ಸುಬ್ರಹ್ಮಣ್ಯ: ಬಾಲಿವುಡ್ ನಟಿ ಕತ್ರಿನಾ ಕೈಫ್ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಬುಧವಾರ ಸರ್ಪ ಸಂಸ್ಕಾರ ಸೇವೆ, ಆಶ್ಲೇಷ ಬಲಿ ಪೂಜೆ ನೆರವೇರಿಸಿದರು. ಬಳಿಕ ಕುಕ್ಕೆಯಿಂದ ನಿರ್ಗಮಿಸಿದರು.
ಕ್ಷೇತ್ರಕ್ಕೆ ಮಂಗಳವಾರವೇ ಬಂದಿದ್ದ ಕತ್ರಿನಾ ಕೈಫ್, ಅನ್ನಪ್ರಸಾದ ಸ್ವೀಕರಿಸಿ ಸುಬ್ರಹ್ಮಣ್ಯದ ಖಾಸಗಿ ವಸತಿ ಗೃಹದಲ್ಲಿ ತಂಗಿದ್ದರು. ಬುಧವಾರ ಬೆಳಗ್ಗೆ ಎರಡನೆಯ ದಿನದ ಸರ್ಪ ಸಂಸ್ಕಾರ ಸೇವೆ ಹಾಗೂ ಇತರೆ ವಿಧಿಗಳಲ್ಲಿ ಪಾಲ್ಗೊಂಡರು. ನಾಗಪ್ರತಿಷ್ಠೆ ಸೇವೆ ಬಳಿಕ ಪ್ರಸಾದ ಸ್ವೀಕರಿಸಿದರು. ಮುಖಕ್ಕೆ ಮಾಸ್ಕ್, ತಲೆಗೆ ದುಪ್ಪಟ್ಟ ಧರಿಸಿ, ಮುಖ ಮುಚ್ಚಿಕೊಂಡು ಓಡಾಡಿದ ಅವರು, ಮಾಧ್ಯಮದವರಿಂದ ಅಂತರ ಕಾಯ್ದುಕೊಂಡರು. ಮಹಾಪೂಜೆ ಸಂದರ್ಭದಲ್ಲಿ ಮಾಸ್ಕ್ ತೆಗೆದರು. ಆಗ ವಿಡಿಯೊ ಚಿತ್ರೀಕರಣಕ್ಕೆ ಮುಂದಾದ ಮಾಧ್ಯಮದವರ ಬಳಿ ಕತ್ರಿನಾ ಜತೆಗಿದ್ದವರು ವಿಡಿಯೊ ಮಾಡದಂತೆ ಸೂಚಿಸಿದರು. ಇದು ಖಾಸಗಿ ಭೇಟಿ. ವಿಡಿಯೊ ಮಾಡಬೇಡಿ ಎಂದು ಹೇಳಿದರು.
‘ಕುಕ್ಕೆ ಕ್ಷೇತ್ರಕ್ಕೆ ಗಣ್ಯರು, ಸಿನಿ ತಾರೆಯರು ಭೇಟಿ ನೀಡಿದಾಗ ದೇವಸ್ಥಾನದ ವತಿಯಿಂದ ಅವರನ್ನು ಗೌರವಿಸಲಾಗುತ್ತದೆ. ಆದರೆ, ಕತ್ರಿನಾ ಅವರು ದೇವಸ್ಥಾನದ ಕಚೇರಿಗೂ ಭೇಟಿ ನೀಡದೆ, ದೇವಳದ ಗೌರವವನ್ನೂ ಸ್ವೀಕರಿಸದೆ ತೆರಳಿದ್ದಾರೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.