
ಮಂಗಳೂರು: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಆಯೋಜಿಸಿರುವ ನವದುರ್ಗ ಲೇಖನಯಜ್ಞಕ್ಕೆ ಸಂಬಂಧಿಸಿದ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಉದ್ಘಾಟನೆ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇದೇ 11ರಂದು ನಡೆಯಲಿದೆ.
ನಗರ ಹೊರವಲಯದ ಅಡ್ಯಾರ್‌ನಲ್ಲಿರುವ ಅಡ್ಯಾರ್ ಗಾರ್ಡನ್‌ನಲ್ಲಿ ಮಧ್ಯಾಹ್ನ 3 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಸಮಿತಿಗಳನ್ನು ಕೂಡ ಉದ್ಘಾಟಿಸಲಾಗುವುದು ಎಂದು ಅಭಿವೃದ್ಧಿ ಸಮಿತಿಯ ಪ್ರದಾನ ಸಂಚಾಲಕ ಚಂದ್ರಹಾಸ ಶೆಟ್ಟಿ ರಂಗೋಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅಭಿವೃದ್ಧಿ ಸಮಿತಿಯ ಅಧ್ಯಕ್ಷ ವಾಸುದೇವ ಶೆಟ್ಟಿ, ಗೌರವಾಧ್ಯಕ್ಷ ರವಿ ಶೆಟ್ಟಿ, ಕಾರ್ಯಾಧ್ಯಕ್ಷ ಹಾಗೂ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ, ನವದುರ್ಗ ಲೇಖನ ಯಜ್ಞ ಸಮಿತಿಯ ಅಧ್ಯಕ್ಷ ರಘುಪತಿ ಭಟ್, ಕಾರ್ಯಾಧ್ಯಕ್ಷರಾದ ಕೃಷ್ಣ ಪ್ರಸಾದ್ ಅಡ್ಯಂತಾಯ ಮತ್ತು ಮುನಿಯಾಲು ಉದಯ ಕುಮಾರ್ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ.
ಕಾಪು ಮಾರಿಯಮ್ಮ ಗುಡಿಯ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು ಮುಂದಿನ ವರ್ಷ ಫೆಬ್ರುವರಿ 25ರಿಂದ ಮಾರ್ಚ್ 5ರ ವರೆಗೆ ಬ್ರಹ್ಮಕಲಶೋತ್ಸವ ಜರುಗಲಿವೆ. ಇದರ ಅಂಗವಾಗಿ ನವದುರ್ಗ ಲೇಖನ ಯಜ್ಞ ಮತ್ತು ನವಚಂಡಿ ಯಾಗ ಆಯೋಜಿಸಲಾಗುವುದು. 99,999 ಭಕ್ತರು ನವದುರ್ಗ ಲೇಖನ ಯಜ್ಞದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಕ್ಕಾಗಿ ರಚಿಸಿರುವ ಸಮಿತಿಗಳಲ್ಲಿ ತಲಾ 9 ಪುರುಷರು ಹಾಗೂ ಮಹಿಳೆಯರು ಇರುತ್ತಾರೆ ಎಂದು ಅವರು ವಿವರಿಸಿದರು.
ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಮಾರಿಯಮ್ಮ ಸ್ವರ್ಣ ಗದ್ದುಗೆ ಏರಲಿದ್ದು ಇದಕ್ಕಾಗಿ ಈಗಾಗಲೇ 10 ಕೆಜಿ ಬಂಗಾರ ಮತ್ತು 100 ಕೆಜಿ ಬೆಳ್ಳಿ ಸಂಗ್ರಹವಾಗಿದೆ ಎಂದು ತಿಳಿಸಿದ ಅವರು ನವದುರ್ಗ ಲೇಖನ ಯಜ್ಞವನ್ನು 909 ಪುಸ್ತಕಗಳಲ್ಲಿ ದಾಖಲಿಸಲಾಗುವುದು. ಅವುಗಳನ್ನು 99 ಪೆಟ್ಟಿಗೆಗಳಲ್ಲಿ ಹಾಕಿ ಬ್ರಹ್ಮಕಲಶೋತ್ಸವದ ದಿನ ಪೂಜಿಸಲಾಗುವುದು. ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ಅದಕ್ಕೆ ಪೂಜೆ ಸಲ್ಲಿಸಲಾಗುವುದು ಎಂದರು.
ಜಿಲ್ಲಾ ಸಮಿತಿಯ ಮುಖ್ಯ ಸಂಚಾಲಕ ಪುರುಷೋತ್ತಮ ಕೆ.ಭಂಡಾರಿ, ಸಂಚಾಲಕರಾದ ಮಣೀಶ್ ರೈ, ಸಂತೋಷ್ ಶೆಟ್ಟಿ, ಎ.ಕೃಷ್ಣ ಶೆಟ್ಟಿ ತಾರೆಮಾರ್, ಅಕ್ಷಿತ್ ಸುವರ್ಣ, ಬಾಲಕೃಷ್ಣ ಕೋಟ್ಟಾರಿ, ಪ್ರದೀಪ್ ಆಳ್ವ ಕದ್ರಿ ಮತ್ತು ಅಶ್ವತ್ಥಾಮ ಹೆಗ್ಡೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.