ADVERTISEMENT

ಕರಾವಳಿ ಧ್ವನಿ ಯಾತ್ರೆ, ಪ್ರತಿ ಕ್ಷೇತ್ರಕ್ಕೆ ಭೇಟಿ: ಆರ್.ವಿ.ದೇಶಪಾಂಡೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2023, 12:44 IST
Last Updated 3 ಫೆಬ್ರುವರಿ 2023, 12:44 IST
ಆರ್.ವಿ.ದೇಶಪಾಂಡೆ
ಆರ್.ವಿ.ದೇಶಪಾಂಡೆ   

ಮಂಗಳೂರು: ಜಿಲ್ಲೆಯಲ್ಲಿ ಫೆ.5ರಿಂದ ಆರಂಭವಾಗುವ ಕರಾವಳಿ ಧ್ವನಿ ಯಾತ್ರೆಯು ಪ್ರತಿ ಕ್ಷೇತ್ರಕ್ಕೆ ಭೇಟಿ ನೀಡಲಿದ್ದು, ಕಾರ್ಯಕರ್ತರ ಜತೆ ಸಮಾಲೋಚಿಸಿ, ಸಾರ್ವಜನಿಕರ ಅಪೇಕ್ಷೆಗಳನ್ನು ಪಟ್ಟಿ ಮಾಡಲಾಗುತ್ತದೆ ಎಂದು ಶಾಸಕ ಆರ್‌.ವಿ.ದೇಶಪಾಂಡೆ ಹೇಳಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯಾತ್ರೆ ಹಿನ್ನೆಲೆಯಲ್ಲಿ ಜಿಲ್ಲೆಯ ಮುಖಂಡರ ಜತೆ ಸಭೆ ನಡೆಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಕೊಡಗು, ಉತ್ತರ ಕನ್ನಡ ಜಿಲ್ಲೆಗಳ 26 ಕ್ಷೇತ್ರಗಳಿಗೆ ಯಾತ್ರೆ ಭೇಟಿ ನೀಡಲಿದೆ ಎಂದರು.

‘ಬಿಜೆಪಿಗೆ ಜನರ ಸಮಸ್ಯೆಗಳ ಬಗ್ಗೆ ಚಿಂತೆ ಇಲ್ಲದಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಹಿಂದೆ ಆಡಳಿತ ನಡೆಸಿದ್ದ ಕಾಂಗ್ರೆಸ್ ಕೈಗಾರಿಕೆಗಳನ್ನು ಸ್ಥಾಪಿಸಿ, ಪ್ರವಾಸೋದ್ಯಮಕ್ಕೆ ಒತ್ತು ನೀಡಿತ್ತು. ಆದರೆ, ಈಗ ಮಂಗಳೂರಿನಲ್ಲಿ ಇನ್ಫೋಸಿಸ್ ಶಾಖೆ ಬಂದ್ ಆಗಿರುವುದು ಬೇಸರ ಉಂಟುಮಾಡಿದೆ. ನಾನು ಕೈಗಾರಿಕಾ ಸಚಿವನಾಗಿದ್ದ ವೇಳೆ ಮುಡಿಪುವಿನಲ್ಲಿ ಇನ್ಫೋಸಿಸ್‌ಗೆ ಜಮೀನು ನೀಡಲಾಗಿತ್ತು’ ಎಂದರು.

ADVERTISEMENT

ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ನರೇಗಾ ಯೋಜನೆಯ ಅನುದಾನ ಕಡಿತಗೊಳಿಸಲಾಗಿದೆ. ಈಗಾಗಲೇ ದೇಶದಲ್ಲಿ ಐದು ಕೋಟಿ ಯುವಜನರು ನಿರುದ್ಯೋಗಿಗಳಾಗಿದ್ದಾರೆ. ಇದರಿಂದ ಅವರನ್ನು ಅವಲಂಬಿಸಿದ ಕುಟುಂಬವೂ ತೊಂದರೆ ಅನುಭವಿಸುತ್ತಿದೆ. ಇದು ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಕೊಟ್ಟ ಕೊಡುಗೆಯಾಗಿದೆ. ಬಡತನ, ನಿರುದ್ಯೋಗ ಹೆಚ್ಚಳಕ್ಕೆ ಕಾರಣವಾಗಿರುವ ಬಿಜೆಪಿಗೆ ಮತ ಕೇಳುವ ಅಧಿಕಾರವೂ ಇಲ್ಲ ಎಂದು ಹೇಳಿದರು.

ಪಕ್ಷದ ನಾಯಕರ ಮೇಲೆ ಅಸಮಾಧಾನಗೊಂಡು ಡಾ. ಜಿ. ಪರಮೇಶ್ವರ್ ಅವರು ಪ್ರಣಾಳಿಕೆ ಸಮಿತಿ ರಾಜೀನಾಮೆ ನೀಡಿರುವ ವರದಿಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ದೇಶಪಾಂಡೆ, ‘ರಾಜಕಾರಣಿಗಳಿಗೆ ಸಮಾಧಾನ ಎಂಬುದಿಲ್ಲ. ಮಹಾತ್ವಾಕಾಂಕ್ಷೆ ಇದ್ದಾಗ, ಹೆಚ್ಚು ಗುರಿ ಸಾಧನೆ ಸಾಧ್ಯವಾಗುತ್ತದೆ. ಪರಮೇಶ್ವರ್ ಮುನಿಸಿಕೊಂಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ’ ಎಂದರು.

ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಸದಸ್ಯ ಮಂಜುನಾಥ ಭಂಡಾರಿ, ಶಾಸಕ ಯು.ಟಿ.ಖಾದರ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್‌ಕುಮಾರ್, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಐವನ್‌ ಡಿಸೋಜ, ಮಹಾನಗರ ಪಾಲಿಕೆ ಪ್ರತಿಪಕ್ಷದ ನಾಯಕ ನವೀನ್ ಡಿಸೋಜ, ಮುಖಂಡರಾದ ಪಿ.ವಿ.ಮೋಹನ್, ಮಮತಾ ಗಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.