ವಿ.ಕೆ.ವಿಟ್ಲ, ರಾಜೇಶ್ವರಿ, ವೆಂಕಿ ಪಲಿಮಾರು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಚಿತ್ರಕಲಾ ಶಿಕ್ಷಕರ ಶೈಕ್ಷಣಿಕ ಸಮಿತಿ ಕೊಡುವ ಕಲಾನಿಧಿ ಪ್ರಶಸ್ತಿಗೆ ರಾಜೇಶ್ವರಿ ಕೆ, ವಿ.ಕೆ. ವಿಟ್ಲ ಮತ್ತು ವೆಂಕಿ ಪಲಿಮಾರು ಆಯ್ಕೆಯಾಗಿದ್ದಾರೆ ಎಂದು ಸಮಿತಿಯ ಅಧ್ಯಕ್ಷ ಗಣೇಶ ಸೋಮಯಾಜಿ ತಿಳಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜೇಶ್ವರಿ 2025ನೇ ಸಾಲಿನ ಪ್ರಶಸ್ತಿಗೆ, ವಿ.ಕೆ ವಿಟ್ಲ 2024ನೇ ಸಾಲಿನ ಪ್ರಶಸ್ತಿಗೆ ಮತ್ತು ವೆಂಕಿ 2023ನೇ ಸಾಲಿನ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಸಹಯೋಗದಲ್ಲಿ ಮಂಚಿ–ಕೊಳ್ನಾಡು ಸರ್ಕಾರಿ ಪ್ರೌಢಶಾಲೆ ಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಡಿಡಿಪಿಐ ಶಶಿಧರ ಜಿ.ಎಸ್, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ತುಕಾರಾಂ ಪೂಜಾರಿ, ಮಂಚಿ ಕೊಳ್ನಾಡು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಸುಶೀಲಾ ವಿಟ್ಲ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಶಿವಶಂಕರ ರಾವ್ ಮಂಚಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮ್ ಪ್ರಸಾದ್ ರೈ ತಿರುವಾಜೆ ಮುಂತಾದವರು ಪಾಲ್ಗೊಳ್ಳುವರು ಎಂದು ತಿಳಿಸಿದರು.
ಕಾರ್ಯಕ್ರಮದ ನಂತರ ಚಿತ್ರಕಲೆಯ ವಿವಿಧ ಆಯಾಮಗಳ ಪರಿಚಯ, ಪ್ರಾತ್ಯಕ್ಷಿಕೆ ಮತ್ತು ಪ್ರಾಯೋಗಿಕ ಚಟುವಟಿಕೆ ನಡೆಯಲಿದೆ ಎಂದು ಅವರು ವಿವರಿಸಿದರು. ತಾರಾನಾಥ ಕೈರಂಗಳ, ಬಾಲಕೃಷ್ಣ ಶೆಟ್ಟಿ, ಗೋಪಾಡ್ಕರ್ ಮತ್ತು ಮನೋರಂಜಿನಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.