ಮಂಗಳೂರು: ‘ನಗರದಲ್ಲಿ 1924ರಲ್ಲಿಸ್ಥಾಪನೆಯಾದ ಕರ್ಣಾಟಕ ಬ್ಯಾಂಕ್ ನಿರಂತರವಾಗಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಶತಮಾನವನ್ನು ಕಂಡಿರುವ ಬ್ಯಾಂಕಿನ ತಳಹದಿ ಭದ್ರವಾಗಿದೆ. ಸದೃಢವಾಗಿರುವ ಬ್ಯಾಂಕ್, ಇನ್ನು ಮುಂದೆಯೂ ಸುರಕ್ಷಿತವಾಗಿಯೇ ಮುಂದುವರಿಯಲಿದೆ’ ಎಂದು ಬ್ಯಾಂಕಿನ ನೂತನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಘವೇಂದ್ರ ಎಸ್. ಭಟ್ ಹೇಳಿದರು.
ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಬುಧವಾರ ಅಧಿಕಾರ ಸ್ವೀಕರಿಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
‘ಕರ್ಣಾಟಕ ಬ್ಯಾಂಕಿನ ಮೂಲ ಬಂಡವಾಳ ಸದೃಢವಾಗಿರುವುದರಿಂದ ವಹಿವಾಟು, ಲಾಭಾಂಶಗಳಿಗೆ ತೊಂದರೆ ಆಗಿಲ್ಲ. ಬ್ಯಾಂಕಿನಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಗ್ರಾಹಕರು ಆತಂಕಕ್ಕೊಳಗಾಗುವ ಅಗತ್ಯ ಇಲ್ಲ. 101 ವರ್ಷಗಳ ಪರಂಪರೆ ಹೊಂದಿರುವ ಬ್ಯಾಂಕ್ ರೈತರಿಗೆ, ಸಣ್ಣ ಉದ್ದಿಮೆಗಳು ಸೇರಿದಂತೆ ಪ್ರಮುಖ ಕ್ಷೇತ್ರಗಳಿಗೆ ಆರ್ಥಿಕ ನೆರವನ್ನು ಆದ್ಯತೆ ಮೇರೆಗೆ ಒದಗಿಸುತ್ತಾ ಬಂದಿದೆ. ದೇಶಾದ್ಯಂತ 950 ಶಾಖೆಗಳನ್ನು ಹೊಂದಿರುವ ಬ್ಯಾಂಕ್ ಪ್ರಸ್ತುತ ₹ 1.82 ಲಕ್ಷ ಕೋಟಿ ವಹಿವಾಟು ನಡೆಸುತ್ತಿದೆ. ಇದನ್ನು ₹ 2 ಲಕ್ಷ ಕೋಟಿಗೆ ತಲುಪಿಸುವ ಉದ್ದೇಶವಿದೆ’ ಎಂದರು.
‘ಕರಾವಳಿಯಲ್ಲಿ ಸ್ಥಾಪನೆಯಾದ ಈ ಬ್ಯಾಂಕಿನ ಪ್ರಧಾನ ಕಚೇರಿ ಈ ನಗರದಲ್ಲೇ ಇರಲಿದೆ. ಪ್ರಧಾನ ಕಚೇರಿಯನ್ನು ಬೆಂಗಳೂರಿಗೆ ಸ್ಥಳಾಂತರಿಸುವ ಪ್ರಸ್ತಾವ ಇಲ್ಲ. ಈ ಬ್ಯಾಂಕ್ ಅನ್ನು ಬೇರೆ ಬ್ಯಾಂಕ್ ಜೊತೆ ವಿಲೀನ ಮಾಡುವ ಪ್ರಸ್ತಾವಗಳೂ ಇಲ್ಲ. ಬ್ಯಾಂಕಿನ ಅಸ್ಮಿತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತೇವೆ’ ಎಂದು ಅವರು ಸ್ಪಷ್ಟಪಡಿಸಿದರು.
‘ಬ್ಯಾಂಕಿನ ಎಂಡಿ ಮತ್ತು ಸಿಇಒ ಬದಲಾವಣೆ ಆಡಳಿತಾತ್ಮಕ ನಿರ್ಧಾರ. ಇಂತಹ ಬದಲಾವಣೆಗಳು ಸಾಮಾನ್ಯ. ಎಂಡಿ ಮತ್ತು ಸಿಇಒ ನೇಮಕದ ಬಗ್ಗೆ ಆಡಳಿತ ಮಂಡಳಿ ಸೂಕ್ತ ನಿರ್ಧಾರ ತೆಗೆದುಕೊಂಡಿದೆ. ಇದರಲ್ಲಿ ಹೊರಗಿನವರು ಅಥವಾ ಒಳಗಿನವರು ಎಂಬ ಪ್ರಶ್ನೆ ಇಲ್ಲ. 1991ರಲ್ಲಿ ಕೇಂದ್ರ ಲೆಕ್ಕಪರಿಶೋಧನಾ ವಿಭಾಗದಲ್ಲಿದ್ದ ಯು.ಎನ್.ಭಟ್ ಬ್ಯಾಂಕಿನ ಎಂಡಿ ಆಗಿದ್ದರು. ಆ ನಂತರವೂ ಬಹುತೇಕ ಸಂದರ್ಭಗಳಲ್ಲಿ ಬ್ಯಾಂಕಿನಲ್ಲಿ ವಿವಿಧ ಹುದ್ದೆ ನಿರ್ವಹಿಸಿದವರನ್ನೇ ಎಂಡಿ ಆಗಿ
ನೇಮಕ ಮಾಡಲಾಗಿತ್ತು’ ಎಂದರು.
‘ಕ್ಲರ್ಕ್ ಆಗಿ ಕರ್ಣಾಟಕ ಬ್ಯಾಂಕ್ ಸೇರಿದ್ದೆ’
'ಕರ್ಣಾಟಕ ಬ್ಯಾಂಕಿಗೆ 1981ರಲ್ಲಿ ಕ್ಲರ್ಕ್ ಆಗಿ ಸೇರಿಕೊಂಡಿದ್ದ ನಾನು ಮಂಗಳೂರು ಮುಂಬೈ ಮತ್ತುದೆಹಲಿಗಳಲ್ಲಿ ಬ್ಯಾಂಕಿನ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದೇನೆ. 2019ರಲ್ಲಿ ನಿವೃತ್ತನಾಗಿದ್ದೆ. ಈಗ ಬ್ಯಾಂಕಿನ ಆಡಳಿತ ಮಂಡಳಿ ನನ್ನ ಹೆಗಲ ಮೇಲೆ ಹೆಚ್ಚಿನ ಹೊಣೆ ವಹಿಸಿದೆ. ಅದನ್ನು ಅಚ್ಚುಕಟ್ಟಾಗಿ ನಿಭಾಯಿಸುವೆ. ನನ್ನ ಎಲ್ಲ ನಿರ್ಧಾರಗಳೂ ಗ್ರಾಹಕ ಹಿತ ಕಾಯುವ ಆಶಯವನ್ನೇ ಹೊಂದಿರಲಿವೆ’ ಎಂದು ರಾಘವೇಂದ್ರ ಎಸ್. ಭಟ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.