ADVERTISEMENT

ಮಂಗಳೂರು| ಸುಳ್ಳು ಸುದ್ದಿಗಳಿಗೆ ಜನರೇ ಕಡಿವಾಣ ಹಾಕಲಿ: ಜಯಪ್ರಕಾಶ ಹೆಗ್ಡೆ

‘ಭಾರತ ಮುಸ್ಲಿಂ ರಾಷ್ಟ್ರವಾಗುವುದೇ?’ ಕೃತಿ ಬಿಡುಗಡೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 3:16 IST
Last Updated 2 ಮಾರ್ಚ್ 2026, 3:16 IST
<div class="paragraphs"><p>ಸಮಾನ ಮನಸ್ಕರು ಮತ್ತು ಎಂ.ಜಿ.ಹೆಗಡೆ ಗೆಳೆಯರ ಬಳಗದ ಆಶ್ರಯದಲ್ಲಿ ಮಂಗಳೂರಿನಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ (ಬಲ ತುದಿಯಲ್ಲಿರುವವರು) ಲೇಖಕ ಎಂ.ಜಿ.ಹೆಗಡೆ ಅವರ ‘ಭಾರತ ಮುಸ್ಲಿಂ ರಾಷ್ಟ್ರವಾಗುವುದೇ?’ ಕೃತಿ ಬಿಡುಗಡೆ ಮಾಡಲಾಯಿತು. </p></div>

ಸಮಾನ ಮನಸ್ಕರು ಮತ್ತು ಎಂ.ಜಿ.ಹೆಗಡೆ ಗೆಳೆಯರ ಬಳಗದ ಆಶ್ರಯದಲ್ಲಿ ಮಂಗಳೂರಿನಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ (ಬಲ ತುದಿಯಲ್ಲಿರುವವರು) ಲೇಖಕ ಎಂ.ಜಿ.ಹೆಗಡೆ ಅವರ ‘ಭಾರತ ಮುಸ್ಲಿಂ ರಾಷ್ಟ್ರವಾಗುವುದೇ?’ ಕೃತಿ ಬಿಡುಗಡೆ ಮಾಡಲಾಯಿತು.

   

ಮಂಗಳೂರು: ‘ಸತ್ಯಕ್ಕೆ ದೂರವಾದ ವಿಚಾರಗಳನ್ನು ಹಬ್ಬಿಸುವ ಪರಿಪಾಟ ಹೆಚ್ಚುತ್ತಿದೆ. ನಿರ್ದಿಷ್ಟ ಸಂಗತಿ ಬಗ್ಗೆ ಏನನ್ನೂ ತಿಳಿಯದೆಯ ಆ ಬಗ್ಗೆ ಮಾತನಾಡುತ್ತಾರೆ. ಇಂತಹವರ ಸಂಖ್ಯೆ ಜಾಸ್ತಿಯಾದರೆ ದೇಶದ ಪರಿಸ್ಥಿತಿ ಏನಾಗಬೇಡ. ಜನರೇ ಸರಿಯಾದ ನಿರ್ಧಾರ ತೆಗೆದುಕೊಂಡು ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಕಾಂಗ್ರೆಸ್‌ ಮುಖಂಡ ಜಯಪ್ರಕಾಶ್‌ ಹೆಗ್ಡೆ  ಹೇಳಿದರು.

ಸಮಾನ ಮನಸ್ಕರು ಮತ್ತು ಎಂ.ಜಿ.ಹೆಗಡೆ ಗೆಳೆಯರ ಬಳಗದ ಆಶ್ರಯದಲ್ಲಿ ಇಲ್ಲಿ ಭಾನುವಾರ ಏರ್ಪಡಿಸಿದ್ದ ಕಾಂಗ್ರೆಸ್ ರಾಜ್ಯ ಘಟಕದ ವಕ್ತಾರ ಎಂ.ಜಿ.ಹೆಗಡೆ ಅವರ ‘ಭಾರತ ಮುಸ್ಲಿಂ ರಾಷ್ಟ್ರವಾಗುವುದೇ?’ ಕೃತಿ ಬಿಡುಗಡೆ ಹಾಗೂ ‘ಗಾಂಧಿ ಮನೆಯ ಅವಲಕ್ಕಿ ಸರ ಕಾದಂಬರಿ ಪರಿಚಯ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ADVERTISEMENT

‘ಹಿಂದೂಗಳು ಮೂರು ಮಕ್ಕಳನ್ನು ಹೆರಬೇಕು, ಹತ್ತು ಮಕ್ಕಳನ್ನು ಹೆರಬೇಕು ಎಂದೆಲ್ಲ ಆರ್‌ಎಸ್‌ಎಸ್‌ನವರು ಹೇಳುತ್ತಾರೆ. ಆದರೆ, ಆರ್‌ಎಸ್ಎಸ್ ಜೊತೆಯಲ್ಲಿ ಇರುವವರು ಅಷ್ಟು ಮಕ್ಕಳನ್ನು ಹೊಂದಿದ್ದಾರೆಯೆ’ಎಂದು ಪ್ರಶ್ನಿಸಿದರು.

‘ದೇಶದಲ್ಲಿ ಮೊಗಲರ ಆಳ್ವಿಕೆ ಬಳಿಕ ಮುಸ್ಲಿಮರ ಸಂಖ್ಯೆ ಎಷ್ಟು ಜಾಸ್ತಿ ಆಗಿದೆ, ಸ್ವಾತಂತ್ರ್ಯ ಬಂದ ಬಳಿಕ‌ ಎಷ್ಟು ಜಾಸ್ತಿ ಆಗಿದೆ ಎಂಬ ನಿಖರ ವಿವರಗಳ ಮೂಲಕ ಎಂ.ಜಿ.ಹೆಗಡೆ ಅವರು ಸುಳ್ಳು ಹರಡುವವರಿಗೆ ಉತ್ತರ ಕೊಟ್ಟಿದ್ದಾರೆ. ಇಂತಹ ವಿಚಾರಗಳನ್ನು ಜನರಿಗೆ ತಲುಪಿಸಿ, ಅರ್ಥಮಾಡಿಸಬೇಕು’ ಎಂದರು.  

ಕೆಪಿಸಿಸಿ ಉಪಾಧ್ಯಕ್ಷ ಬಿ.ರಮಾನಾಥ ರೈ, ‘ಜನಾಂಗೀಯ ಘರ್ಷಣೆಯಿಂದ ಬಳಲುವ ದೇಶ ಉದ್ಧಾರವಾಗಲು ಸಾಧ್ಯವಿಲ್ಲ. ಸುಳ್ಳು ಸುದ್ದಿಗಳು ಜನರಲ್ಲಿ ಅಪನಂಬಿಕೆ‌ ಸೃಷ್ಟಿಸಿ, ಜನಾಂಗೀಯ ಘರ್ಷಣೆಗೆ ಕಾರಣವಾಗುತ್ತವೆ. ಇದರ ಗಂಭಿರತೆಯನ್ನು ಅರ್ಥ ಮಾಡಿಕೊಳ್ಳಬೇಕು.‌ ಮತ ಗಳಿಸುವ ಉದ್ದೇಶದಿಂದ ಜನರನ್ನು ತಪ್ಪು ದಾರಿಗೆ ಎಳೆಯಬಾರದು’ ಎಂದರು. 

ಪತ್ರಕರ್ತ ಎ.ಕೆ.ಕುಕ್ಕಿಲ, ‘ಜನಸಂಖ್ಯೆ, ಲವ್ ಜಿಹಾದ್‌, ಮಸೀದಿ, ಮದರಸಗಳನ್ನು ಮುಂದಿಟ್ಟುಕೊಂಡು ಮುಸ್ಲಿಮರನ್ನು ಗುರಿಯಾಗಿಸಿ ಕೆಲವು ಸಂಕಥನಗಳನ್ನು ಹೆಣೆಯಲಾಗಿದೆ. ಇಂತಹ ಪುಸ್ತಕಗಳು ಸುಳ್ಳುಗಳನ್ನು ಬಯಲುಗೊಳಿಸಲಿವೆ. 50ಕ್ಕಿಂತಲೂ ಕಡಿಮೆ ಪುಟಗಳ ಈ ಪುಸ್ತಕ‌ ಓದಿ 500 ಪ್ರಶ್ನೆಗಳಿಗೆ ಉತ್ತರ ಕೊಡುವ ಸಾಮರ್ಥ್ಯ ಗಳಿಸಬಹುದು’ ಎಂದರು. 

‘ಗಾಂಧಿ ಮನೆಯ ಅವಲಕ್ಕಿ ಸರ’ ಕಾದಂಬರಿ ಕುರಿತು ಲೇಖಕ ಪ್ರಭಾಕರ ನೀರುಮಾರ್ಗ ಮಾತನಾಡಿದರು.

ಲೇಖಕ ಎಂ.ಜಿ.ಹೆಗಡೆ ಭಾಗವಹಿಸಿದ್ದರು.  

ಕೃತಿ: ಭಾರತ ಮುಸ್ಲಿಂ ರಾಷ್ಟ್ರವಾಗುವುದೇ?

ಲೇಖಕ: ಎಂ.ಜಿ.ಹೆಗಡೆ

ಪ್ರಕಾಶಕರು: ಕ್ರಿಯಾ ಪಬ್ಲಿಷರ್ಸ್ ಬೆಂಗಳೂರು

ಪುಟ: 48

ದರ: ₹ 100

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.