ADVERTISEMENT

ಉಪ್ಪಿನಂಗಡಿ | ಕಡಬದಲ್ಲಿ ರಸ್ತೆಯೇ ನಿಲ್ದಾಣ; ಪ್ರಯಾಣಿಕರ ಪರದಾಟ

ತಾಲ್ಲೂಕು ಕೇಂದ್ರದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕಾಗಿ ವರ್ಷಗಳ ಪ್ರಯತ್ನ

ಸಿದ್ದಿಕ್ ನೀರಾಜೆ
Published 22 ಮೇ 2025, 6:10 IST
Last Updated 22 ಮೇ 2025, 6:10 IST
ಕಡಬ ಪೇಟೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಇಲ್ಲದ ಕಾರಣ, ಬಸ್‌ಗಳನ್ನು ಮುಖ್ಯರಸ್ತೆಯಲ್ಲೇ ನಿಲುಗಡೆ ಮಾಡಲಾಗುತ್ತಿದೆ
ಕಡಬ ಪೇಟೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಇಲ್ಲದ ಕಾರಣ, ಬಸ್‌ಗಳನ್ನು ಮುಖ್ಯರಸ್ತೆಯಲ್ಲೇ ನಿಲುಗಡೆ ಮಾಡಲಾಗುತ್ತಿದೆ   

ಕಡಬ(ಉಪ್ಪಿನಂಗಡಿ): ತಾಲ್ಲೂಕು ಕೇಂದ್ರವಾಗಿ ವರ್ಷಗಳು ಕಳೆದರೂ, ಕಡಬ ಪೇಟೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಾಣವಾಗಿಲ್ಲ. ನಿಲ್ದಾಣ ಇಲ್ಲದಿರುವುದರಿಂದ ಬಸ್‌ಗಳು ಮುಖ್ಯರಸ್ತೆಯಲ್ಲೇ ನಿಲುಗಡೆ ಮಾಡಿ, ಪ್ರಯಾಣಿಕರನ್ನು ಇಳಿಸಿ– ಹತ್ತಿಸಿಕೊಂಡು ಹೋಗುತ್ತಿವೆ. ಟ್ರಿಪ್‌ ಮುಗಿಸಿಕೊಂಡು ಬರುವ ಬಸ್‌ಗಳಿಗೆ ರಾತ್ರಿ ವೇಳೆ  ಇದೇ ರಸ್ತೆ ಬದಿಯೇ ಡಿಪೊ ಆಗಿದೆ. ಪ್ರಯಾಣಿಕರು ಮಾತ್ರವಲ್ಲ, ಚಾಲಕ– ನಿರ್ವಾಹಕರಿಗೂ ತಂಗಲು ಸರಿಯಾದ ವ್ಯವಸ್ಥೆ ಇಲ್ಲದೆ ಅವರೂ ನರಕಯಾತನೆ ಅನುಭವಿಸುವಂತಾಗಿದೆ.

ಕಡಬ ತಾಲ್ಲೂಕು ಕೇಂದ್ರವಾದ ಬಳಿಕ ಪೇಟೆ ವಿಸ್ತರಿಸಿದೆ. ಜನದಟ್ಟಣೆಯೂ ಹೆಚ್ಚಿದೆ. ಸಮೀಪದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬರುವ ಭಕ್ತರು, ಪ್ರವಾಸಿಗರು  ಸೇರಿದಂತೆ ನಿತ್ಯ ಕಡಬ ಪೇಟೆಯ ಮೂಲಕ ಅಪಾರ ಸಂಖ್ಯೆಯ ಜನರು ಬಸ್‌ಗಳಲ್ಲಿ ಸಂಚರಿಸುತ್ತಾರೆ. ಆದರೆ, ಕಡಬ ಪೇಟೆಯಲ್ಲಿ ಪ್ರಯಾಣಿಕರು ಬಸ್‌ಗಾಗಿ ರಸ್ತೆ ಬದಿಯಲ್ಲೇ ಕಾಯಬೇಕಿದೆ.

ಹಲವು ವರ್ಷಗಳ ಹಿಂದೆ ಇಲ್ಲಿ ನಿರ್ಮಿಸಲಾದ 10 ರಿಂದ 15 ಮಂದಿ ನಿಲ್ಲಬಹುದಾದ ಚಿಕ್ಕ ತಂಗುದಾಣ ಇದೆ. ಆದರೆ, ಪ್ರಯಾಣಿಕರಲ್ಲಿ ಹೆಚ್ಚಿನವರು ರಸ್ತೆ ಬದಿಯಲ್ಲೇ ನಿಲ್ಲಬೇಕು. ಬೆಳಿಗ್ಗೆ ಮತ್ತು ಸಂಜೆ ಶಾಲಾ ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅಕ್ಕಪಕ್ಕದ ಅಂಗಡಿ ಮುಂಗಟ್ಟುಗಳ ಬದಿಯಲ್ಲಿ ಬಸ್ಸಿಗಾಗಿ ಕಾಯುವ ದೃಶ್ಯಗಳು ಸಾಮಾನ್ಯವಾಗಿದೆ.

ADVERTISEMENT

ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲದೆ, ಜೀಪು, ಟ್ಯಾಕ್ಸಿ, ಮಿನಿ ಬಸ್‌ಗಳು ಕಡಬದಿಂದ ಉಪ್ಪಿನಂಗಡಿ, ಸುಬ್ರಹ್ಮಣ್ಯ ಕಡೆಗೆ ಪ್ರಯಾಣಿಕರನ್ನು ಕರೆದೊಯ್ಯುತ್ತವೆ. ದಿನಕ್ಕೆ ಸಾವಿರಾರು ಮಂದಿ ಪ್ರಯಾಣಿಕರು ಪ್ರಯಾಣಿಸುವ ತಾಲ್ಲೂಕು ಕೇಂದ್ರದಲ್ಲಿ ಸುಸಜ್ಜಿತ ಬಸ್‌ ನಿಲ್ದಾಣ ಬೇಕು ಎನ್ನುವುದು ಜನರ ದಶಕಗಳ ಬೇಡಿಕೆ. 

ಎರಡು ಕಡೆ ಜಾಗ ನೋಡಲಾಗಿದೆ

ಸಾರಿಗೆ ಸಚಿವರನ್ನು ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಬೆಂಗಳೂರಿನಿಂದ ಅಧಿಕಾರಿಗಳು ಬಂದು ಕಡಬ ಪೇಟೆಯ ಅಂಬೇಡ್ಕರ್ ಭವನದ ಬಳಿ ಮತ್ತು ಕಡಬ ಕೆರೆ ಎಂಬಲ್ಲಿ ಜಾಗ ನೋಡಿದ್ದಾರೆ. ಅಂಬೇಡ್ಕರ್ ಭವನದ ಬಳಿಯ ಜಾಗ ಸೂಕ್ತವಾಗಿಲ್ಲ ಎಂದಿದ್ದಾರೆ. ಕೆರೆ ಬಳಿಯ ಜಾಗ ಡಿಪೊ ಮಾಡಲು ಸೂಕ್ತ ಎಂದು ತಿಳಿಸಿದ್ದಾರೆ. ಇದೂ ಆಗದಿದ್ದಲ್ಲಿ  ಇನ್ನೊಂದು ಕಡೆಯಲ್ಲಿ ಜಾಗ ಇರುವುದಾಗಿ ತಿಳಿಸಿದ್ದೇವೆ. ಒಟ್ಟಿನಲ್ಲಿ ಈ ಬಾರಿ ಬಸ್ ನಿಲ್ದಾಣ ನಿರ್ಮಾಣ ಆಗಲೇ ಬೇಕು ಎನ್ನುವ ಹಠಕ್ಕೆ ಬಿದ್ದು ಪ್ರಯತ್ನದಲ್ಲಿ ತೊಡಗಿದ್ದೇವೆ. ಅಭಿಲಾಶ್ ಅಧ್ಯಕ್ಷರು ಕಡಬ ಬ್ಲಾಕ್ ಕಾಂಗ್ರೆಸ್ ಸಮಿತಿ

ಕಡಬದಲ್ಲಿ ಬಸ್ ನಿಲ್ದಾಣಕ್ಕೆ ಸಂಸ್ಥೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬೆಂಗಳೂರು ಕೇಂದ್ರ ಕಚೇರಿಯಿಂದ ಅಧಿಕಾರಿಗಳ ತಂಡ ಬಂದು ಜಾಗ ಪರಿಶೀಲನೆ ನಡೆಸಿದ್ದಾರೆ.
–ಅಮಲಿಂಗಯ್ಯ ಹೊಸ ಪೂಜಾರ, ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್‌ಆರ್‌ಟಿಸಿ ಪುತ್ತೂರು ಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.