ADVERTISEMENT

ಕದ್ರಿ ಉದ್ಯಾನ: ಬೀದಿ ವ್ಯಾಪಾರ ಸರಕು ತೆರವು– ಖಂಡನೆ

ದ.ಕ.ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 7:29 IST
Last Updated 18 ನವೆಂಬರ್ 2025, 7:29 IST
ಕದ್ರಿ ಉದ್ಯಾನದ ಬಳಿಯ ಬೀದಿ ಬದಿ ವ್ಯಾಪಾರಿಗಳ ಸರಕುಗಳನ್ನು ತೆರವುಗೊಳಿಸಿದ್ದನ್ನು ಖಂಡಿಸಿ ಬೀದಿ ಬದಿ ವ್ಯಾಪಾರಿಗಳು ಮಂಗಳೂರಿನ ಪಾಲಿಕೆ ಕೇಂದ್ರ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು
ಕದ್ರಿ ಉದ್ಯಾನದ ಬಳಿಯ ಬೀದಿ ಬದಿ ವ್ಯಾಪಾರಿಗಳ ಸರಕುಗಳನ್ನು ತೆರವುಗೊಳಿಸಿದ್ದನ್ನು ಖಂಡಿಸಿ ಬೀದಿ ಬದಿ ವ್ಯಾಪಾರಿಗಳು ಮಂಗಳೂರಿನ ಪಾಲಿಕೆ ಕೇಂದ್ರ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು   

ಮಂಗಳೂರು: ಪಾಲಿಕೆಯ ಅಧಿಕೃತ ಗುರುತುಪತ್ರದೊಂದಿಗೆ ಕದ್ರಿ ಉದ್ಯಾನದ ಬಳಿ ವ್ಯಾಪಾರದಲ್ಲಿ ತೊಡಗಿದ್ದ ಬೀದಿ ವ್ಯಾಪಾರಿಗಳ ಸರಕುಗಳನ್ನು ತೆರವುಗೊಳಿಸಿರುವ ಪಾಲಿಕೆಯ ಕ್ರಮವನ್ನು ಖಂಡಿಸಿ ಸಿಐಟಿಯು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ನೇತೃತ್ವದಲ್ಲಿ ಬೀದಿ ಬದಿ ವ್ಯಾಪಾರಿಗಳು ಪಾಲಿಕೆ ಕೇಂದ್ರ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ‘ಕದ್ರಿ ಉದ್ಯಾನಕ್ಕೆ ವಿಹಾರಕ್ಕೆ ಬರುವವರಿಗೆ ತಂಪಾದ ಪಾನೀಯ, ರುಚಿಕರ ತಿಂಡಿ ತಿನಿಸು ಮಾರಾಟ ಮಾಡಿ ಬದುಕು ಸಾಗಿಸುತ್ತಿದ್ದ ಬಡ ಬೀದಿ ವ್ಯಾಪಾರಿಗಳ ಮೇಲೆ ಕಾನೂನುಬಾಹಿರವಾಗಿ ದಾಳಿ ನಡೆದರೂ ಜನಪ್ರತಿನಿಧಿಗಳು ಮೌನ ವಹಿಸಿದ್ದಾರೆ. ಪಾಲಿಕೆ ಅಧಿಕಾರಿಗಳು ಬಡ ಬೀದಿ ವ್ಯಾಪಾರಿಗಳನ್ನೇ ಅಪರಾಧಿಗಳಂತೆ ಬಿಂಬಿಸಿ ದೌರ್ಜನ್ಯ ನಡೆಸುತ್ತಿದ್ದಾರೆ. ದಾಳಿ ಮುಂದುವರಿದರೆ ಹೋರಾಟ ತೀವ್ರಗೊಳಿಸಲಿದ್ದೇವೆ’ ಎಂದರು. 

ಸಂಘದ ಗೌರವಾಧ್ಯಕ್ಷ ಬಿ.ಕೆ.ಇಮ್ತಿಯಾಜ್, ‘ಕದ್ರಿ ಉದ್ಯಾನದ ಬಳಿ 30 ವರ್ಷಗಳಿಂದ ವ್ಯಾಪಾರ ಮಾಡಿಕೊಂಡಿದ್ದವರ ಸರಕುಗಳನ್ನು ಮತ್ತು ಗಾಡಿಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ನೋಟಿಸ್ ಕೂಡ ನೀಡದೇ ತೆರವು ಕಾರ್ಯಾಚರಣೆ ನಡೆಸಿದ್ದು ಅವರ ಬದುಕುವ ಹಕ್ಕಿನ ಮೇಲೆ ಸವಾರಿ ಮಾಡಿದಂತೆ. ಪಾಲಿಕೆ ನೀಡಿದ್ದ ಗುರುತು ಪತ್ರ, ವ್ಯಾಪಾರ ಪ್ರಮಾಣಪತ್ರ ಮತ್ತು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಪ್ರಮಾಣಪತ್ರ ಹೊಂದಿರುವವರನ್ನೂ ಬಿಟ್ಟಿಲ್ಲ’ ಎಂದು ಆಪಾದಿಸಿದರು.

ADVERTISEMENT

‘ಬೀದಿಬದಿ ವ್ಯಾಪಾರ ಕಾಯ್ದೆ ಪ್ರಕಾರ ಬೀದಿ ವ್ಯಾಪಾರಿಗಳಿಗೆ ನ್ಯಾಯ ಒದಗಿಸಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಕುಂದುಕೊರತೆ ನಿವಾರಣಾ ಸಮಿತಿ ರಚಿಸುವುದು ಕಡ್ಡಾಯ. ಆದರೆ ಪಾಲಿಕೆಯಲ್ಲಿ ಈ ಸಮಿತಿಯೇ ಅಸ್ತಿತ್ವದಲ್ಲಿ ಇಲ್ಲ. ಪಟ್ಟಣ ವ್ಯಾಪಾರ ಸಮಿತಿಯೂ ಅಸ್ತಿತ್ವದಲ್ಲಿ ಇಲ್ಲ. ಇಂತಹ ಸಮಯದಲ್ಲಿ ಬೀದಿ ವ್ಯಾಪಾರಿಗಳ ಮೇಲೆ ದೌರ್ಜನ್ಯ ನಡೆಸಲಾಗಿದೆ’ ಎಂದು ಟೀಕಿಸಿದರು.

ಪಾಲಿಕೆಯ ಅಧಿಕಾರಿಗಳಾದ ಮಾಲಿನಿ ಮತ್ತು ಚಿತ್ತರಂಜನ್ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.

‘ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೇ ವಿಮಾನನಿಲ್ದಾಣದ ರಸ್ತೆಯನ್ನು ಬೀದಿ ವ್ಯಾಪಾರ ನಿಷೇಧ ರಸ್ತೆ ಎಂದು ಆದೇಶ ಮಾಡಲಾಗಿದೆ’ ಎಂದರು. 

ಪ್ರತಿಭಟನೆಯಲ್ಲಿ ಕಾರ್ಮಿಕ ಮುಂದಾಳು ಯೋಗೀಶ್ ಜಪ್ಪಿನಮೊಗರು, ಡಿವೈಎಫ್ಐ ಮುಖಂಡರಾದ ಸಂತೋಷ್ ಬಜಾಲ್, ತಯ್ಯುಬ್ ಬೆಂಗ್ರೆ, ಹನೀಫ್ ಬೆಂಗ್ರೆ, ರಿಜ್ವಾನ್ ಹರೇಕಳ, ಜಗದೀಶ್ ಬಜಾಲ್, ಬೀದಿಬದಿ ವ್ಯಾಪಾರಿಗಳ ಮುಖಂಡರಾದ ಸಂತೋಷ್ ಆರ್. ಎಸ್, ಮುಜಾಫರ್ ಅಹ್ಮದ್, ಹಂಝ ಮೊಹಮ್ಮದ್, ಶಿವಪ್ಪ, ಹಸನ್ ಕುದ್ರೋಳಿ, ಅಬ್ದುಲ್ ಖಾದರ್, ಸ್ಟ್ಯಾನಿ ಡಿಸೋಜ, ವಿಶ್ವನಾಥ್ ಕದ್ರಿ, ಗಂಗಾಧರ್ ಕದ್ರಿ ಮತ್ತಿತರರು ಭಾಗವಹಿಸಿದ್ದರು.

Highlights - ಬೀದಿ ವ್ಯಾಪಾರಿಗಳ ಪ್ರಮುಖ ಬೇಡಿಕೆಗಳು * ಕದ್ರಿ ಉದ್ಯಾನದ ಬಳಿ ಬೀದಿ ಬದಿ ವ್ಯಾಪಾರಕ್ಕೆ ಅವಕಾಶ ನೀಡಬೇಕು. *  ಉದ್ಯಾನದ ದ್ವಾರದ ಬಳಿ ಬೀದಿ ಆಹಾರ ವಲಯ ಗೊತ್ತುಪಡಿಸಬೇಕು.  * ವಶಪಡಿಸಿಕೊಂಡ  ಸರಕು, ತಳ್ಳುಗಾಡಿಗಳನ್ನು ಮರಳಿಸಬೇಕು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.