ADVERTISEMENT

ಸೇವಾ ಕಾರ್ಯದಲ್ಲಿ ಕೈಜೋಡಿಸಿ: ಕಾಮತ್‌

ಪಾಲಿಕೆಯ ಕಾರ್ಮಿಕರಿಗೆ 1ಸಾವಿರ ಕಿಟ್ ವಿತರಿಸಿದ ಮೇಯರ್

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2020, 14:25 IST
Last Updated 15 ಏಪ್ರಿಲ್ 2020, 14:25 IST
ಮಂಗಳೂರು ಮಹಾನಗರ ಪಾಲಿಕೆಯ ಒಂದು ಸಾವಿರ ಕಾರ್ಮಿಕರಿಗೆ ಆಹಾರದ ಕಿಟ್‌ಗಳನ್ನು ಬುಧವಾರ ವಿತರಿಸಲಾಯಿತು.
ಮಂಗಳೂರು ಮಹಾನಗರ ಪಾಲಿಕೆಯ ಒಂದು ಸಾವಿರ ಕಾರ್ಮಿಕರಿಗೆ ಆಹಾರದ ಕಿಟ್‌ಗಳನ್ನು ಬುಧವಾರ ವಿತರಿಸಲಾಯಿತು.   

ಮಂಗಳೂರು: ಮಹಾನಗರ ಪಾಲಿಕೆಯ ಸಿವಿಲ್ ಎಂಜಿನಿಯರಿಂಗ್ ಅಸೋಸಿಯೇಷನ್ ಹಾಗೂ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ವತಿಯಿಂದ ಪಾಲಿಕೆಯ ಕಾರ್ಮಿಕರಿಗೆ ದಿನಸಿ ಸಾಮಗ್ರಿಗಳನ್ನು ಶಾಸಕ ವೇದವ್ಯಾಸ ಕಾಮತ್ ಸಮ್ಮುಖದಲ್ಲಿ ಬುಧವಾರ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕಾಮತ್‌, ‘ಮಂಗಳೂರು ಮಹಾನಗರ ಪಾಲಿಕೆಯಲ್ಲಿರುವ 240 ಪೌರ ಕಾರ್ಮಿಕರು, ನೀರು ಸರಬರಾಜು ಇಲಾಖೆಯಲ್ಲಿರುವ 180 ತಾತ್ಕಾಲಿಕ ಕಾರ್ಮಿಕರು, ಒಳಚರಂಡಿ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿರುವ 150 ತಾತ್ಕಾಲಿಕ ಕಾರ್ಮಿಕರು, ಎಂ.ಪಿ.ಡಬ್ಲ್ಯೂ 85 ಕಾರ್ಮಿಕರು, 25 ವಾಹನ ಚಾಲಕರು, 100 ಆಶಾ ಕಾರ್ಯಕರ್ತೆಯರು, 110 ಅಂಗನವಾಡಿ ಕಾರ್ಯಕರ್ತೆಯರು, ವೆನ್ಲಾಕ್ ಆಸ್ಪತ್ರೆಯಲ್ಲಿ ಇರುವ 35 ಮಂದಿ ದಿನಗೂಲಿ ಕಾರ್ಮಿಕರಿಗೆ ಕಿಟ್ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು’ ಎಂದರು.

ನಗರದಲ್ಲಿರುವ ಸಿವಿಲ್ ಎಂಜಿನಿಯರಿಂಗ್‌ ಅಸೋಸಿಯೇಷನ್‌ನವರು 1ಸಾವಿರ ಕಿಟ್ ಒದಗಿಸಿದ್ದಾರೆ. ಆದಾಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು 200 ಕಿಟ್ ಒದಗಿಸಿದ್ದಾರೆ. ಮುಂದಿನ ಹಂತದಲ್ಲಿ 1 ಸಾವಿರ ಕಿಟ್‌ಗಳನ್ನು ಆಂಟನಿ ವೇಸ್ಟ್ ಕಾರ್ಮಿಕರಿಗೆ ವಿತರಿಸುವ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದರು.

ADVERTISEMENT

ಲಾಕ್‌ಡೌನ್‌ನಿಂದಾಗಿ ನಗರ ಪೂರ್ಣ ಪ್ರಮಾಣದಲ್ಲಿ ಸ್ತಬ್ಧವಾಗಿದೆ. ಇಂತಹ ಸಂದರ್ಭದಲ್ಲಿ ಸೇವಾ ಕಾರ್ಯದಲ್ಲಿ ಪಾಲ್ಗೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಅವಶ್ಯಕತೆ ಇರುವವರಿಗೆ ಬೇಕಾದ ಆಹಾರ ಪದಾರ್ಥಗಳನ್ನು ಒದಗಿಸುವ ಕಾರ್ಯವನ್ನು ಸರ್ಕಾರವೂ ಮಾಡುತ್ತಿದೆ. ಆದರೆ ಇಡೀ ರಾಜ್ಯದ ಪರಿಸ್ಥಿತಿಯೂ ಒಂದೇ ರೀತಿ ಇದ್ದು, ಸ್ಥಳೀಯ ದಾನಿಗಳ ಮೂಲಕ ಆಹಾರ ಒದಗಿಸುವ ಕಾರ್ಯಕ್ಕೆ ಕೈ ಜೋಡಿಸಬೇಕಿದೆ ಎಂದು ತಿಳಿಸಿದರು.

ಮೇಯರ್‌ ದಿವಾಕರ್ ಪಾಂಡೇಶ್ವರ, ಉಪ ಮೇಯರ್‌ ವೇದಾವತಿ, ವಿಪಕ್ಷ ನಾಯಕ ರವೂಫ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಪೂರ್ಣಿಮಾ, ಕಿರಣ್ ಕುಮಾರ್, ಜಗದೀಶ್ ಶೆಟ್ಟಿ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಪಾಲಿಕೆಯ ಆಯುಕ್ತ ಶಾನಾಡಿ ಅಜಿತ್‌ಕುಮಾರ್ ಹೆಗ್ಡೆ, ಉಪ ಆಯುಕ್ತ ಸಂತೋಷ್ ಕುಮಾರ್, ಎಂಜಿನಿಯರಿಂಗ್ ಅಸೋಸಿಯೇಷನ್ ಅಧ್ಯಕ್ಷರು, ಪದಾಧಿಕಾರಿಗಳು, ಆದಾಯ ತೆರಿಗೆ ಇಲಾಖೆಯ ಪ್ರಮುಖರಾದ ಸುಧೀಂದ್ರ ಕುಮಾರ್, ಪಾಲಿಕೆಯ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.