ADVERTISEMENT

ದ.ಕ. ಆಡಳಿತದ ವಿರುದ್ಧ ಕಾಸರಗೋಡು ಬಿಜೆಪಿ ಹೋರಾಟ: ಬಿಜೆಪಿ vs‌ ಬಿಜೆಪಿ ಎಂದು ಕುಹಕ

​ಪ್ರಜಾವಾಣಿ ವಾರ್ತೆ
Published 9 ಜೂನ್ 2020, 6:10 IST
Last Updated 9 ಜೂನ್ 2020, 6:10 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮಂಗಳೂರು: ದಕ್ಷಿಣ ಕನ್ನಡ ಮತ್ತು ಕಾಸರಗೋಡು ನಡುವೆ ದೈನಂದಿನ ವ್ಯವಹಾರ, ಉದ್ಯೋಗಕ್ಕಾಗಿ ಸಂಚರಿಸುವವರಿಗೆ ಮುಕ್ತ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಕಾಸರಗೋಡು ಜಿಲ್ಲಾ ಘಟಕದ ಮುಖಂಡರು ಸೋಮವಾರ ತಲಪಾಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ನಡೆಸಿದರು.

ಕಾಸರಗೋಡಿನಲ್ಲಿ ಕೋವಿಡ್–19 ಸೋಂಕು ಹೆಚ್ಚುತ್ತಿದ್ದ ವೇಳೆ ಉಭಯ ಜಿಲ್ಲೆಗಳ ತಲಪಾಡಿ ಗಡಿಯನ್ನು ಮುಚ್ಚಲಾಗಿತ್ತು. ಬಳಿಕ ಕೇರಳ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ವೈದ್ಯಕೀಯ ತುರ್ತು ಅವಶ್ಯಕತೆಗಳಿಗೆ ಸಂಚಾರದ ಅವಕಾಶ ಲಭಿಸಿತ್ತು. ಈಗ ಲಾಕ್‌ಡೌನ್ ಸಡಿಲಗೊಂಡರೂ ದಕ್ಷಿಣ ಕನ್ನಡ ಜಿಲ್ಲಾಡಳಿತವು ಸಂಚಾರಕ್ಕೆ ಅನುವು ಮಾಡಿಕೊಡದ ಪರಿಣಾಮ ಕಾಸರಗೋಡು ಬಿಜೆಪಿ ಪ್ರತಿಭಟನೆ ನಡೆಸಿತ್ತು.

ಕುಂಜತ್ತೂರಿನಿಂದ ಕಾಲ್ನಡಿಗೆಯಲ್ಲಿ ತಲಪಾಡಿಗೆ ಹೊರಟ ಕಾಸರಗೋಡು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಕಾಂತ್ ಮತ್ತಿತರರನ್ನು ದಾರಿ ಮಧ್ಯೆ ಪೊಲೀಸರು ತಡೆದರು. ಬಳಿಕ ತಲಪಾಡಿ ಚೆಕ್‌ಪೋಸ್ಟ್ ಬಳಿ ಬಂದ ಪ್ರತಿಭಟನಾಕಾರರು ದ.ಕ. ಜಿಲ್ಲಾಡಳಿತದ ಧೋರಣೆಯನ್ನು ಟೀಕಿಸಿದರು.

ADVERTISEMENT

ಬಿಜೆಪಿ ಮುಖಂಡ ಕೋಟ ಶ್ರೀನಿವಾಸ ಪೂಜಾರಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಹೀಗಾಗಿ ಬಿಜೆಪಿ ಕಾಸರಗೋಡು ಜಿಲ್ಲಾ ಘಟಕದ ಪ್ರತಿಭಟನೆಯನ್ನು ‘ಬಿಜೆಪಿ ವರ್ಸಸ್‌ ಬಿಜೆಪಿ’ ಎಂದು ಸಾರ್ವಜನಿಕರು ವಿಡಂಬನೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.