
ಮಂಗಳೂರು: ಶಾಲೆಗೆ ಮಹಾಗಣಪತಿ ಎಂಬ ಹೆಸರು ಇರಿಸುವುದರ ಕುರಿತು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಸೌತಡ್ಕ ಶ್ರೀ ಮಹಾಣಗಣಪತಿ ಕ್ಷೇತ್ರ ಸಮಿತಿಯ ಸದಸ್ಯರ ನಡುವೆ ಹಗ್ಗಜಗ್ಗಾಟ ನಡೆದಿದೆ.
ಬೆಳ್ತಂಗಡಿ ತಾಲ್ಲೂಕು ಕೊಕ್ಕಡ ಗ್ರಾಮದ ಸೌತಡ್ಕದಲ್ಲಿ ಶ್ರೀ ಮಹಾಗಣಪತಿ ಇಂಗ್ಲಿಷ್ ಮೀಡಿಯಂ ಶಾಲೆ ಆರಂಭಿಸಲು ವಿವೇಕಾನಂದ ವಿದ್ಯಾವರ್ಧಕ ಸಂಘ ನಿರ್ಧರಿಸಿದೆ. ಶಾಲೆಗೆ ಶುಕ್ರವಾರ ಶಿಲಾನ್ಯಾಸ ಮಾಡಲಾಯಿತು. ಮಹಾಗಣಪತಿ ಹೆಸರು ಇರಿಸುವುದರಿಂದ ಬೇಸರಗೊಂಡ ಕ್ಷೇತ್ರ ಸಮಿತಿ ಸದಸ್ಯರು ಸಮಾರಂಭದ ಆಹ್ವಾನ ಪತ್ರವನ್ನು ತಿರಸ್ಕರಿಸಿದ್ದರು.
ಈ ಬಗ್ಗೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಭಾಕರ ಭಟ್, ‘ಶಾಲೆಗೆ ಶ್ರೀ ಮಹಾಗಣಪತಿ ಇಂಗ್ಲಿಷ್ ಮೀಡಿಯಂ ಶಾಲೆ’ ಎಂದು ಹೆಸರು ಇರಿಸುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದರು.
‘ಶಾಲೆಯ ಹೆಸರನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಯಾರೂ ಪ್ರಯತ್ನಿಸಬೇಡಿ. ಹಿಂದುತ್ವದ ಉಳಿವಿಗಾಗಿ ಈ ಶಾಲೆಯನ್ನು ತೆರೆಯಲು ನಿರ್ಧರಿಸಲಾಗಿದೆ. ಅದಕ್ಕೆ ಗಣಪತಿಯ ಹೆಸರನ್ನೇ ಇರಿಸಲಾಗುವುದು. ಹೆಸರಿನ ವಿಷಯದಲ್ಲಿ ಬೇಸರಗೊಂಡಿರುವ ದೇವಸ್ಥಾನ ಸಮಿತಿಯವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ್ದಾರೆ. ಮಹಾಗಣಪತಿ ಹೆಸರು ಇರಿಸುವುದನ್ನು ಪ್ರಶ್ನಿಸಿದ ನ್ಯಾಯಾಲಯದ ಮೊರೆ ಹೋಗುವುದಾಗಿಯೂ ಅವರು ಬೆದರಿಕೆ ಹಾಕಿದ್ದಾರೆ. ಅವರು ದೂರು ದಾಖಲಿಸಲಿ. ನಿಮಗೇನಾಗಿದೆ ಎಂದು ನ್ಯಾಯಾಧೀಶರೇ ಅವರನ್ನು ಪ್ರಶ್ನಿಸುವ ಸಾಧ್ಯತೆ ಇದೆ’ ಎಂದು ಪ್ರಭಾಕರ ಭಟ್ ಹೇಳಿದರು.
‘ದೇವಾಲಯ ಸಮಿತಿಯ ಅವಧಿ ಕೇವಲ ಮೂರು ವರ್ಷಗಳದು. ನ್ಯಾಯಾಲಯದ ಮೊರೆ ಹೋದರೆ ಅಧಿಕಾರದ ಅವಧಿ ಮುಗಿದ ನಂತರ ಅವರು ಏನು ಮಾಡಬಲ್ಲರು’ ಎಂದು ಪ್ರಶ್ನಿಸಿದ ಪ್ರಭಾಕರ ಭಟ್ ‘ಶಾಲೆಯ ಹೆಸರಿನಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು’ ಎಂದು ಎಚ್ಚರಿಕೆ ನೀಡಿದರು.
ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಹರೀಶ್ ಪೂಂಜ, ಭಾಗೀರಥೀ ಮುರುಳ್ಯ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.