ಮಂಗಳೂರು: ಕಾರ್ಗಿಲ್ ವಿಜಯೋತ್ಸವದ 25ನೇ ವಾರ್ಷಿಕೋತ್ಸವದ ಅಂಗವಾಗಿ ಸುರತ್ಕಲ್‌ನ ರಾಷ್ಟ್ರಭಕ್ತ ನಾಗರಿಕ ವೇದಿಕೆ ಆಯೋಜಿಸಿರುವ ಅಮರ ಜವಾನ್ ಜ್ಯೋತಿ ಮೆರವಣಿಗೆ ಇದೇ 21ರಂದು ನಡೆಯಲಿದೆ ಎಂದು ವೇದಿಕೆಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ತಿಳಿಸಿದರು.
ಸುರತ್ಕಲ್‌ನ ಕರ್ನಾಟಕ ಸೇವಾವೃಂದ ವೃತ್ತದಿಂದ ಬೆಳಿಗ್ಗೆ 10 ಗಂಟೆಗೆ ಆರಂಭವಾಗಲಿರುವ ಮೆರವಣಿಗೆ 11.30ಕ್ಕೆ ಕದ್ರಿಯಲ್ಲಿರುವ ಯುದ್ಧಸ್ಮಾರಕದ ಬಳಿ ತಲುಪಲಿದೆ. ಮೆರವಣಿಗೆಗೆ ಹುತಾತ್ಮ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಅವರ ತಂದೆ ಎಂ.ವೆಂಕಟೇಶ್ ಮತ್ತು ತಾಯಿ ಅನುರಾಧಾ ಚಾಲನೆ ನೀಡಲಿದ್ದಾರೆ. ಐದು ಕಡೆಗಳಲ್ಲಿ ಸ್ವಾಗತಕ್ಕೆ ಸಿದ್ಧತೆ ನಡೆದಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.
26ರಂದು ಸಂಜೆ 7.30ಕ್ಕೆ ಸುರತ್ಕಲ್ ಜಂಕ್ಷನ್‌ನಲ್ಲಿ ಸೈನಿಕ ಕಲ್ಯಾಣ ನಿಧಿ ವಿತರಣೆ ಕಾರ್ಯಕ್ರಮ ನಡೆಯಲಿದ್ದು ನಿವೃತ್ತ ಸೈನಿಕಾಧಿಕಾರಿ ಕರ್ನಲ್ ರಾಜೇಶ್ ಹೊಳ್ಳ ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವ ಕೃಷ್ಣ ಜೆ.ಪಾಲೇಮಾರ್ ಮತ್ತು ಉದ್ಯಮಿ ಸಂತೋಷ್ ಪೈ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಸಂಜೆ 6.30ಕ್ಕೆ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಹಣತೆ ಮೆರವಣಿಗೆ ನಡೆಯಲಿದ್ದು ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಐ.ರಮಾನಂದ ಭಟ್ ಚಾಲನೆ ನೀಡುವರು ಎಂದು ಸತ್ಯಜಿತ್ ವಿವರಿಸಿದರು.
ಸೈನಿಕರ ಕುಟುಂಬಗಳಿಗೆ ಒಟ್ಟು ₹ 5 ಲಕ್ಷ ಮೊತ್ತದ ಕಲ್ಯಾಣ ನಿಧಿಯನ್ನು ವಿತರಿಸಲಾಗುವುದು. ಕಾರ್ಗಿಲ್ ಕಂಪನ ಎಂಬ ಪುಸ್ತಕ ಆಧರಿಸಿ ಇದೇ 7ರಂದು ವಿದ್ಯಾರ್ಥಿಗಳಿಗಾಗಿ ನಡೆದ ಪ್ರಬಂಧ ಮತ್ತು ಭಾಷಣ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದು ಅವರು ತಿಳಿಸಿದರು.
ಉಪಾಧ್ಯಕ್ಷ ಸರ್ಜಂಟ್ ಶ್ರೀಕಾಂತ್ ಶೆಟ್ಟಿ ಬಾಳ, ಪ್ರಭಾ ಕಾಮತ್, ಅಣ್ಣಪ್ಪ ದೇವಾಡಿಗ, ಸಂದೀಪ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.