ್ಯಕ್ಷತೆಯಲ್ಲಿ ನಡೆದ ಪಂಪ್ ಹೌಸ್ ರಸ್ತೆ ದುರಸ್ತಿ ಹಾಗೂ ಜಲಸಿರಿ ಯೋಜನೆಯಡಿ ನೆಕ್ಕಿಲಾಡಿ ಗ್ರಾಮಕ್ಕೆ ಕುಡಿಯುವ ನೀರು ಒದಗಿಸುವ ಕುರಿತು ಗ್ರಾಮಸ್ಥರ ಮತ್ತು ನಗರಸಭೆ ಅಧಿಕಾರಿಗಳ ಸಭೆಯಲ್ಲಿ ಈ ಎಚ್ಚರಿಕೆ ನೀಡಿದರು.

ಗ್ರಾಮಸ್ಥ ಅಸ್ಕರ್ ಅಲಿ ಮಾತನಾಡಿ, ‘ನೆಕ್ಕಿಲಾಡಿ ಗ್ರಾಮದ ಜನರಿಗೆ ಶುದ್ಧ ಕುಡಿಯುವ ನೀರಿಗಾಗಿ ಮುಹಮ್ಮದ್ ರಫೀಕ್ ಎಂಬುವರು ಜನತಾ ನ್ಯಾಯಾಲಯದ ಮೆಟ್ಟಿಲೇರಿದ್ದು, ಅವರ ಪರವಾಗಿ ತೀರ್ಪು ಬಂದಿದೆ. ಇಲ್ಲಿಗೆ ಕುಡಿಯುವ ನೀರು ಪೂರೈಸುತ್ತೇವೆ ಎಂದು ನಗರ ಸಭೆ ಜನತಾ ನ್ಯಾಯಾಲಯಕ್ಕೆ ಅಫಿಡವಿತ್ ನೀಡಿದ್ದು, ಜಲಸಿರಿ ಯೋಜನೆ ಅನುಷ್ಠಾನ ಆಗುವಾಗ ಇಲ್ಲಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುವುದು ಎಂದು ತಿಳಿಸಿದ್ದರು. ಆದರೆ, ಜಲಸಿರಿ ಯೋಜನೆ ಅನುಷ್ಠಾನ ಆಗಿದ್ದರೂ, ಗ್ರಾಮಕ್ಕೆ ನೀರು ಪೂರೈಕೆ ಆಗುತ್ತಿಲ್ಲ’ ಎಂದರು.

ADVERTISEMENT

ಪುತ್ತೂರು ನಗರ ಸಭೆಯ ಜಲಸಿರಿ ಯೋಜನೆಯ ಕಾರ್ಯನಿರ್ವಾಹಕ ಎಂಜಿನಿಯರ್ ಮಾದೇಶ್ ಪ್ರತಿಕ್ರಿಯಿಸಿ, ಬಹುಗ್ರಾಮ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಸಭೆ ನಡೆದಿದೆ. ನೆಕ್ಕಿಲಾಡಿ ಗ್ರಾಮಕ್ಕೆ ಡಿಬಿಒಟಿ ಆಧಾರಿತ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ ಸೌಲಭ್ಯ ಇದೆ. ಈ ಕಾರಣದಿಂದ ಪುತ್ತೂರು ನಗರದಲ್ಲಿ ಅನುಷ್ಠಾನವಾಗುತ್ತಿರುವ ಜಲಸಿರಿ ಯೋಜನೆಯಡಿಯ ನೀರು ಪೂರೈಕೆಯ ಅಗತ್ಯ ಇರುವುದಿಲ್ಲ ಎಂಬ ಮಾಹಿತಿ ಆಧರಿಸಿ ಕೆಯುಐಡಿಎಫ್‌ಸಿ ಇಲಾಖೆಯಲ್ಲಿ ಇದನ್ನು ಪರಿಗಣಿಸುವ ಅಗತ್ಯ ಇಲ್ಲ ಎಂದು ನಿರ್ಧರಿಸಲಾಗಿದೆ. ಈ ಬಗ್ಗೆ ನಗರ ಸಭೆಗೂ ಸ್ಪಷ್ಟೀಕರಣ ನೀಡಲಾಗಿದೆ. ಹಾಗಾಗಿ ಜಲಸಿರಿ ಯೋಜನೆಯಡಿ ನೀರು ನೀಡಿಲ್ಲ’ ಎಂದರು.

ರೂಪೇಶ್ ಮಾತನಾಡಿ, ಇಲ್ಲಿನ ವಾಸ್ತವ ಅರಿಯದೆ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದಕ್ಕೆ ಮಾನ್ಯತೆ ಕೊಡಬೇಕಾಗಿಲ್ಲ ಎಂದರು.

ಅಸ್ಕರ್ ಅಲಿ, ಅಬ್ದುಲ್ ರಹಿಮಾನ್ ಯುನಿಕ್, ನಮ್ಮ ಗ್ರಾಮಕ್ಕೆ ನಗರಸಭೆಗೆ ಪೂರೈಕೆಯಾಗುವ ಜಲಸಿರಿಯ ನೀರು ಪೂರೈಕೆ ಮಾಡಬೇಕು ಎಂದು ಪಟ್ಟು ಹಿಡಿದರು.

ಪಿಡಿಒ ಸತೀಶ್ ಬಂಗೇರ ಪ್ರತಿಕ್ರಿಯಿಸಿ ಬೊಳಂತಿಲದಲ್ಲಿ ಎರಡು ಕೊಳವೆ ಬಾವಿಗಳ ನೀರಿನಲ್ಲಿ ಕಬ್ಬಿಣದ ಅಂಶ ಹೆಚ್ಚು ಇರುವುದರಿಂದ ಕುಡಿಯಲು ಯೋಗ್ಯವಲ್ಲ ಎಂದು ವರದಿ ಬಂದಿದೆ. ಮಂಗಳೂರಿನಿಂದ ತಂತ್ರಜ್ಞರನ್ನು ಕರೆಸಿ ಶುದ್ಧೀಕರಿಸಲಾಗಿದೆ. ಇನ್ನೂ 15 ವರ್ಷ ಸಮಸ್ಯೆ ಇಲ್ಲ ಎಂದು  ಅವರು ತಿಳಿಸಿದ್ದಾರೆ ಎಂದರು.

ನೀರು ನೀಡುವ ಸಂಬಂಧ ಗ್ರಾಮಸ್ಥರು ನಿರ್ಣಯ ಮಾಡಿ ಸರ್ಕಾರಕ್ಕೆ ಕಳುಹಿಸೋಣ ಎಂದು ಅಸ್ಕರ್ ಅಲಿ ತಿಳಿಸಿದರು. ಗ್ರಾಮಸ್ಥರಾದ ಮುಹಮ್ಮದ್ ರಫೀಕ್, ಅನಿ ಮಿನೇಜಸ್, ಅಝೀಝ್ ಪಿ.ಟಿ., ಕಲಂದರ್ ಶಾಫಿ, ಶಬೀರ್ ಅಹಮ್ಮದ್, ಝಕಾರಿಯಾ ಕೊಡಿಪ್ಪಾಡಿ ಇದನ್ನು ಬೆಂಬಲಿಸಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹರೀಶ್ ಡಿ., ನಗರಸಭೆಯ ಎಂಜಿನಿಯರ್ ವಸಂತ, ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಶಾಂತ್ ಎನ್., ವಿಜಯಕುಮಾರ್, ವೇದಾವತಿ, ಹರೀಶ್ ಕೆ. ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.