
ಕರಾವಳಿ ಕಲೋತ್ಸವ (ಸಂಗ್ರಹ ಚಿತ್ರ)
ಬಂಟ್ವಾಳ: ಇಲ್ಲಿನ ಚಿಣ್ಣರಲೋಕ ಮೋಕೆದ ಕಲಾವಿದೆರ್ ಮತ್ತು ಚಿಣ್ಣರ ಲೋಕ ಸೇವಾ ಬಂಧು ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಭಾಗಿತ್ವದಲ್ಲಿ ಬಿ.ಸಿ.ರೋಡು ಮುಖ್ಯವೃತ್ತ ಸಮೀಪದ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ಡಿ.20ರಿಂದ ಜ.26ರವರೆಗೆ ‘ಕರಾವಳಿ ಕಲೋತ್ಸವ 2024-25’ ಮತ್ತು ಕರ್ನಾಟಕ ಸುವರ್ಣ ಸಂಭ್ರಮ ಪ್ರಯುಕ್ತ ಬಹು ಸಂಸ್ಕೃತಿ ಸಂಭ್ರಮ ಕಾರ್ಯಕ್ರಮ ನಡೆಯಲಿದೆ ಎಂದು ಟ್ರಸ್ಟ್‌ನ ಪ್ರಧಾನ ಸಂಚಾಲಕ ಮೋಹನದಾಸ್ ಕೊಟ್ಟಾರಿ ಹೇಳಿದರು.
ಬಿ.ಸಿ.ರೋಡಿನಲ್ಲಿ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.20ರಂದು ಸಂಜೆ 5 ಗಂಟೆಗೆ ಬಿ.ಸಿ.ರೋಡು ಅನ್ನಪೂರ್ಣೇಶ್ವರಿ ದೇವಳ ಬಳಿಯಿಂದ ಜಾನಪದ ದಿಬ್ಬಣದ ನಡೆಯಲಿದೆ. ಬಳಿಕ ಕಲಾ ವೇದಿಕೆ, ಸಭಾಂಗಣ ಉದ್ಘಾಟನೆ, ಅಮ್ಯೂಸ್‌ಮೆಂಟ್ ಪಾರ್ಕ್ ಸಹಿತ ವಿವಿಧ ಮಳಿಗೆಗಳ ಉದ್ಘಾಟನೆ ನಡೆಯಲಿದೆ.
ಕಬಡ್ಡಿ ಪಟು ಉದಯ ಚೌಟ ಸಾಧನಾ ಪ್ರಶಸ್ತಿ , ಚಿಣ್ಣರ ಸೌರಭ ಪ್ರಶಸ್ತಿ ಪ್ರದಾನ ನಡೆಯಲಿದೆ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ರಾಜೇಶ್ ನಾಯ್ಕ್, ಬಿ.ಮಂಜುನಾಥ ಭಂಡಾರಿ, ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಮುಖಂಡ ಬಿ.ರಮಾನಾಥ ರೈ, ಮಾಣಿಲ ಶ್ರೀಧಾಮ ಮೋಹನದಾಸ ಸ್ವಾಮೀಜಿ, ಮೊಡಂಕಾಪು ಚರ್ಚ್ ಧರ್ಮಗುರು ವಲೇರಿಯನ್ ಡಿಸೋಜ, ಮಿತ್ತಬೈಲ್ ಜಝರಿ ಇರ್ಷಾದ್ ಹುಸೈನ್ ದಾರಿಮಿ, ಸಂಗೀತ ನಿರ್ದೇಶಕ ಗುರುಕಿರಣ್ ಭಾಗವಹಿಸುವರು ಎಂದು ಉತ್ಸವ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್ ತಿಳಿಸಿದರು.
ಪ್ರತಿದಿನ ಸಂಜೆ ಚಿಣ್ಣರ ಉತ್ಸವ, ನಾಟಕೋತ್ಸವ, ಫಿಲ್ಮಿ ಡ್ಯಾನ್ಸ್ ಸ್ಪರ್ಧೆ, ಸಿಂಗಾರಿ ಮೇಳ (ಚೆಂಡೆ) ಸ್ಪರ್ಧೆ, ಜಾನಪದ ನೃತ್ಯ, ಭರತನಾಟ್ಯ, ಯಕ್ಷಗಾನ, ರಸ್ತೆ ಸುರಕ್ಷಾ ಮಾಹಿತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಅಳ್ವ ಅವರಿಗೆ ‘ಕರಾವಳಿ ಸೌರಭ’ ಪ್ರಶಸ್ತಿ ಪ್ರದಾನ ನಡೆಯಲಿದ್ದು, ಡಿ. 30 ರಂದು ಸಂಜೆ 6 ಗಂಟೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತುಳು, ಬ್ಯಾರಿ, ಕೊಂಕಣಿ, ಅರೆಭಾಷೆ, ಕೊಡವ ಮತ್ತು ಯಕ್ಷಗಾನ ಅಕಾಡೆಮಿ ಸಹಭಾಗಿತ್ವದಲ್ಲಿ ‘ಬಹುಸಂಸ್ಕೃತಿ ಸಂಭ್ರಮ ಮತ್ತು ಬಹುಭಾಷಾ ಕವಿ ಸಂಗಮ’ ನಡೆಯಲಿದೆ ಎಂದು ಅವರು ವಿವರಿಸಿದರು.
ಜ.5ರಂದು ಸಂಜೆ 6 ಗಂಟೆಗೆ ಸಮಾರೋಪ ಕಾರ್ಯಕ್ರಮ, ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.
ಸಮಿತಿ ಪದಾಧಿಕಾರಿಗಳಾದ ತಾರಾನಾಥ ಕೊಟ್ಟಾರಿ ತೇವು, ಸರಪಾಡಿ ಅಶೋಕ್ ಶೆಟ್ಟಿ, ಪೌಝಿಯಾ ಸಜಿಪ, ಶಿವಪ್ರಸಾದ್ ಬಂಟ್ವಾಳ, ಇಬ್ರಾಹಿಂ ಕೈಲಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.