ADVERTISEMENT

ಬಾಲಕನ ಜನ್ಮಜಾತ ಸಮಸ್ಯೆಗೆ ಚಿಕಿತ್ಸೆ ನೀಡಿ ಹೊಸಜೀವನ ಕೊಟ್ಟ ವೈದ್ಯರು

ಕೆಎಂಸಿಯಲ್ಲಿ ಮಾರ್ಗಭಂಜಕ ಹೃದಯ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2020, 13:23 IST
Last Updated 16 ಜನವರಿ 2020, 13:23 IST
ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾದ ಬಾಲಕನೊಂದಿಗೆ ವೈದ್ಯರ ತಂಡ
ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾದ ಬಾಲಕನೊಂದಿಗೆ ವೈದ್ಯರ ತಂಡ   

ಮಂಗಳೂರು: ಜನ್ಮಜಾತ ಲೋಪವಾದ ವೆಂಟ್ರಿಕ್ಯೂಲಾರ್ ಸೆಪ್ಟಲ್ ಡಿಫೆಕ್ಟ್(ವಿಎಸ್‌ಡಿ)ನಿಂದ ಬಳಲುತ್ತಿದ್ದ 13 ವರ್ಷ ವಯಸ್ಸಿನ ಬಾಲಕ ಕೃಷ್ಣ (ಹೆಸರು ಬದಲಾಯಿಸಲಾಗಿದೆ)ನಿಗೆ ಮಾರ್ಗಭಂಜಕ ಹೃದಯ ಚಿಕಿತ್ಸಾ ವಿಧಾನವನ್ನು ನಗರದ ಕೆಎಂಸಿ ಆಸ್ಪತ್ರೆ ಯಶಸ್ವಿಯಾಗಿ ನಡೆಸಿದೆ.

ಹೃದ್ರೋಗ ತಜ್ಞರಾದ ಡಾ. ರಾಜೇಶ್ ಭಟ್ ಯು., ಡಾ. ಪದ್ಮನಾಭ ಕಾಮತ್ ಹಿರಿಯ ಕ್ಯಾಥ್‌ ಟೆಕ್ನಾಲಜಿಸ್ಟ್‌ ಡಾ. ಗಣೇಶ್ ಪಡುಕೋಳಿ ಮತ್ತು ನರ್ಸ್ ಶ್ರೀಲತಾ ಅವರನ್ನು ಒಳಗೊಂಡ ತಂಡ ಈ ಚಿಕಿತ್ಸಾ ವಿಧಾನವನ್ನು ಯಶಸ್ವಿಯಾಗಿ ನಡೆಸಿದೆ. ಈ ಬಾಲಕನನ್ನು ಚಿಕಿತ್ಸಾ ವಿಧಾನ ನಡೆದ ಮೂರು ದಿನಗಳ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಈಗಾಗಲೇ ಶಾಲೆಗೆ ತೆರಳಲು ಆರಂಭಿಸಿದ್ದಾನೆ.

‘ವೆಂಟ್ರಿಕ್ಯೂಲಾರ್ ಸೆಪ್ಟಲ್ ಡಿಫೆಕ್ಟ್(ವಿಎಸ್‌ಡಿ)ಎಂದರೆ ಹೃದಯದ ಎಡ ಹೃತ್ಕುಕ್ಷಿ ಮತ್ತು ಬಲ ಹೃತ್ಕುಕ್ಷಿಗಳ ನಡುವೆ ಅಸಾಧಾರಣ ರೀತಿಯ ಸಂಪರ್ಕ ಉಂಟಾಗಿರುತ್ತದೆ. ಇದು ಮಕ್ಕಳಲ್ಲಿ ಕಂಡುಬರುವ ಜನ್ಮಜಾತ ತೊಂದರೆಯಾಗಿರುತ್ತದೆ. ಪ್ರತ್ಯೇಕ ಗಾಯವಾಗಿ ಅಥವಾ ಇತರೆ ಹೃದಯದ ತೊಂದರೆಗಳೊಂದಿಗೆ ಇದು ಕಾಣಿಸಿಕೊಳ್ಳಬಹುದು.

ADVERTISEMENT

ಇತ್ತೀಚಿನವರೆಗೆ ವಿಎಸ್‌ಡಿಗೆ ತೆರೆದ ಹೃದಯದ ಶಸ್ತ್ರಕ್ರಿಯೆ ಮೂಲಕ ಚಿಕಿತ್ಸೆ ನೀಡಲಾಗುತ್ತಿತ್ತು. ಇತ್ತೀಚೆಗೆ ನೂತನವಾದ ಕ್ಯಾಥೆಟರ್ ಆಧಾರಿತ ಕ್ಲೋಷರ್ ತಂತ್ರಗಳನ್ನು ಅಭಿವೃದ್ದಿಪಡಿಸಲಾಗಿದೆ.

‘ಈ ವಿಧಾನವನ್ನು ತೆರೆದ ಹೃದಯ ಶಸ್ತ್ರಚಿಕಿತ್ಸೆ ಇಲ್ಲದೇ, ಬಹಳ ಕಡಿಮೆ ಸಂಕೀರ್ಣ ತೊಂದರೆಗಳು ಕಾಣಿಸಿಕೊಳ್ಳುವಂತೆ ನಡೆಸಲಾಗುತ್ತದೆ. ಶಸ್ತ್ರಚಿಕಿತ್ಸೆ ಇಲ್ಲದಿರುವುದರಿಂದ ಮಕ್ಕಳಿಗೆ, ಅದರಲ್ಲೂ ಹೆಣ್ಣುಮಕ್ಕಳಿಗೆ ವರವಾಗಿದೆ. ಇದರಿಂದ ಮಕ್ಕಳ ಎದೆಭಾಗದಲ್ಲಿ ದೊಡ್ಡ ಗಾಯದ ಗುರುತು ಇರುವುದಿಲ್ಲ’ ಎಂದು ಕೆಎಂಸಿ ಆಸ್ಪತ್ರೆಯ ಡಾ.ರಾಜೇಶ್ ಭಟ್ ಯು. ತಿಳಿಸಿದ್ದಾರೆ.

‘ವೆಂಟ್ರಿಕ್ಯೂಲಾರ್ ಸೆಪ್ಟಲ್ ಡಿಫೆಕ್ಟ್(ವಿಎಸ್‌ಡಿ) ಹೃದಯದ ಜನ್ಮಜಾತ ರೋಗಗಳ ಎಲ್ಲ ರೂಪಗಳ ಪೈಕಿ ಶೇ 20 ರಷ್ಟು ಪಾಲು ಹೊಂದಿರುತ್ತದೆ. ಪರ್ಕ್ಯೂಟೇನಿಯಸ್ ಕ್ಲೋಷರ್ ಎನ್ನುವುದು ನೂತನ ಮತ್ತು ನವೀನ ತಂತ್ರವಾಗಿದ್ದು, ಕೆಲವೇ ಕೆಲವು ಜನರು ಈ ಕ್ರಮವನ್ನು ನಡೆಸುತ್ತಾರೆ. ಮಂಗಳೂರಿನಲ್ಲಿ ಈ ವಿಧಾನವನ್ನು ಕೈಗೊಂಡ ಮೊದಲ ಆಸ್ಪತ್ರೆಗಳ ಮಂಗಳೂರಿನ ಕೆಎಂಸಿ ಆಸ್ಪತ್ರೆ ಒಂದಾಗಿದೆ’ ಎಂದು ಶಸ್ತ್ರಚಿಕಿತ್ಸಾ ತಜ್ಞ ಡಾ.ಪದ್ಮನಾಭ ಕಾಮತ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.