ಪ್ರಾತಿನಿಧಿಕ ಚಿತ್ರ
ಕಾಸರಗೋಡು: ಜಿಲ್ಲೆಯಲ್ಲಿ ಗುರುವಾರ ಮಳೆಯ ಬಿರುಸು ತಗ್ಗಿದೆ. ಸಣ್ಣ ಪ್ರಮಾಣದ ಮಳೆ ಆಗಾಗ ಸುರಿದರೂ ಮಧ್ಯೆ ಬಿಸಿಲು ಕಾಣಿಸಿಕೊಂಡಿತ್ತು.
ಬುಧವಾರ ತಡರಾತ್ರಿ ಸುರಿದ ಬಿರುಸಿನ ಗಾಳಿ–ಮಳೆಗೆ ಜಿಲ್ಲೆಯ ಕೆಲವೆಡೆ ಹಾನಿ ಆಗಿದೆ. ಕೀಯೂರಿನಲ್ಲಿ 8 ವಿದ್ಯುತ್ ಕಂಬಗಳು ಉರುಳಿವೆ. ಇಲ್ಲಿನ ಕರುಣನ್ ಎಂಬುವರ ಕಾರಿನ ಮೇಲೆ ವಿದ್ಯುತ್ ಕಂಬ ಬಿದ್ದು ಹಾನಿಯಾಗಿದೆ.
ಕುಂಬಳೆಯ ಶಿರಿಯದ ಚಕ್ಕಂಡಡಿ ಎಂಬಲ್ಲಿ ಅಬ್ದುಲ್ ಹಮೀದ್ ಎಂಬುವರ ಮನೆ ಬಳಿಯ ಗುಡ್ಡ ಕುಸಿದು ಪರಿಣಾಮ ಅಲ್ಲಿದ್ದ ಮರ ಮನೆ ಮೇಲೆ ಬಿದ್ದು ಹಾನಿಯಾಗಿದೆ. ಮನೆಮಂದಿ ಗಾಯಗಳಿಲ್ಲದೆ ಪಾರಾಗಿದ್ದಾರೆ. ಅಗ್ನಿಶಾಮಕಸಿಬ್ಬಂದಿ ಕುಟುಂಬ ಸದಸ್ಯರನ್ನು ಸುರಕ್ಷಿತ ತಾಣಕ್ಕೆ ತಲಪಿಸಿದರು.
ಕುಂಬಳೆ ಟೋಲ್ ಬೂತ್ ನಿರ್ಮಾಣಕ್ಕೆ ಹೈಕೋರ್ಟ್ ತಡೆಯಾಜ್ಞೆ
ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಆರಿಕ್ಕಾಡಿ ಕಡವತ್ ಎಂಬಲ್ಲಿ ಟೋಲ್ ಬೂತ್ ನಿರ್ಮಿಸುವ ಪ್ರಯತ್ನಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. 20 ಕಿ.ಮೀ ಅಂತರದಲ್ಲಿ ಸಾರ್ವಜನಿಕರ ವಿರೋಧದ ನಡುವೆಯೂ ಟೋಲ್ ಬೂತ್ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿ ರಚಿಸಲಾದ ಕ್ರಿಯಾ ಸಮಿತಿಯ ಪ್ರತಿನಿಧಿಯಾಗಿ ಬ್ಲಾಕ್ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ ಅವರು ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿ ಹೈಕೋರ್ಟ್ ಈ ಆದೇಶ ನೀಡಿದೆ.
ಜೂನ್ 20ರಂದು ಮತ್ತೆ ಈ ಸಂಬಂಧ ಪರಿಶೀಲನೆ ನಡೆಸುವುದಾಗಿ ತಿಳಿಸಲಾಗಿದೆ. ಟೋಲ್ ಬೂತ್‌ಗಳ ನಡುವೆ ಕನಿಷ್ಠ 60 ಕಿ.ಮೀ. ಅಂತರ ಇರಬೇಕೆಂಬ ಕಾನೂನು ಇದ್ದರೂ, 20 ಕಿ.ಮೀ ಅಂತರದಲ್ಲಿ ನಿರ್ಮಿಸಲಾಗುವ ಈ ಟೋಲ್ ಬೂತ್ ನಿರ್ಮಾಣ ಯತ್ನದ ವಿರುದ್ಧ ಸಾರ್ವಜನಿಕರು ಕ್ರಿಯಾ ಸಮಿತಿ ರಚಿಸಿ ರಂಗಕ್ಕಿಳಿದಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ
ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನೆ ದಿನಾಚರಣೆ ಧರ್ಮತ್ತಡ್ಕ ಯುವಕ ಸಂಘ ಗ್ರಂಥಾಲಯದಲ್ಲಿ ನಡೆಯಿತು.
ಪರಿಷತ್‌ನ ಕೇರಳ ಗಡಿನಾಡ ಘಟಕ ಮತ್ತು ಗ್ರಂಥಾಲಯದ ವತಿಯಿಂದ ಜರುಗಿದ ಸಮಾರಂಭದಲ್ಲಿ ಪ್ರಾಧ್ಯಾಪಕ ಹರೀಶ್ ಜಿ.ಉಪನ್ಯಾಸ ನೀಡಿದರು.
ಘಟಕದ ಗೌರವ ಕಾರ್ಯದರ್ಶಿ ಶೇಖರ ಶೆಟ್ಟಿ ಬಾಯಾರು ಅಧ್ಯಕ್ಷತೆ ವಹಿಸಿದ್ದರು. ವಿವಿಧ ವಲಯಗಳ ಪ್ರತಿನಿಧಿಗಳಾದ ಸಿ.ಎಚ್.ರಾಮಮೋಹನ ಚೆಕ್ಕೆ, ಎನ್.ಶಂಕರನಾರಾಯಣ ಭಟ್, ರಾಮಚಂದ್ರ ಭಟ್ ಎನ್., ನೇರೋಳು ಮಹಾಲಿಂಗ ಭಟ್, ರವಿಲೋಚನ ಸಿ.ಎಚ್., ರಾಧಾಮಾಧವ ಆಟಿಕುಕ್ಕೆ, ಈಶ್ವರಿ ಡಿ.ಭಾಗವಹಿಸಿದ್ದರು. ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪಿ.ರಾಮಚಂದ್ರ ಭಟ್ ಧರ್ಮತ್ತಡ್ಕ ವಂದಿಸಿದರು.
ಬಿ.ನರಸಿಂಗ ರಾವ್‌ಗೆ ಅಭಿನಂದನೆ
ಕಾಸರಗೋಡು: ಸಾಹಿತಿ ಬಿ.ನರಸಿಂಗ ರಾವ್ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ವತಿಯಿಂದ ಅಭಿನಂದನಾ ಸಮಾರಂಭ ನಡೆಯಿತು.
ಪರಿಷತ್ತಿನ ನಡಿಗೆ ಹಿರಿಯ ಸಾಧಕರ ಕಡೆಗೆ ಎಂಬ ಕಾರ್ಯಕ್ರಮ ಅಂಗವಾಗಿ ನಗರದ ನಾಯಕ್ಸ್ ರಸ್ತೆಯ ನಿವಾಸದಲ್ಲಿ ಸಮಾರಂಭ ನಡೆಯಿತು.
ಘಟಕದ ಅಧ್ಯಕ್ಷ ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅಭಿನಂದನೆ ನಡೆಸಿದರು. ವಕೀಲ ಕೆ.ಸತ್ಯನಾರಾಯಣ ತಂತ್ರಿ ಅಭಿನಂದನಾ ಭಾಷಣ ಮಾಡಿದರು. ವಿವಿಧ ವಲಯಗಳ ಪ್ರತಿನಿಧಿಗಳಾದ ಪ್ರೊ.ಪಿ.ಎನ್.ಮೂಡಿತ್ತಾಯ, ವೈ.ಸತ್ಯನಾರಾಯಣ, ರಮೇಶ ಏತಡ್ಕ, ಪ್ರೇಮಾ ಶರಧಿ ಭಾಗವಹಿಸಿದ್ದರು.
ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶೇಖರ ಶೆಟ್ಟಿ ಬಾಯಾರು ವಂದಿಸಿದರು.
ನಿಯಂತ್ರಣ ಕಳೆದುಕೊಂಡು ಮಗುಚಿದ ಕಾರುಗಳು
ಕಾಸರಗೋಡು: ಜಿಲ್ಲೆಯಲ್ಲಿ ಗುರುವಾರ ನಡೆದ ಪ್ರತ್ಯೇಕ ಘಟನೆಗಳಲ್ಲಿ ಕಾರುಗಳು ನಿಯಂತ್ರಣ ಕಳೆದುಕೊಂಡು ಮಗುಚಿವೆ. ಪ್ರಯಾಣಿಕರು ಪಾರಾಗಿದ್ದಾರೆ.
ಸೀತಾಂಗೋಳಿ-ಪೆರ್ಲ ರಸ್ತೆಯ ಕಟ್ಟತ್ತಡ್ಕ ಎಂಬಲ್ಲಿ ಕಾರುಉರುಳಿದೆ. ಸೀತಾಂಗೋಳಿಯಿಂದ ಉಪ್ಪಿನಂಗಡಿಗೆ ತೆರಳುತ್ತಿದ್ದ ಕಾರು ನಿಯಂತ್ರಣ ಕಳೆದುಕೊಂಡಿತ್ತು. ಇನ್ನೊಂದು ಘಟನೆಯಲ್ಲಿ ಕುಂಬಳೆಯ ಭಾಸ್ಕರನಗರದಲ್ಲಿ ಸೀತಾಂಗೋಳಿಗೆ ತೆರಳುತ್ತಿದ್ದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಮಗುಚಿದೆ.
ಅಪಘಾತ: 6 ಮಂದಿಗೆ ಗಾಯ
ಕಾಸರಗೋಡು: ಕುಂಬಳೆಯ ಭಾಸ್ಕರನಗರದಲ್ಲಿ ಬಸ್ ಪ್ರಯಾಣಿಕರ ತಂಗುದಾಣಕ್ಕೆ ಕಾರು ಡಿಕ್ಕಿಯಾದ ಪರಿಣಾಮ 6 ಮಂದಿ ಗಾಯಗೊಂಡಿದ್ದಾರೆ. ಬದಿಯಡ್ಕ ಬಳಿಯ ಮಾವಿನಕಟ್ಟೆ ನಿವಾಸಿಗಳಾದ ಬೇಬಿ, ಶಿವರಾಮ, ಅಶ್ವತ್ಥ್, ಭವ್ಯಾ ಸಹಿತ 6 ಮಂದಿ ಗಾಯಗೊಂಡು ವಿವಿಧ ಅಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಪೇರೋಲ್‌ನಿಂದ ಮಾವಿನಕಟ್ಟೆಗೆ ಮರಳುತ್ತಿದ್ದ ಕಾರು ಅಪಘಾತಕ್ಕೀಡಾಗಿತ್ತು.
ವಿದ್ಯುತ್ ಯಾರ್ಡ್‌ಗೆ ಬೆಂಕಿ
ಕಾಸರಗೋಡು: ಮುಳ್ಳೇರಿಯ 110 ಕೆ.ವಿ ವಿದ್ಯುತ್ ಯಾರ್ಡ್‌ಗೆ ಗುರುವಾರ ಬೆಂಕಿತಗುಲಿದೆ. ಅಗ್ನಿಶಾಮಕಸಿಬ್ಬಂದಿಬೆಂಕಿ ನಂದಿಸಿದೆ. ಬೆಂಕಿ ತಗುಲಿ ಹಾನಿಯಾದ ಪರಿಣಾಮ ಮುಳ್ಳೇರಿಯ, ಬದಿಯಡ್ಕ, ಚೆರ್ಕಳ ಸಹಿತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯಉಂಟಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.