
ಮಂಗಳೂರು: ಮೈ ಜುಮ್ಮೆನ್ನಿಸುವ ನೀರ ಝರಿ, ಕರಾವಳಿಯ ಕರಕುಶಲ ವಸ್ತುಗಳು, ಇಲ್ಲಿನ ಕಾಡು–ಮೇಡುಗಳ ಚಿತ್ರಣ, ಬಾಯಲ್ಲಿ ನೀರೂರಿಸುವ ತರಹೇವಾರಿ ತಿನಿಸು... ಮುಂತಾದ ಹತ್ತು ಹಲವು ಆಕರ್ಷಣೆಗಳನ್ನು ಒಳಗೊಂಡ ಕರಾವಳಿ ಉತ್ಸವಕ್ಕೆ ಶನಿವಾರ ವರ್ಷರಂಜಿತೆ ಚಾಲನೆ ದೊರಕಿತು.
ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಇಲ್ಲಿನ ಕರಾವಳಿ ಉತ್ಸವ ಮೈದಾನದಲ್ಲಿ ಹಮ್ಮಿಕೊಂಡಿರುವ ಕರಾವಳಿ ಉತ್ಸವವನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ತುಳುನಾಡಿನ ಸಂಪ್ರದಾಯದಂತೆ ತೆಂಗಿನ ಹಿಂಗಾರ ಅರಳಿಸಿ ಶನಿವಾರ ಉದ್ಘಾಟಿಸಿದರು. ಉತ್ಸವದ ಮಳಿಗೆಗಳಿಗೂ ಭೇಟಿ ನೀಡಿ ವೀಕ್ಷಿಸಿದರು.
‘ಜಾತಿ ಮತ ಭೇದ ಮರೆತು ಜನ ಒಂದೆಡೆ ಕಲೆಯುವುದಕ್ಕೆ ಅವಕಾಶ ಕಲ್ಪಿಸಿದಾಗ ಅವರಲ್ಲಿ ಪರಸ್ಪರ ವಿಶ್ವಾಸ ಮೂಡುತ್ತದೆ. ಇಂತಹ ಹಬ್ಬಗಳು ಜನರಲ್ಲಿ ಪರಸ್ಪರ ಸಹೋದರತೆ, ಪ್ರೀತಿ ಬೆಳೆಯುತ್ತದೆಯೇ, ಹೊರತು ದ್ವೇಷ ಭಾಷಣಗಳಿಂದಲ್ಲ. ಕ್ರಿಸ್ಮಸ್, ಹೊಸವರ್ಷ ಹಾಗೂ ಸಂಕ್ರಾಂತಿ ಸುಸಂದರ್ಭದಲ್ಲಿ ನಡೆಯುತ್ತಿರುವ ಕರಾವಳಿ ಉತ್ಸವದ ಮೂಲಕ ಕರಾವಳಿಗರ ಹೃದಯಗಳನ್ನು ಬೆಸೆಯುವ ಕಾರ್ಯ ನಡೆಯಲಿ’ ಎಂದು ಸಚಿವರು ಹಾರೈಸಿದರು.
‘ದ್ವೇಷ ಹರಡಿಸಿ ದಾರಿ ತಪ್ಪಿಸುವವ ಎಲ್ಲ ಕಡೆ ಇರುತ್ತಾರೆ. ಅದರ ನಡುವೆಯೂ ಕರಾವಳಿಯಲ್ಲಿ ಸಾಮರಸ್ಯ ಇದೆ. ಅದನ್ನು ಮತ್ತಷ್ಟು ಗಟ್ಟಿಗೊಳಿಸಬೇಕಿದೆ. ಇಲ್ಲಿನ ವ್ಯಾಪಾರ ಉದ್ಯಮಗಳಿಗೂ ಅನುಕೂಲ ಆಗುತ್ತದೆ’ ಎಂದರು.
ಕರಾವಳಿ ಉತ್ಸವದ ಸಮಾರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಕರೆಸಲು ಪ್ರಯತ್ನಿಸುವುದಾಗಿ ಅವರು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಬೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರಾದ ಶಾಲೆಟ್ ಪಿಂಟೊ, ವಿಶ್ವಾಸ್ ಕುಮಾರ್ ದಾಸ್, ಟಿ.ಎಂ.ಶಹೀದ್ ತೆಕ್ಕಿಲ, ಲಾವಣ್ಯ ಬಲ್ಲಾಳ್, ಸದಾನಂದ ಮಾವಜಿ, ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸಿಇಒ ವಿನಾಯಕ ನರ್ವಾಡೆ ಮತ್ತಿತರರು ಭಾಗವಹಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ, ‘ಕಡಲ ಕಿನಾರೆಯಲ್ಲಿ ನಡೆಯುವ ಕೈಲಾಶ್ ಖೇರ್, ವಿಜಯ ಪ್ರಕಾಶ್‌ರಂತಹ ಸಂಗೀತ ದಿಗ್ಗಜರ ರಸಸಂಜೆ ಕಾರ್ಯಕ್ರಮಗಳು, ಗಾಳಿಪಟ ಉತ್ಸವ, ಹೆಲಿರೈಡ್, ಬೀಚ್ ವಾಲಿಬಾಲ್, ಬೀಚ್ ಕಬಡ್ಡಿ, ವೈನ್ ಮೇಳ, ಕದ್ಇ ಉದ್ಯಾನದಲ್ಲಿ ಫಲಪುಷ್ಪ ಪ್ರದರ್ಶ, ಕಲಾ ಪರ್ಬ, ಶ್ವಾನ ಮೇಳ... ಮುಂತಾದ ಹತ್ತು ಹಲವು ಆಕರ್ಷಣೆಗಳು ಕರಾವಳಿ ಉತ್ಸವದಲ್ಲಿವೆ. 2026ರ ಜ. 31ರ ವರೆಗೂ ಒಂದಿಲ್ಲೊಂದು ಕಾರ್ಯಕ್ರಮಗಳ ಮೂಲಕ ಈ ಉತ್ಸವ ಜನರ ಮನ ಸೆಳೆಯಲಿದೆ’ ಎಂದರು
ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಕೆ. ಸ್ವಾಗತಿಸಿದರು. ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಧನ್ಯವಾದ ಸಲ್ಲಿಸಿದರು.
‘ಪಂಚತಾರಾ ಹೋಟೆಲ್ ಕೊರತೆ ನೀಗಲಿ’
ದಕ್ಷಿಣ ಕನ್ನಡ ಸಂಪದ್ಭರಿತ ಜಿಲ್ಲೆ. ಉತ್ಕೃಷ್ಟ ಆತಿಥ್ಯಕ್ಕೆ ಹೆಸರುವಾಸಿಯಾದ ಜಿಲ್ಲೆ. ಆದರೆ ಈ ಜಿಲ್ಲೆಯಲ್ಲಿ ಒಂದೇ ಒಂದು ಪಂಚತಾರಾ ಹೋಟೆಲ್ ಇಲ್ಲ. ಈಚೆಗೆ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿ ಆಯೋಜಿಸಿದಾಗ ದೇಶ– ವಿದೇಶದ ಆಟಗಾರರು ರೆಫ್ರಿಗಳು ಉಳಿದುಕೊಳ್ಳಲು ಪಂಚತಾರ ಹೋಟೆಲ್ ನಿರೀಕ್ಷೆ ಮಾಡುತ್ತಾರೆ. ಈ ಕೊರತೆ ನೀಗಬೇಕಿದೆ’ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.
ಕಾರ್ಯಕ್ರಮಕ್ಕೆ ಸರ್ಕಾರದಿಂದ ₹ 2 ಕೋಟಿ’
‘ಕರಾವಳಿ ಉತ್ಸವದ ಮಹತ್ವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿವರಿಸಿದ್ದೆ. ಅವರು ₹ 2 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಸೂಚಿಸಿದ್ದು ಅನುದಾಗ ಮಂಜೂರಾಗಿದೆ’ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.