ADVERTISEMENT

ಎಂಫ್ರೆಂಡ್ಸ್‌ನ ಕಾರುಣ್ಯ ಯೋಜನೆ ಉದ್ಘಾಟನೆ

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ವೆನ್ಲಾಕ್, ಲೇಡಿಗೋಷನ್ ಉನ್ನತೀರಣ: ಆರೋಗ್ಯ ಸಚಿವ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2025, 7:56 IST
Last Updated 3 ನವೆಂಬರ್ 2025, 7:56 IST
ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ರೋಗಿಗಳ ಜೊತೆ ಉಳಿದುಕೊಂಡವರಿಗೆ ಆಹಾರದ ಪೊಟ್ಟಣ ವಿತರಿಸುವ ಮೂಲಕ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಅವರು ಕಾರುಣ್ಯ ಯೋಜನೆಗೆ ಶನಿವಾರ ಚಾಲನೆ ನೀಡಿದರು
ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ರೋಗಿಗಳ ಜೊತೆ ಉಳಿದುಕೊಂಡವರಿಗೆ ಆಹಾರದ ಪೊಟ್ಟಣ ವಿತರಿಸುವ ಮೂಲಕ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಅವರು ಕಾರುಣ್ಯ ಯೋಜನೆಗೆ ಶನಿವಾರ ಚಾಲನೆ ನೀಡಿದರು   

ಮಂಗಳೂರು:  ಜಿಲ್ಲಾ ಸರ್ಕಾರಿ ವೆನ್ಲಾಕ್ ಆಸ್ಪತ್ರೆ ಮತ್ತು ಪ್ರತಿದಿನ 18ರಿಂದ 20 ಹೆರಿಗೆ ನಡೆಸುವ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಗಳು ರಾಜ್ಯಕ್ಕೆ ಮಾದರಿ. ಈ ಆ್ಪತ್ರೆಗಳನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ  ರೋಗಿಗಳ ಆರೈಕೆಗಾಗಿ ಜೊತೆಗಿರುವವರಿಗೆ ಎಂಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್ ವತಿಯಿಂದ ರಾತ್ರಿ ಊಟ ವಿತರಿಸುವ ವಿಸ್ತರಿತ ಕಾರುಣ್ಯ ಯೋಜನೆಗೆ ಚಾಲನೆ ನೀಡಿ ಅವರು ಶನಿವಾರ ಮಾತನಾಡಿದರು.

ಇಷ್ಟು ಸ್ವಚ್ಛ ಪರಿಸರ, ಗುಣಮಟ್ಟದ ಚಿಕಿತ್ಸೆ ಬೇರಾವುದೇ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾಣಸಿಗದು.  ವೆನ್ಲಾಕ್‌ ಆಸ್ಪತ್ರೆಯಲ್ಲಿ ₹ 70 ಕೋಟಿ ಮೊತ್ತದಲ್ಲಿ ಹೊರ ರೋಗಿ ವಿಭಾಗ ಸಿದ್ಧಗೊಳ್ಳುತ್ತಿದೆ. ಲೇಡಿಗೋಷನ್‌ನಲ್ಲಿ ಐಐಸಿಯು ನಿರ್ಮಾಣವಾಗಿದೆ. ಜೊತೆಗೆ ಇನ್ನಷ್ಟು ಸೌಲಭ್ಯ ಒದಗಿಸಿ ಇವುಗಳನ್ನು ಉತ್ಕೃಷ್ಟ ಆಸ್ಪತ್ರೆಗಳನ್ನಾಗಿಸುತ್ತೇವೆ ಎಂದರು.

ADVERTISEMENT

‘ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗುವ ರೋಗಿಗಳಿಗೆ ಸರ್ಕಾರವೇ ಊಟ ನೀಡುತ್ತಿದೆ. ರೋಗಿಗಳ ಆರೈಕೆಗಾಗಿ ಜೊತೆಯಲ್ಲಿರುವವರು ಊಟಕ್ಕಾಗಿ ಹೊರಗೆ ಹೋಗುವುದು ಕಷ್ಟ. ಎಂಫ್ರೆಂಡ್ಸ್ ಈ ಕೊರತೆ ನೀಗಿಸುತ್ತಿದೆ’ ಎಂದರು.

ಸಂಸ್ಥೆಯ ವತಿಯಿಂದ ನೀಡುವ ‘ಕರುಣಾಳು ಕನ್ನಡಿಗ' ಪ್ರಶಸ್ತಿಯನ್ನು ಉದ್ಯಮಿ ರೋಹನ್ ಮೊಂತೇರೊ ಪರವಾಗಿ ನಿರ್ದೇಶಕ ಡಿಯೋನ್ ಮೊಂತೇರೊ ಸ್ವೀಕರಿಸಿದರು.  

ಎಂಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸುಜಾಹ್ ಮೊಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಐವನ್ ಡಿಸೋಜ ಶುಭ ಹಾರೈಸಿದರು.

ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಚ್.ಆರ್. ತಿಮ್ಮಯ್ಯ, ಲೇಡಿಗೋಷನ್ ಆರ್‌ಎಂಒ ಡಾ.ಜಗದೀಶ್‌ ಕೆ., ಎಂಫ್ರೆಂಡ್ಸ್ ಸ್ಥಾಪಕ ರಶೀದ್ ವಿಟ್ಲ, ಖಜಾಂಚಿ ಝುಬೇರ್ ಬುಳೆರಿಕಟ್ಟೆ, ಟ್ರಸ್ಟಿಗಳಾದ ಅನ್ವರ್ ಹುಸೇನ್, ಶೇಕ್ ಇಸಾಕ್, ಅಬೂಬಕರ್ ಪುತ್ತು, ಡಾ.ಮುಬಶ್ಶಿರ್, ಹಂಝ ಬಸ್ತಿಕೋಡಿ, ಮುಸ್ತಫಾ ಗೋಳ್ತಮಜಲು, ಬಶೀರ್ ಅಹ್ಮದ್, ಇಸ್ಮಾಯಿಲ್ ಕೋಲ್ಪೆ, ಇಬ್ರಾಹಿಂ ನಂದಾವರ, ಹಸೈನಾರ್ ಶಾಫಿ, ಮೊಹಮ್ಮದ್ ಸಫ್ವಾನ್ ವಿಟ್ಲ, ಮುಹಮ್ಮದ್ ಕುಂಞಿ ಟಾಪ್ಕೊ  ಭಾಗವಹಿಸಿದ್ದರು.

ಎಂಫ್ರೆಂಡ್ಸ್ ಕಾರುಣ್ಯ ವಿಭಾಗದ ಮುಖ್ಯಸ್ಥ ಮೊಹಮ್ಮದ್ ಹನೀಫ್ ಗೋಳ್ತಮಜಲು ಸ್ವಾಗತಿಸಿದರು. ಲೇಡಿಗೋಷನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ದುರ್ಗಾಪ್ರಸಾದ್ ಎಂ.ಆರ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂಫ್ರೆಂಡ್ಸ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆರಿಫ್ ಪಡುಬಿದ್ರಿ ವಂದಿಸಿದರು. ಬಿ.ಎ.ಮೊಹಮ್ಮದ್ ಅಲಿ ಕಮ್ಮರಡಿ  ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.