ADVERTISEMENT

ಮಂಗಳೂರು: ಪಿಲಿಕುಳದಲ್ಲಿ ಹಕ್ಕಿಹಬ್ಬ ನಾಳೆಯಿಂದ

ಕಾಲೇಜು ವಿದ್ಯಾರ್ಥಿಗಳು, ಹಕ್ಕಿಪ್ರಿಯರು, ಸಾರ್ವಜನಿಕರು ಭಾಗಿ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 2:43 IST
Last Updated 8 ಜನವರಿ 2026, 2:43 IST
ಸುದ್ದಿಗೋಷ್ಠಿಯಲ್ಲಿ ಶಾಲೆಟ್ ಪಿಂಟೊ ಮಾತನಾಡಿದರು 
ಸುದ್ದಿಗೋಷ್ಠಿಯಲ್ಲಿ ಶಾಲೆಟ್ ಪಿಂಟೊ ಮಾತನಾಡಿದರು    

ಮಂಗಳೂರು: ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯು ಅರಣ್ಯ ಇಲಾಖೆ ಸಹಯೋಗದಲ್ಲಿ 12ನೇ ಆವೃತ್ತಿಯ ‘ಕರ್ನಾಟಕ ಹಕ್ಕಿ ಹಬ್ಬ’ವನ್ನು ನಗರದ ಹೊರವಲಯದ ಪಿಲಿಕುಳ ಸ್ಕೌಟ್ಸ್‌ ಮತ್ತು ಗೈಡ್ಸ್‌ ಭವನದಲ್ಲಿ ಜ.9ರಿಂದ 11ರವರೆಗೆ ಆಯೋಜಿಸಿದೆ ಎಂದು ಮಂಡಳಿಯ ಅಧ್ಯಕ್ಷೆ ಶಾಲೆಟ್ ಪಿಂಟೊ ಹೇಳಿದರು. 

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಪರಿಸರ ಸಂರಕ್ಷಣೆ ದೃಷ್ಟಿಯಿಂದ ಹಕ್ಕಿಗಳ ಉಳಿವು ಮಹತ್ವದ್ದಾಗಿದ್ದು, 2014ರಿಂದ ಹಕ್ಕಿ ಹಬ್ಬ ನಡೆಯುತ್ತಿದೆ. ಕರಾವಳಿ ತೀರದಲ್ಲಿ ಹೆಚ್ಚಾಗಿ ಕಂಡುಬರುವ ಬಿಳಿ ಹೊಟ್ಟೆಯ ಸಮುದ್ರ ಗಿಡುಗ (ವೈಟ್ ಬೆಲ್ಲಿ ಸೀ ಈಗಲ್) ಹಕ್ಕಿಯನ್ನು ಕೇಂದ್ರೀಕರಿಸಿ ಹಬ್ಬ ನಡೆಯುತ್ತಿದೆ’ ಎಂದರು.

‘ಪ್ರತಿವರ್ಷ ನೋಂದಾಯಿತ ಹಕ್ಕಿ ವೀಕ್ಷಕರು ಹಕ್ಕಿ ಹಬ್ಬದಲ್ಲಿ ಭಾಗವಹಿಸುತ್ತಿದ್ದರು. ವಿದ್ಯಾರ್ಥಿಗಳಲ್ಲಿ ಹಕ್ಕಿಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ, ಈ ಬಾರಿ ಅವರ ಜೊತೆಗೆ ಕಣಚೂರು ಮೆಡಿಕಲ್ ಕಾಲೇಜು, ಮಂಗಳೂರು ವಿವಿ, ಸೇಂಟ್ ಅಲೋಶಿಯಸ್, ಯೆನೆಪೋಯ ಕಾಲೇಜು ಸೇರಿದಂತೆ ಆರು ಕಾಲೇಜುಗಳ 180 ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂಥೋನಿ ಮರಿಯಪ್ಪ ಹೇಳಿದರು. 

ADVERTISEMENT

‘ಹಕ್ಕಿಗಳು ಹೆಚ್ಚಾಗಿ ಕಾಣಸಿಗುವ ನಾಲ್ಕು ಪ್ರಮುಖ ವಲಯಗಳನ್ನು ಗುರುತಿಸಿ ಒಟ್ಟು 12 ಕಡೆಗಳಲ್ಲಿ ಹಕ್ಕಿ ವೀಕ್ಷಣೆಗೆ ಸ್ಥಳ ನಿಗದಿಪಡಿಸಲಾಗಿದೆ. ಕಡಲ ತೀರದಲ್ಲಿ ಸಸಿಹಿತ್ಲು ಮತ್ತು ಮುಕ್ಕ, ಮರಗಳ ಪ್ರದೇಶದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಪಿಲಿಕುಳ, ನದಿ ಮತ್ತು ಸಮುದ್ರ ಸೇರುವ ಜಾಗವಾದ ಬೆಟ್ಟಂಪಾಡಿ, ಜೌಗು ಪ್ರದೇಶ ಇರುವ ಕೆಂಜಾರು, ಕಾವೂರು, ಜೋಕಟ್ಟೆ ಇನ್ನಿತರ ಸ್ಥಳಗಳಲ್ಲಿ ಹಕ್ಕಿ ವೀಕ್ಷಕರ ತಂಡ ಮೂರು ದಿನಗಳಲ್ಲಿ ಭೇಟಿ ನೀಡಲಿದೆ’ ಎಂದು ವಿವರಿಸಿದರು. 

‘ದಕ್ಷಿಣ ಕನ್ನಡದಲ್ಲಿ 420 ಜಾತಿಯ ಹಕ್ಕಿಗಳು ಇರುವುದನ್ನು ದಾಖಲಿಸಲಾಗಿದೆ. 40ಕ್ಕೂ ಹೆಚ್ಚು ಜಾತಿಯ ವಲಸೆ ಹಕ್ಕಿಗಳು ಬರುವುದನ್ನು ಗುರುತಿಸಲಾಗಿದೆ. ಹಕ್ಕಿಗಳು ವಲಸೆ ಬರುವ ಋತುವನ್ನು ಆಯ್ದುಕೊಂಡು ಹಕ್ಕಿ ಹಬ್ಬ ಆಯೋಜಿಸಲಾಗಿದೆ ಎಂದು ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ರಾಹುಲ್ ಹೇಳಿದರು. 

ಕರ್ನಾಟಕ ಹಕ್ಕಿ ಹಬ್ಬವನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಜ.9ರಂದು ಬೆಳಿಗ್ಗೆ 11 ಗಂಟೆಗೆ ಉದ್ಘಾಟಿಸುವರು. ಸ್ಪೀಕರ್ ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ ಭಾಗವಹಿಸುವರು. ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸುವರು ಎಂದರು.

ಉದ್ಘಾಟನೆ: ಜ.9ರಂದು ಬೆಳಿಗ್ಗೆ 9.15ಕ್ಕೆ ಅರಣ್ಯ ಇಲಾಖೆಯ ಮಂಗಳೂರು ವಿಭಾಗ ಕಚೇರಿಯನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸುವರು. ₹2.7 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಿದೆ. ಸುಳ್ಯ ಹಾಗೂ ಮೂಡುಬಿದಿರೆಯಲ್ಲಿ ಅರಣ್ಯ ಸಿಬ್ಬಂದಿ ವಸತಿ ಸಮುಚ್ಚಯವನ್ನು ತಲಾ ₹85 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ಕೂಡ ಇದೇ ವೇಳೆ ಉದ್ಘಾಟನೆಯಾಗಲಿದೆ. ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಸತಿ ಗೃಹ ನಿರ್ಮಾಣಕ್ಕೆ ₹1 ಕೋಟಿ ಅನುದಾನ ಮಂಜೂರು ಆಗಿದ್ದು, ಲಾಲ್‌ಬಾಗ್‌ನ ಕರಾವಳಿ ಮೈದಾನದ ಎದುರಿನ ಜಾಗದಲ್ಲಿ ನಿರ್ಮಾಣವಾಗಲಿರುವ ಉದ್ದೇಶಿತ ಕಟ್ಟಡಕ್ಕೆ ಸಚಿವರು ಶಂಕುಸ್ಥಾಪನೆ ನೆರವೇರಿಸುವರು ಎಂದು ಅಂಥೋನಿ ಮರಿಯಪ್ಪ ಹೇಳಿದರು. 

ಲಾವಣ್ಯ ಉಪಸ್ಥಿತರಿದ್ದರು. 

ಚಾರಣ ಮಾರ್ಗ ಸುಪರ್ದಿಗೆ ಯತ್ನ

ಅರಣ್ಯ ಇಲಾಖೆ ಅಡಿಯಲ್ಲಿರುವ ಚಾರಣ ಮಾರ್ಗಗಳನ್ನು (ಟ್ರೆಕ್ ರೂಟ್) ಪುನಃ ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಸುಪರ್ದಿಗೆ ಪಡೆಯಲು ಪ್ರಯತ್ನ ನಡೆಯುತ್ತಿದೆ ಎಂದು ಶಾಲೆಟ್ ಪಿಂಟೊ ಹೇಳಿದರು.

ಮಂಡಳಿ ಅಡಿಯಲ್ಲಿದ್ದ ಚಾರಣ ಮಾರ್ಗಗಳ ನಿರ್ವಹಣೆಯನ್ನು ತಾಂತ್ರಿಕ ಕಾರಣಗಳಿಂದ ಕೆಲವರ್ಷಗಳ ಹಿಂದೆ ಅರಣ್ಯ ಇಲಾಖೆಗೆ ವಹಿಸಲಾಗಿತ್ತು. ಪುನಃ ಅವುಗಳನ್ನು ಮಂಡಳಿ ಅಡಿಯಲ್ಲಿ ತಂದು ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ಕಾರ್ಯಕ್ರಮ ರೂಪಿಸಲು ಯೋಚಿಸಲಾಗಿದೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಸಿಲೆ ಘಾಟ್ ಸುಬ್ರಹ್ಮಣ್ಯ ಕುಮಾರ ಪರ್ವತ ಪಿಲಿಕುಳ ಚಾರಣ ಮಾರ್ಗ ಗಡಾಯಿಕಲ್ಲು ಕೊಣಾಜೆ ಕಲ್ಲು ಸೇರಿದಂತೆ ಆರು ಚಾರಣ ಮಾರ್ಗಗಳು ಇವೆ. ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಚಾರಣ ಮಾರ್ಗಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.