ADVERTISEMENT

ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಡಿಕೆಶಿ ಬದಲಿಸುವ ಹಠ ಇಲ್ಲ: ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2025, 14:24 IST
Last Updated 18 ಫೆಬ್ರುವರಿ 2025, 14:24 IST
ಸತೀಶ ಜಾರಕಿಹೊಳಿ
ಸತೀಶ ಜಾರಕಿಹೊಳಿ   

ಮಂಗಳೂರು: ‘ಡಿ.ಕೆ.ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಬದಲಿಸುವ ವಿಚಾರದಲ್ಲಿ ನಾವು ಹಠಕ್ಕೆ ಬಿದ್ದಿಲ್ಲ. ಪಕ್ಷದ ದೆಹಲಿ ಹೈಕಮಾಂಡ್ ನಮಗೆ ದೇವಸ್ಥಾನ ಇದ್ದ ಹಾಗೆ. ಹೈಕಮಾಂಡ್ ಬಳಿ ಪ್ರಾರ್ಥನೆ ಮಾಡಿದ್ದೇವೆ. ನಿರ್ಧಾರ ಕೈಗೊಳ್ಳುವುದು ಅವರಿಗೆ ಬಿಟ್ಟಿದ್ದು’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಇಲ್ಲಿ ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ನಮ್ಮ ಪಕ್ಷ ಬೆಳೆಯಬೇಕು, ಮತ್ತೆ ಅಧಿಕಾರಕ್ಕೆ ಬರಬೇಕು ಎಂಬ ಕಾರಣಕ್ಕೆ ಹೈಕಮಾಂಡ್‌ ಮುಂದೆ ಕೆಲವೊಂದಿಷ್ಟು ವಿಚಾರಗಳನ್ನು ವ್ಯಕ್ತಪಡಿಸಿದ್ದೇವೆ. ಸಣ್ಣ ಪುಟ್ಟ ವ್ಯತ್ಯಾಸಗಳಿದ್ದರೆ ಸರಿಪಡಿಸುವ ಕಾರ್ಯವನ್ನು ಹೈಕಮಾಂಡ್ ಮಾಡುತ್ತದೆ’ ಎಂದರು.

‘ದಲಿತ ಸಮಾವೇಶ ಸದ್ಯಕ್ಕೆ ಇಲ್ಲ. ಅದು ನಡೆಯುವುದು ಗೃಹಸಚಿವ ಜಿ.ಪರಮೇಶ್ವರ ನೇತೃತ್ವದಲ್ಲಿ. ಅವರು ಹೇಳಿದಾಗ ಸಮಾವೇಶ ನಡೆಸುತ್ತೇವೆ’ ಎಂದರು.

ADVERTISEMENT

‘ಸಚಿವ ರಾಜಣ್ಣ ಅವರ ಹೇಳಿಕೆಗಳಿಂದ ಮುಜುಗರ ಆಗುತ್ತಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್‌ ಅವರು ಹೈಕಮಾಂಡ್‌ಗೆ ಪತ್ರ ಬರೆಯುವ ಅವಶ್ಯಕತೆ ಇರಲಿಲ್ಲ. ರಾಜಣ್ಣ ಅವರನ್ನು ಇಲ್ಲೇ ಕರೆಸಿ ಚರ್ಚೆ ಮಾಡಬಹುದಿತ್ತು’ ಎಂದು ಅಭಿಪ್ರಾಯಪಟ್ಟರು.  

‘ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿ ಎಂದು ಡಿ.ಕೆ.ಶಿವಕುಮಾರ್ ಅವರೇ ಹೇಳಿರುವುದರಿಂದ ಈ ಬಗ್ಗೆ ಪ್ರತಿಕ್ರಿಯಿಸುವ ಪ್ರಶ್ನೆಯೇ ಬರುವುದಿಲ್ಲ. ಸಚಿವರ ಬದಲಾವಣೆ ಕುರಿತು ನಮ್ಮ ಹಂತದಲ್ಲಿ ಯಾವುದೇ ಚರ್ಚೆ ನಡೆದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.