ಮಂಗಳೂರು: ‘ಕೋಳಿ ಅಂಕ ಗ್ರಾಮೀಣ ತುಳು ಜನಪದ ಸಂಸ್ಕೃತಿಯ ಭಾಗ. ವಿಟ್ಲ ಸಮೀಪದ ಕೇಪು ಉಳ್ಳಾಲ್ತಿ ಕ್ಷೇತ್ರದ ಸಾಂಪ್ರದಾಯಿಕ ಕೋಳಿ ಅಂಕಕ್ಕೆ ಪೊಲೀಸರಿಂದ ದಾಳಿ ಮಾಡಿಸಿ, ತಡೆದಿರುವುದು ಖಂಡನೀಯ. ಇದು ಕಾಂಗ್ರೆಸ್‌ನ ಹಿಂದೂ ವಿರೋಧಿ ನೀತಿಯ ಭಾಗ. ಹಿಂದೂಗಳ ನಂಬಿಕೆಗೆ ಘಾಸಿ ಗೊಳಿಸುವುದನ್ನು ಬಿಜೆಪಿ ಸಹಿಸುವುದಿಲ್ಲ’ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಮೊದಲು ಯಕ್ಷಗಾನ ಮತ್ತಿತರ ಕಾರ್ಯಕ್ರಮಗಳಲ್ಲಿ ಧ್ವನಿವರ್ಧಕ ಬಳಕೆಯನ್ನು ತಡೆದರು. ಈಗ ಕೋಳಿ ಅಂಕದ ಸರದಿ. ಕಾಂಗ್ರೆಸ್ ನೇತೃತ್ವದ ಸರ್ಕಾರ, ಕಾನೂನಿನ ನೆಪ ಒಡ್ಡಿ ಈ ನೆಲದ ಆಚರಣೆಗಳ ದಮನಕ್ಕೆ ಮುಂದಾಗಿರುವುದು ನಾಚಿಕೆಗೇಡು. ಹಿಂದೂ ಸಂಸ್ಕೃತಿ ಬಗ್ಗೆ ಕಾಂಗ್ರೆಸ್ ತುಚ್ಛ ಭಾವ ಹೊಂದಿದೆ ಎಂಬುದನ್ನು ಇದು ಸಾಬೀತುಮಾಡಿದೆ’ ಎಂದರು.
‘ಕೋಳಿ ಅಂಕದಲ್ಲಿ ಜೂಜು ಮತ್ತಿತರ ಅಕ್ರಮ ಚಟುವಟಿಕೆ ನಡೆದರೆ ಅದನ್ನು ತಡೆಯುವುದು ಪೊಲೀಸರ ಜವಾಬ್ದಾರಿ. ಕೇಪು ಕೋಳಿ ಅಂಕದಿಂದ ಸಾರ್ವಜನಿಕರ ಜೀವನ ಏರುಪೇರಾಗಿಲ್ಲ. ಧಾರ್ಮಿಕ ನೆಲೆಗಟ್ಟಿನಲ್ಲಿ ಕೋಳಿ ಅಂಕ ನಡೆಸಿಕೊಂಡು ಬರಲಾಗುತ್ತಿದೆ’ ಎಂದರು.
‘ಕರಾವಳಿಯಲ್ಲಿ ಇನ್ನು ನೇಮ ಕೋಲಗಳು ನಡೆಯಲಿಕ್ಕಿವೆ. ಇವು ನಿರಾತಂಕವಾಗಿ ನಡೆಯುವಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ. ಆಗಲೂ, ಹಿಂದೂ ಸಮಾಜದ ನಂಬಿಕೆ ಗಾಸಿ ಗೊಳಿಸಿದರೆ ಬಿಜೆಪಿ ಸುಮ್ಮನಿರುವುದಿಲ್ಲ’ ಎಂದರು.
ಶಾಸಕ ಡಾ. ವೈ.ಭರತ್ ಶೆಟ್ಟಿ, ‘ಕೇಪು ಕ್ಷೇತ್ರಕ್ಕೆ ತರಳಿದ್ದ ನಮ್ಮ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಹಾಗೂ ಮಾಜಿ ಶಾಸಕ ಸಂಜೀವ ಮಠಂದೂರು ವಿರುದ್ಧವೂ ಪ್ರಾಣಿ ಹಿಂಸೆ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ. ಇದು ಖಂಡನೀಯ’ ಎಂದರು.
ಶಾಸಕ ಡಿ. ವೇದವ್ಯಾಸ ಕಾಮತ್, 'ನಮ್ಮ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರ ಮೇಲೆ ಪ್ರಕರಣ ದಾಖಲಿಸಿದ್ದೀರಿ. ಅಲ್ಲಿಗೆ ಸಾವಿರಾರು ಜನ ಹೋಗುತ್ತಾರೆ. ಅವರೆಲ್ಲರ ಮೇಲೆ ಪ್ರಕರಣ ದಾಖಲಿಸುವಷ್ಟು ಪೆನ್ನು, ಪುಸ್ತಕ ನಿಮ್ಮಲ್ಲಿದೆಯೇ’ ಎಂದು ಪ್ರಶ್ನಿಸಿದರು.
‘ಮಂಗಳೂರಿನಲ್ಲಿ ನಡೆಯುವ ಅಕ್ರಮ ಕಸಾಯಿಕಾನೆಗಳ ವಿರುದ್ಧ ಎಷ್ಟು ಪ್ರಕರಣ ದಾಖಲಿಸಿದ್ದೀರಿ’ ಎಂದರು.
ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ‘ಕೇಪು ಕ್ಷೇತ್ರದ ಕೋಳಿ ಅಂಕಕ್ಕೆ 800 ವರ್ಷಗಳ ಇತಿಹಾಸ ಇದೆ. ಅಲ್ಲಿಗೆ ಹರಕೆ ಹೊತ್ತ ಕೋಳಿಯ ರಕ್ತದ ಬಿಂದು ಬಿದ್ದರೆ ಕಷ್ಟ ಪರಿಹಾರ ಆಗುತ್ತದೆ ಎಂಬ ನಂಬಿಕೆ ಜನರದ್ದು’ ಎಂದರು.
ಪಕ್ಷದ ಮುಖಂಡರಾದ ಪ್ರೇಮಾನಂದ ಶೆಟ್ಟಿ, ಅರುಣ್ ಶೇಟ್, ಜಗದೀಶ್ ಆಳ್ವ, ಯತೀಶ್ ಅರ್ವಾರ್, ವಸಂತ ಪೂಜಾರಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.