ADVERTISEMENT

ವೇಣೂರು ಪೆರ್ಮುಡ ಸೂರ್ಯ–ಚಂದ್ರ ಜೋಡುಕರೆ ಕಂಬಳ ನಾಳೆಯಿಂದ

200ಕ್ಕಿಂತ ಹೆಚ್ಚು ಜೋಡಿ ಕೋಣಗಳು ಭಾಗವಹಿಸುವ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2022, 15:55 IST
Last Updated 2 ಡಿಸೆಂಬರ್ 2022, 15:55 IST
ವೇಣೂರು ಪೆರ್ಮುಡ ಸೂರ್ಯ ಚಂದ್ರ ಕಂಬಳಕ್ಕೆ ಸಿದ್ದಗೊಂಡ ಕರೆ
ವೇಣೂರು ಪೆರ್ಮುಡ ಸೂರ್ಯ ಚಂದ್ರ ಕಂಬಳಕ್ಕೆ ಸಿದ್ದಗೊಂಡ ಕರೆ   

ಬೆಳ್ತಂಗಡಿ: ‘ವೇಣೂರು ಪೆರ್ಮುಡ ಹೊನಲು ಬೆಳಕಿನ 30ನೇ ವರ್ಷದ ಸೂರ್ಯ - ಚಂದ್ರ ಜೋಡುಕರೆ ಬಯಲು ಕಂಬಳ ಡಿ.3ರಂದು ಉದ್ಘಾಟನೆಯಾಗಲಿದೆ’ ಎಂದು ಕಂಬಳ ಸಮಿತಿ ಅಧ್ಯಕ್ಷ ನಿತೀಶ್ ಕೋಟ್ಯಾನ್ ಮತ್ತು ಕಾರ್ಯಾಧ್ಯಕ್ಷ ಶೇಖರ ಕುಕ್ಕೆಡಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಂಬಳದ ಪೂರ್ವ ತಯಾರಿಗಳು ಮುಗಿದಿವೆ. ಕಂಬಳವನ್ನು ನಿಗದಿಯಂತೆ 24 ಗಂಟೆಯೊಳಗೆ ಮುಗಿಸಲು ಎಲ್ಲ ಸಿದ್ಧತೆಗಳನ್ನು, ಅದಕ್ಕೆ ಬೇಕಾದ ವಿವಿಧ ಸಮಿತಿಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ' ಎಂದು ಅವರು ಹೇಳಿದರು.

‘ಕಂಬಳವನ್ನು ಡಿ.3 ರಂದು ಬೆಳಿಗ್ಗೆ 8.30ಕ್ಕೆ ಅಳದಂಗಡಿ ಅರಮನೆಯ ತಿಮ್ಮಣ್ಣರಸ ಡಾ.ಪದ್ಮಪ್ರಸಾದ್ ಅಜಿಲ ಉದ್ಘಾಟಿಸುವರು. ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್. ಪುರುಷೋತ್ತಮ ರಾವ್ ಅಧ್ಯಕ್ಷತೆ ವಹಿಸಲಿದ್ದು, ತಹಶೀಲ್ದಾರ್ ಪೃಥ್ವಿ ಸಾನಿಕಂ, ಸರ್ಕಲ್‌ ಇನ್‌ಸ್ಪೆಕ್ಟರ್‌ ಶಿವಕುಮಾರ್ ಬಿ. ಭಾಗವಹಿಸುವರು.

ADVERTISEMENT

ಸಮಿತಿಯ ಗೌರವ ಅಧ್ಯಕ್ಷ, ಮಾಜಿ ಶಾಸಕ ವಸಂತ ಬಂಗೇರ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್, ಸಂಸದ ನಳಿನ್ ಕುಮಾರ್ ಕಟೀಲ್‌, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್, ಶಾಸಕ ಹರೀಶ್ ಪೂಂಜ ಭಾಗವಹಿಸುವರು.

ಕಂಬಳದಲ್ಲಿ ಕನೆ ಹಲಗೆ, ಅಡ್ಡ ಹಲಗೆ, ಹಗ್ಗ ಕಿರಿಯ, ಹಗ್ಗ ಹಿರಿಯ, ನೇಗಿಲು ಹಿರಿಯ, ನೇಗಿಲು ಕಿರಿಯ ಸೇರಿದಂತೆ 6 ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಈ ಹಿಂದೆ ಇದ್ದಂತೆ ಜಾಗದ ತಕರಾರು ಇಲ್ಲವಾಗಿದ್ದು, 200ಕ್ಕಿಂತ ಹೆಚ್ಚು ಜೋಡಿ ಕೋಣಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಸಮಿತಿಯ ಉಪಾಧ್ಯಕ್ಷ ಸ್ಟಿವನ್ ಮೋನಿಸ್, ಸಲಹೆಗಾರ ಪದ್ಮನಾಭ ಸಾಲಿಯಾನ್ ಮಾಲಾಡಿ, ಸದಸ್ಯರಾದ ದಯಾನಂದ ದೇವಾಡಿಗ, ಜಯಂತ ಕೋಟ್ಯಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.