ADVERTISEMENT

ಕಡಬ ಪಟ್ಟಣ ಪಂಚಾಯಿತಿಗೆ 5 ವರ್ಷಗಳ ಬಳಿಕ ಚುನಾವಣೆ ಘೋಷಣೆ: ಬಿರುಸುಗೊಂಡ ಚಟುವಟಿಕೆ

ಸಿದ್ದಿಕ್ ನೀರಾಜೆ
Published 17 ಜುಲೈ 2025, 7:39 IST
Last Updated 17 ಜುಲೈ 2025, 7:39 IST
ಕಡಬ ಪೇಟೆ
ಕಡಬ ಪೇಟೆ   

ಕಡಬ (ಉಪ್ಪಿನಂಗಡಿ): ಕಳೆದ ಐದು ವರ್ಷಗಳಿಂದ ಯಾವುದೇ ರಾಜಕೀಯ ಚಟುವಟಿಕೆ ಇಲ್ಲದೆ ಬಣಗುಡುತ್ತಿದ್ದ ಕಡಬ ಪಟ್ಟಣ ಪಂಚಾಯಿತಿಗೆ ಈಗ ಚುನಾವಣೆ ಘೋಷಣೆಯಾಗಿದ್ದು, ಆಗಸ್ಟ್ 17ರಂದು ಪಟ್ಟಣದ 13 ವಾರ್ಡ್‌ಗಳಿಗೆ ಚುನಾವಣೆ ನಡೆಯಲಿದೆ.

ರಾಜ್ಯದಲ್ಲಿ ಹೊಸದಾಗಿ ರಚನೆಯಾದ ಪಟ್ಟಣ ಪಂಚಾಯಿತಿಗಳಲ್ಲಿ ಕಡಬವೂ ಒಳಗೊಂಡಿದೆ. ಕಡಬ ಮತ್ತು ಕೋಡಿಂಬಾಳ ಗ್ರಾಮವನ್ನು ಒಳಗೊಂಡ ಕಡಬ ಪಟ್ಟಣ ಪಂಚಾಯಿತಿಯಲ್ಲಿ ಈಗ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ, ಅಭ್ಯರ್ಥಿಗಳ ಆಯ್ಕೆಯಾಗಿ ಕಸರತ್ತು ಶುರುವಾಗಿದೆ.

ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಯದ ಕಾರಣ ಜನಪ್ರತಿನಿಧಿಗಳು ಇಲ್ಲದೇ ಮುಖಂಡರಲ್ಲಿ ರಾಜಕೀಯ ಚಟುವಟಿಕೆ ಕಡಿಮೆಯಾಗಿ ತಮ್ಮ ವ್ಯವಹಾರಗಳಲ್ಲಿ ತೊಡಗಿಕೊಂಡಿದ್ದ ಕಾಂಗ್ರೆಸ್, ಬಿಜೆಪಿ ಹಾಗೂ ಇತರೆ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರಲ್ಲಿ ಕಡಬ ಪಟ್ಟಣ ಪಂಚಾಯಿತಿ ಚುನಾವಣೆ ಘೋಷಣೆಯು ಹುರುಪು ಬಂದಿದೆ. ಅಭ್ಯರ್ಥಿಯಾಗಲು ಪಕ್ಷದ ನಾಯಕರ ಬಳಿ ಮಾತುಕತೆ, ಒತ್ತಡ ಪ್ರಯೋಗಿಸುವ ಕೆಲಸವೂ ನಡೆಯುತ್ತಿದೆ.

ADVERTISEMENT

ಸವಾಲಾದ ವಾರ್ಡ್‌ವಾರು ಮೀಸಲಾತಿ:

ಚುನಾವಣೆಗೆ ಸ್ಪರ್ಧಿಸಬೇಕೆಂದು ಈಗಾಗಲೇ ಕಸರಸ್ತು ನಡೆಸಿದ್ದ ಕೆಲ ಆಕಾಂಕ್ಷಿಗಳಿಗೆ ಬದಲಾದ ವಾರ್ಡ್‌ವಾರು ಮೀಸಲಾತಿಯು ನಿರುತ್ಸಾಹ ತಂದಿದೆ. ಅಂತವರನ್ನು ಬೇರೆ ವಾರ್ಡ್‌ಗಳಲ್ಲಿ ಸ್ಪರ್ಧೆಗಿಳಿಸಿ ಗೆಲ್ಲಿಸಿಕೊಳ್ಳಬೇಕೆಂಬ ಪ್ರಯತ್ನವೂ ಪಕ್ಷದ ಮುಖಂಡರಲ್ಲಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಆಕಾಂಕ್ಷಿಗಳ ಸಂಖ್ಯೆ ಏರುತ್ತಿದೆ.

ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿಯೂ ಅಧಿಕವಾಗಿದೆ. ಪಕ್ಷದ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದವರು ಟಿಕೆಟ್‌ಗಾಗಿ ಪ್ರಯತ್ನ ಪಡುತ್ತಿದ್ದಾರೆ. ಹಿರಿಯ ಬಿಜೆಪಿ ಮುಖಂಡರು ಟಿಕೆಟ್ ನೀಡಬೇಕು ಎಂದು ಹಲವರು ಬೇಡಿಕೆ ಇಡುತ್ತಿದ್ದರೂ ಈ ಬಾರಿ ಯುವ ಕಾರ್ಯಕರ್ತರನ್ನು ಕಣಕ್ಕಿಳಿಸುವ ಸಾಧ್ಯತೆಯೂ ಅಧಿಕವಾಗಿದೆ ಎಂದು ಹೇಳಲಾಗುತ್ತಿದೆ.

ವಾರ್ಡ್‌ವಾರು ಮೀಸಲಾತಿ ಪ್ರಕಟ

ಪಟ್ಟಣ ಪಂಚಾಯಿತಿಯ 13 ಸ್ಥಾನಗಳಲ್ಲಿ ಹಿಂದುಳಿದ ವರ್ಗ ಮಹಿಳೆ-1 ಸ್ಥಾನ ಪರಿಶಿಷ್ಟ ಜಾತಿ ಮಹಿಳೆ-1 ಹಿಂದುಳಿದ ವರ್ಗ ಎ-2 ಸ್ಥಾನ ಹಿಂದುಳಿದ ವರ್ಗ ಬಿ ಗೆ-1 ಪರಿಶಿಷ್ಟ ಜಾತಿ-1 ಸ್ಥಾನ ಪರಿಶಿಷ್ಟ ಪಂಗಡಕ್ಕೆ-1 ಸ್ಥಾನ ಮೀಸಲಾಗಿದೆ. ಉಳಿದವು ಸಾಮಾನ್ಯ ಕ್ಷೇತ್ರಗಳಾಗಿವೆ. ಪಟ್ಟಣದ ಕಳಾರ-ಹಿಂದುಳಿದ ವರ್ಗ-ಎ ಮಹಿಳೆ ಕೋಡಿಬೈಲು-ಪರಿಶಿಷ್ಟ ಜಾತಿ ಮಹಿಳೆ ಪನ್ಯ-ಸಾಮಾನ್ಯ ಬೆದ್ರಾಜೆ-ಸಾಮಾನ್ಯ ಮಾಲೇಶ್ವರ-ಹಿಂದುಳಿದ ವರ್ಗ-ಎ ಕಡಬ-ಸಾಮಾನ್ಯ ಮಹಿಳೆ ಪಣೆಮಜಲು-ಹಿಂದುಳಿದ ವರ್ಗ-ಬಿ ಪಿಜಕಳ-ಸಾಮಾನ್ಯ ಮೂರಾಜೆ-ಹಿಂದುಳಿದ ವರ್ಗ-ಎ ದೊಡ್ಡಕೊಪ್ಪ-ಸಾಮಾನ್ಯ ಮಹಿಳೆ ಕೋಡಿಂಬಾಳ-ಸಾಮಾನ್ಯ ಮಹಿಳೆ ಮಜ್ಜಾರು-ಪರಿಶಿಷ್ಟ ಜಾತಿ ಪುಳಿಕುಕ್ಕು-ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ನಿಗದಿಪಡಿಸಿ ನಗರಾಭಿವೃದ್ಧಿ ಇಲಾಖೆ ಅಧಿಸೂಚನೆ ಹೊರಡಿಸಿದೆ.

17ರಂದು ಚುನಾವಣೆ

20ರಂದು ಎಣಿಕೆ ಆಗಸ್ಟ್ 5ರಂದು ನಾಮಪತ್  ಸಲ್ಲಿಸಲು ಕೊನೆಯ ದಿನ. 6ರಂದು ನಾಮಪತ್ರ ಪರಿಶೀಲನೆ 8ರಂದು ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. 17ರಂದು ಚುನಾವಣೆ ನಡೆಯಲಿದೆ. ಮರು ಮತದಾನ ಇದ್ದಲ್ಲಿ ಆ. 19ರಂದು ನಡೆಯಲಿದೆ. 20ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಚುನಾವಣೆ ಘೋಷಣೆಯ ಹಿನ್ನಲೆಯಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಜುಲೈ 29ರಿಂದ ಆಗಸ್ಟ್ 20ರವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.