ಬಸ್
– ಪ್ರಜಾವಾಣಿ ಚಿತ್ರ
ಕಾಸರಗೋಡು/ಮಂಗಳೂರು: ಕುಂಬಳೆಯ ಆರಿಕ್ಕಾಡಿಯಲ್ಲಿದ್ದ ಟೋಲ್‌ಗೇಟ್ ಮುಚ್ಚಿ ಟೋಲ್ ಸಂಗ್ರಹ ರದ್ದುಗೊಳಿಸಿದ ಕಾರಣ ಮಂಗಳೂರಿನಿಂದ ಕೇರಳಕ್ಕೆ ತೆರಳುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳ ದರವನ್ನೂ ಇಳಿಕೆ ಮಾಡಲಾಗಿದೆ.
ಆರಿಕ್ಕಾಡಿ ಟೋಲ್ ವಿರುದ್ಧ ಜನಪರ ಮುಷ್ಕರ ಸಮಿತಿ ನೇತೃತ್ವದಲ್ಲಿ ತೀವ್ರ ಪ್ರತಿಭಟನೆಗಳ ಸರಣಿ ನಡೆದಿತ್ತು. ಇದರ ಬೆನ್ನಲ್ಲೇ ಟೋಲ್ ರದ್ದುಗೊಳಿಸಿ ಕೇಂದ್ರ ಸರ್ಕಾರ ಮಂಗಳವಾರ ಆದೇಶ ಹೊರಡಿಸಿತ್ತು. ಹೀಗಾಗಿ ಕೆಎಸ್‌ಆರ್‌ಟಿಸಿ ಬಸ್ ದರವನ್ನು ಬುಧವಾರ ಬೆಳಿಗ್ಗೆಯಿಂದ ಪರಿಷ್ಕರಿಸಲಾಗಿದೆ.
‘ಟೋಲ್ ಸಂಗ್ರಹ ಆರಂಭವಾಗಿ 3 ದಿನಗಳ ನಂತರ ಕರ್ನಾಟಕ ಸಾರಿಗೆ ಬಸ್ ಗಳಲ್ಲಿ ₹ 7 ಮತ್ತು ರಾಜಹಂಸ ಬಸ್‌ಗಳಲ್ಲಿ ₹ 10 ಹೆಚ್ಚುವರಿಯಾಗಿ ಪಡೆಯಲಾಗುತ್ತಿತ್ತು. ಬುಧವಾರ ಬೆಳಿಗ್ಗೆಯಿಂದ ಹಳೆಯ ದರವನ್ನೇ ಪಡೆಯಲಾಗುತ್ತಿದೆ’ ಎಂದು ಮಂಗಳೂರು ವಿಭಾಗದ ಸಂಚಾರ ನಿಯಂತ್ರಣ ಅಧಿಕಾರಿ (ಡಿಟಿಒ) ಕಮಲ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ವಿಜಯೋತ್ಸವ ಮೆರವಣಿಗೆ: ಟೋಲ್ ರದ್ದುಗೊಳಿಸಿದ ಕಾರಣ ಬಿಜೆಪಿ ಮತ್ತು ಮುಷ್ಕರ ಸಮಿತಿ ಕಾರ್ಯಕರ್ತರು ಕುಂಬಳೆಯಲ್ಲಿ ಪ್ರತ್ಯೇಕವಾಗಿ ವಿಜಯೋತ್ಸವ ಆಚರಿಸಿದರು. ಪಕ್ಷ ಸತತವಾಗಿ ನಡೆಸಿದ ಪ್ರಯತ್ನದ ಫಲವಾಗಿ ಕೇಂದ್ರ ಸರ್ಕಾರ ಟೋಲ್ ಮುಚ್ಚುವ ಆದೇಶ ನೀಡಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷೆ ಎಂ.ಎ.ಲ್ ಅಶ್ವಿನಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪ್ರತಿಭಟನೆಯ ಫಲ: ಹೋರಾಟ ಸಮಿತಿ ನೇತೃತ್ವದಲ್ಲಿ ನಡೆಸಿದ ಪ್ರತಿಭಟನೆ ಮತ್ತು ನ್ಯಾಯಾಂಗ ಹೋರಾಟದ ಫಲವಾಗಿ ಟೋಲ್ ರದ್ದು ಮಾಡಲಾಗಿದೆ ಎಂದು ಶಾಸಕ ಎ.ಕೆ.ಎಂ ಅಶ್ರಫ್ ಅಭಿಪ್ರಾಯಪಟ್ಟರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂಡರ್ ಪಾಸ್ ಸೇರಿದಂತೆ ಅನೇಕ ಸಮಸ್ಯೆಗಳು ಮಂಜೇಶ್ವರ ಭಾಗದಲ್ಲಿ ಇನ್ನೂ ಇವೆ. ಈ ಸಂಬಂಧ ಹೋರಾಟ ಮುಂದು ವರಿಯಲಿದೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.