ADVERTISEMENT

ಕೋಟೆಕಾರು ದರೋಡೆ ಪ್ರಕರಣ: ದಾರಿ ಮಧ್ಯೆ ನಂಬರ್ ಪ್ಲೇಟ್ ಬದಲಿಸಿದ್ದ ದರೋಡೆಕೋರರು

ಕಾರಿನ ಮೂಲ ದಾಖಲೆ ಪತ್ತೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2025, 19:14 IST
Last Updated 19 ಜನವರಿ 2025, 19:14 IST
ದರೋಡೆ ಕೃತ್ಯಕ್ಕೆ ಬಳಕೆಯಾದ ಕಾರು ಕೇರಳ ಗಡಿಭಾಗದ ತಲಪಾಡಿ ಚೆಕ್‌ಪೋಸ್ಟ್‌ ಮೂಲಕ ಹಾದುಹೋಗುವಾಗ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯ
ದರೋಡೆ ಕೃತ್ಯಕ್ಕೆ ಬಳಕೆಯಾದ ಕಾರು ಕೇರಳ ಗಡಿಭಾಗದ ತಲಪಾಡಿ ಚೆಕ್‌ಪೋಸ್ಟ್‌ ಮೂಲಕ ಹಾದುಹೋಗುವಾಗ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯ   

ಉಳ್ಳಾಲ: ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಕೆ.ಸಿ.ರೋಡ್‌ ಶಾಖೆಯಲ್ಲಿ ಶುಕ್ರವಾರ ನಡೆದ ದರೋಡೆ ಪ್ರಕರಣದ ಕಾರು ಉಡುಪಿ ಕಡೆಯಿಂದ ಮಂಗಳೂರಿನತ್ತ ಬಂದಿರುವುದು ಹಾಗೂ ಕಾರಿನ ನಂಬರ್ ಪ್ಲೇಟ್ ಅನ್ನು ದಾರಿ ಮಧ್ಯೆ ಬದಲಾಯಿಸಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ಕೃತ್ಯಕ್ಕೆ ಬಳಸಿರುವ ಫಿಯೆಟ್ ವಿನಿಯಾ ಕಾರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಉಡುಪಿ-ಪಡುಬಿದ್ರೆ ಮಾರ್ಗವಾಗಿ ಮಂಗಳೂರು ತಲುಪಿದೆ. ಉಡುಪಿ ಬರುವ ಮುನ್ನ ಕಾರು ಬೇರೆ ನಂಬರ್‌ ಹೊಂದಿರುವುದು ಟೋಲ್ ಬೂತ್ ಒಂದರ  ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಅದರ ಪ್ರಕಾರ ಕಾರಿನ ಮಾಲೀಕ ತಮಿಳುನಾಡು ಮೂಲದ ವ್ಯಕ್ತಿ ಎಂದು ಗೊತ್ತಾಗಿದೆ. ಆತನ ಪತ್ತೆಗೆ ಪೊಲೀಸರ ಒಂದು ತಂಡ ತೆರಳಿದೆ. ಪೊಲೀಸರ ಉಳಿದ ಎರಡು ತಂಡಗಳು ಮಹಾರಾಷ್ಟ್ರದ ಮುಂಬೈ ಹಾಗೂ ಕೇರಳಕ್ಕೆ ತೆರಳಿವೆ ಎಂದು ಮೂಲಗಳು ಹೇಳಿವೆ. 


ಕರೆ ವಿವರ ಕಲೆ ಹಾಕುತ್ತಿರುವ ಪೊಲೀಸರು: ಸ್ಥಳೀಯರ ಸಹಕಾರ ಪಡೆದು ಹೊರ ರಾಜ್ಯದ ತಂಡವು ಈ ಕೃತ್ಯ ನಡೆಸಿರುವ ಸಾಧ್ಯತೆ ಇದೆ. ಈ ಆಯಾಮದಲ್ಲೂ ತನಿಖೆ ಕೈಗೆತ್ತಿಕೊಳ್ಳಲಾಗಿದೆ. ಸಹಕಾರಿ ಸಂಘದ ಸಿಬ್ಬಂದಿ ಸೇರಿದಂತೆ ಸುತ್ತಲಿನ ಮೊಬೈಲ್ ಟವರ್ ಸಿಡಿಆರ್ ಪಡೆದಿರುವ ಪೊಲೀಸ್ ಅಧಿಕಾರಿಗಳು ಟೆಲಿಕಾಂ ಆಪರೇಟರ್‌ಗಳಿಂದ  ಕರೆಗಳ ವಿವರವನ್ನು ನೀಡುವಂತೆ ಕೋರಿದ್ದಾರೆ. ಭಾರತೀಯ ಟೆಲಿಗ್ರಾಫ್ ಕಾಯ್ದೆಯನುಸಾರ ನ್ಯಾಯಾಲಯದ ಅನುಮತಿಯ ಮೇರೆಗೆ ದಾಖಲೆಗಳನ್ನು ಪಡೆಯಬೇಕಾಗಿದ್ದು, ಈ ಪ್ರಕ್ರಿಯೆಗೆ ಕಾಲಾವಕಾಶ ಬೇಕಾಗುತ್ತದೆ. ನಿರ್ದಿಷ್ಟ ಸಮಯದಲ್ಲಿ ನಿರ್ದಿಷ್ಟ ಮೊಬೈಲ್ ಟವರ್ ವ್ಯಾಪ್ತಿಯಲ್ಲಿ ಸಕ್ರಿಯವಾಗಿದ್ದ ಎಲ್ಲಾ ಸಂಖ್ಯೆಗಳ ಡೇಟಾವನ್ನು ಸಂಗ್ರಹಿಸುವ ‘ಟವರ್ ಡಂಪ್’ ಪ್ರಕ್ರಿಯೆಗೂ ಪೊಲೀಸ್ ಇಲಾಖೆ ಮುಂದಾಗಿದೆ ಎಂದು ಗೊತ್ತಾಗಿದೆ. 

ADVERTISEMENT

ಕೃತ್ಯಕ್ಕೆ ಬಳಕೆಯಾದ ಕಾರು ತಲಪಾಡಿ ಟೋಲ್ ಬೂತ್ ಮೂಲಕ ಸಾಗುವಾಗ ದಾಖಲಾದ ದೃಶ್ಯವು ಕಾರಿನಲ್ಲಿ ಇಬ್ಬರು ಮಾತ್ರ ಇದ್ದುದನ್ನು ಸ್ಪಷ್ಟಪಡಿಸಿದೆ. ದರೋಡೆ ಮಾಡಿದ ಚಿನ್ನವನ್ನು ಬೇರೆ ಕಾರಿನಲ್ಲಿ ಕೊಂಡೊಯ್ದಿರುವ ಶಂಕೆ ಇರುವುದರಿಂದ ಆ ಕಾರಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ. ಕೃತ್ಯ ನಡೆದ ಸಂದರ್ಭದಲ್ಲಿ ಷವರ್ಲೆ ಕಾರೊಂದು ಹೆದ್ದಾರಿಯಲ್ಲಿ ಸಾಗಿರುವುದು ಕಂಡುಬಂದಿದೆ. ಕಿನ್ಯದ  ಖಾಸಗಿ ಶಾಲೆಯ ವಿದ್ಯಾರ್ಥಿಯನ್ನು ಕಾಣಲು ಬಂದ ಪೋಷಕರ ಕಾರು ಅದು ಎಂಬುದು ವಿಚಾರಣೆಯಿಂದ ಗೊತ್ತಾಗಿದೆ. ಹಾಗಾಗಿ ಚಿನ್ನ ಸಾಗಿಸಲು ಬಳಸಿದ ಕಾರು ಯಾವುದು ಎಂಬುದನ್ನು ಹುಡುಕಲು ಮಂಗಳೂರು– ಉಡುಪಿ ಮಾರ್ಗದ ಹಲವು ಸಿಸಿಟಿವಿ ಕ್ಯಾಮೆರಾಗಳ ದಾಖಲೆಗಳನ್ನು ಪೊಲೀಸರು ಪಡೆದುಕೊಂಡಿದ್ದಾರೆ.

ದರೋಡೆ ಕೃತ್ಯದ ನಂತರ ಒಂದು ಕಾರು ಕೇರಳದ ಕಡೆಗೆ ತೆರಳಿದ್ದರೆ, ಇನ್ನೊಂದು ಕಾರು ಬಂಟ್ವಾಳ ಕಡೆ ತೆರಳಿರುವ ಶಂಕೆಯಿದೆ. ಬಿ.ಸಿ.ರೋಡ್ ಟೋಲ್ ಗೇಟ್‌ನಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗುವುದನ್ನು ತಪ್ಪಿಸಲು ದರೋಡೆಕೋರರು ಟೋಲ್ ಪಕ್ಕದ ರಸ್ತೆ ಬಳಸಿ ಸಾಗಿ ವಿಟ್ಲ ಮೂಲಕ ಕೇರಳದ ಗ್ರಾಮೀಣ ಪ್ರದೇಶವನ್ನು ತಲುಪಿರುವ ಸಾಧ್ಯತೆಗಳಿವೆ. ಕೃತ್ಯದ ಬಳಿಕ ಬೇರೆ ಬೇರೆ ಕಾರುಗಳಲ್ಲಿ, ಬೇರೆ ಬೇರೆ ಮಾರ್ಗಗಳಲ್ಲಿ ಸಾಗಿದ ದರೋಡೆಕೋರರು ಕೇರಳದಲ್ಲಿ ಮತ್ತೆ ಸೇರಿರುವ ಸಾಧ್ಯತೆ ಇದೆ. ಈ ಆಯಾಮದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ಒಡಿಷಾದ ಸಬಲ್ಪುರದ ಮಣಪ್ಪುರಂ ಫೈನಾನ್ಸ್ನಲ್ಲಿ ಜ.3ರಂದು ಹಾಡಹಗಲೇ ನಡೆದ ದರೋಡೆ ಪ್ರಕರಣಕ್ಕೂ  ಕೋಟೆಕಾರು ದರೋಡೆಗೂ ಸಾಮ್ಯತೆಯಿದೆ. ಸಬಲ್ಪುರದ ದರೋಡೆಯಲ್ಲಿ ಮಾಸ್ಕ್ ಧರಿಸಿ ಬಂದಿದ್ದ ಏಳರಿಂದ ಹತ್ತು ಜನರ ತಂಡ ಫೈನಾನ್ಸ್‌ ಸಿಬ್ಬಂದಿಯ ತಲೆಗೆ ಬಂದೂಕು ಇಟ್ಟು ಬೆದರಿಸಿ ವ್ಯವಸ್ಥಾಪಕರ ಕೈ ಕಟ್ಟಿ ಹಾಕಿ ದರೋಡೆ ನಡೆಸಿತ್ತು. ₹ 4 ಲಕ್ಷ ನಗದು ಹಾಗೂ ₹ 30 ಕೋಟಿ ಮೌಲ್ಯದ ಚಿನ್ನಾಭರಣವನ್ನು ತಂಡ ಲೂಟಿ ಮಾಡಿತ್ತು. ಬೆಳಿಗ್ಗೆ 9ರ ಸುಮಾರಿಗೆ ಕೇವಲ 23 ನಿಮಿಷಗಳಲ್ಲಿ ಕೃತ್ಯ ಮುಗಿಸಿ ತಲೆಮರೆಸಿಕೊಂಡಿತ್ತು. ಈ ಸಂಬಂಧ ಬಿಹಾರ ಮೂಲದ ಇಬ್ಬರನ್ನು ಅಲ್ಲಿನ ಪೊಲೀಸರು ಬಂಧಿಸಿದ್ದರು. ಕೋಟೆಕಾರು ಬ್ಯಾಂಕ್ ದರೋಡೆಯಲ್ಲೂ ಬಿಹಾರದ ಗ್ಯಾಂಗ್ ಕೈವಾಡವಿರುವ ಸಾಧ್ಯತೆ ಇರುವುದರಿಂದ ಆ ಆಯಾಮದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಗೊತ್ತಾಗಿದೆ. 

ಗೋಲ್ಡ್ ಬ್ಲ್ಯಾಕ್ ಮಾರ್ಕೆಟ್‌ನತ್ತ ನಿಗಾ

ಕೋಟೆಕಾರು ದರೋಡೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಕೇರಳ ತಮಿಳುನಾಡು ಹಾಗೂ ಮಹಾರಾಷ್ಟ್ರದ ಮುಂಬೈನಲ್ಲಿರುವ ಗೋಲ್ಡ್ ಬ್ಲ್ಯಾಕ್ ಮಾರ್ಕೆಟ್ ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ಗೋಲ್ಡ್‌ ಬ್ಲ್ಯಾಕ್‌ ಮಾರ್ಕೆಗಳ ವ್ಯವಹಾರಗಳತ್ತ ನಿಗಾ ಇಟ್ಟಿದ್ದಾರೆ.  ಕೇರಳ ತಮಿಳುನಾಡು ಮುಂಬೈ ಪೊಲೀಸರ ಸಹಾಯ ಪಡೆದು ತನಿಖೆ ತೀವ್ರಗೊಳಿಸಿದ್ದಾರೆ. ದರೋಡೆಕೋರರು ಕೇರಳದ ಅಜ್ಞಾತ ಸ್ಥಳದಿಂದ ಸಮುದ್ರ ಮಾರ್ಗವಾಗಿ ತಮಿಳುನಾಡಿನತ್ತ ತೆರಳಿರುವ ಶಂಕೆ ಇರುವುದರಿಂದ ಆರಾಜ್ಯದ ಗೋಲ್ಡ್ ಬ್ಲ್ಯಾಕ್‌ ಮಾರ್ಕೆಟ್‌ಗಳತ್ತ ಹೆಚ್ಚಿನ ನಿಗಾ ವಹಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ರಾತ್ರಿ ಗಸ್ತು ನಡೆಸಿದ ನಗರ ಪೊಲೀಸ್‌ ಕಮಿಷನರ್

ಬೆಂಗಳೂರು: ಮಂಗಳೂರಿನಲ್ಲಿ ಬ್ಯಾಂಕ್ ದರೋಡೆ ಹಾಗೂ ಬೀದರ್‌ನಲ್ಲಿ ಎಟಿಎಂ ಹಣ ಲೂಟಿಯಾದ ಘಟನೆಗಳ ಬೆನ್ನಲ್ಲೇ ಜನರಲ್ಲಿ ಭಯ ಹೋಗಲಾಡಿಸಲು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ ಸೇರಿ ಹಿರಿಯ ಅಧಿಕಾರಿಗಳು ರಾತ್ರಿ ಗಸ್ತು ನಡೆಸಿದರು.

ಬಿ.ದಯಾನಂದ್ ನೇತೃತ್ವದಲ್ಲಿ ಮಧ್ಯರಾತ್ರಿ 1 ರಿಂದ ನಸುಕಿನ 4 ಗಂಟೆವರೆಗೆ ಗಸ್ತು ನಡೆಸಿ, ಜನರ ಸಮಸ್ಯೆ ಆಲಿಸಿದರು. ದಯಾನಂದ್ ಅವರು ತಾವೇ ವಾಹನ ಚಾಲನೆ ಮಾಡಿದರು.  ಹೆಚ್ಚುವರಿ ಪೊಲೀಸ್ ಆಯುಕ್ತರಾದ ವಿಕಾಸ್‌ ಕುಮಾರ್, ಚಂದ್ರಗುಪ್ತ, ಜಂಟಿ ಪೊಲೀಸ್ ಕಮಿಷನರ್‌ ಎಂ.ಎನ್.ಅನುಚೇತ್, ಬಿ.ರಮೇಶ್‌ ಪಾಲ್ಗೊಂಡಿದ್ದರು.

ಪೂರ್ವ ವಿಭಾಗದ ಡಿಸಿಪಿ ಡಿ.ದೇವರಾಜ್, ಕೇಂದ್ರ ವಿಭಾಗದ ಡಿಸಿಪಿ ಎಚ್‌.ಟಿ.ಶೇಖರ್, ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್, ಉತ್ತರ ವಿಭಾಗ ಡಿಸಿಪಿ ಸೈದುಲ ಅಡಾವತ್, ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಹಾಗೂ ಉತ್ತರ ವಿಭಾಗ (ಸಂಚಾರ) ಡಿಸಿಪಿ ಸಿರಿಗೌರಿ ಅವರು ತಮ್ಮ ವಿಭಾಗದ ವ್ಯಾಪ್ತಿಯಲ್ಲಿ ಗಸ್ತು ನಡೆಸಿದರು. ರಾಜಕಾರಣಿಗಳು ಹಾಗೂ ಗಣ್ಯ ವ್ಯಕ್ತಿಗಳು ವಾಸಿಸುವ ಸದಾಶಿವನಗರ, ಡಾಲರ್ಸ್ ಕಾಲೊನಿಗಳಲ್ಲಿ ಪೊಲೀಸರು ಗಸ್ತು ನಡೆಸಿದರು. ಈ ವೇಳೆ ರಸ್ತೆಯಲ್ಲಿ ಭೇಟಿಯಾದ ಜನರ ಜತೆಗೆ ಮಾತುಕತೆ ನಡೆಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.