ADVERTISEMENT

ಕರ್ನಾಟಕ ಬಂದ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್ ಇಲ್ಲ; ಧರಣಿ, ಪ್ರತಿಭಟನೆ

ಖಾಸಗಿ, ಸರ್ಕಾರಿ ಬಸ್ ಓಡಾಟ ಸಾಮಾನ್ಯ: ವ್ಯಾಪಾರ- ವಹಿವಾಟು ಆರಂಭ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2020, 5:29 IST
Last Updated 28 ಸೆಪ್ಟೆಂಬರ್ 2020, 5:29 IST
ಎಂದಿನಂತೆ ಸಂಚಾರ ನಡೆಸುತ್ತಿರುವ ವಾಹನಗಳು
ಎಂದಿನಂತೆ ಸಂಚಾರ ನಡೆಸುತ್ತಿರುವ ವಾಹನಗಳು   

ಮಂಗಳೂರು: ಕರ್ನಾಟಕ ಬಂದ್ ಗೆ ದಕ್ಷಿಣ ಕನ್ನಡದಲ್ಲಿ ನೀರಸ ಪ್ರತಿಕ್ರಿಯೆ ದೊರೆತಿದ್ದು, ಎಂದಿನಂತೆ ಖಾಸಗಿ ಬಸ್‌ಗಳುಮತ್ತು ಕೆಎಸ್ಆರ್‌ಟಿಸಿ ಬಸ್‌ಗಳು, ಆಟೋಗಳು ರಸ್ತೆಗಿಳಿದಿವೆ. ಬಂದರು ಪ್ರದೇಶದಲ್ಲಿ ವ್ಯಾಪಾರ-ವಹಿವಾಟುಗಳು ಆರಂಭವಾಗಿವೆ.

ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಬಿಗಿ ಪೊಲೀಸ್ಬಂದೋಬಸ್ತ್ ಮಾಡಲಾಗಿದ್ದು, ನಗರದಾದ್ಯಂತ 300 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

6 ಕೆಎಸ್‌ಆರ್‌ಪಿ, 8 ಡಿಎಆರ್ ತುಕಡಿಗಳು ಮತ್ತು 50 ಹೋಂ ಗಾರ್ಡ್ ಗಳನ್ನು ನಿಯೋಜನೆ ಮಾಡಿದ್ದು, ಬೆಳಿಗ್ಗೆಯಿಂದಲೇ ಪೊಲೀಸ್ ಅಧಿಕಾರಿಗಳು ರೌಂಡ್ಸ್ ನಲ್ಲಿದ್ದಾರೆ.

ADVERTISEMENT

ಬಲವಂತವಾಗಿ ಬಂದ್ ನಡೆಸಲು ಮುಂದಾದವರಿಗೆ ಮತ್ತು ಕೋವಿಡ್ 19 ನಿಯಮಾವಳಿ ಉಲ್ಲಂಘಿಸಿದವರಿಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಮಂಗಳೂರಿನಲ್ಲಿ ಕೇವಲ ಪ್ರತಿಭಟನೆ ಮಾತ್ರ ನಡೆಯಲಿದೆ. ನಗರದ ಮಿನಿ ವಿಧಾನಸೌಧದ ಎದುರು ರೈತಪರ ಸಂಘಟನೆಗಳು, ಡಿವೈಎಫ್‌ಐ ,ಸಿಪಿಐ, ಸಿಪಿಐಎಂ, ಕಾಂಗ್ರೆಸ್, ಜೆಡಿಎಸ್, ಸಿಐಟಿಯು, ಎಐಟಿಯುಸಿ, ಡಿ ಎಸ್ ಎಸ್ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.