ADVERTISEMENT

ಕದ್ರಿಯಿಂದ ಕೊರಗಜ್ಜನ ಆದಿಕ್ಷೇತ್ರಕ್ಕೆ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 6:22 IST
Last Updated 10 ಮಾರ್ಚ್ 2025, 6:22 IST
ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಿಂದ ಕುತ್ತರಿನವರೆಗೆ 'ನಮ್ಮ ನಡೆ ಕೊರಗಜ್ಜನ ಕಡೆ’ ಪಾದಯಾತ್ರೆಯಲ್ಲಿ ಭಕ್ತರು ಭಾಗವಹಿಸಿದರು: ಪ್ರಜಾವಾಣಿ ಚಿತ್ರ
ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಿಂದ ಕುತ್ತರಿನವರೆಗೆ 'ನಮ್ಮ ನಡೆ ಕೊರಗಜ್ಜನ ಕಡೆ’ ಪಾದಯಾತ್ರೆಯಲ್ಲಿ ಭಕ್ತರು ಭಾಗವಹಿಸಿದರು: ಪ್ರಜಾವಾಣಿ ಚಿತ್ರ   

ಮಂಗಳೂರು/ಉಳ್ಳಾಲ: ಮಂಗಳೂರಿನ ಕದ್ರಿ ಮಂಜುನಾಥ ಕ್ಷೇತ್ರದಿಂದ ಕುತ್ತಾರಿನ ಕೊರಗಜ್ಜನ ಆದಿಕ್ಷೇತ್ರಕ್ಕೆ ‘ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ’ ಪಾದಯಾತ್ರೆ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಭಾನುವಾರ ನಡೆಯಿತು.

ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಮುಂಜಾನೆ ಪ್ರಾರ್ಥನೆ ಸಲ್ಲಿಸಿದ ಬಳಿಕ ಕೊರಗಜ್ಜನ ಭಕ್ತರು ಕೇಸರಿ ಶಾಲು ಧರಿಸಿ ಕುತ್ತಾರಿನತ್ತ ಬರಿಗಾಲಿನಲ್ಲಿ ಹೆಜ್ಜೆಹಾಕಿದರು. ಸೂರ್ಯೋದಯದ ಸಮಯದಲ್ಲೇ ಭಕ್ತರು ‌ಪಾದಯಾತ್ರೆ ಆರಂಭಿಸಿದರೂ, ಕುತ್ತಾರು ತಲುಪುವಷ್ಟರಲ್ಲಿ ಹೊತ್ತು ನೆತ್ತಿಗೇರಿತ್ತು. ಬಿಸಿಲಿನ ಝಳವನ್ನು ಲೆಕ್ಕಿಸದೆ ನಡೆದರು. ಕುತ್ತಾರು ತಲುಪಿದ ಬಳಿಕ ಕೊರಗಜ್ಜ ಆದಿಕ್ಷೇತ್ರದ ನಮಸ್ಕಾರ ಸಲ್ಲಿಸಿ ಪುನೀತರಾದರು. 

ಪಾದಯಾತ್ರೆಯಲ್ಲಿ ಸಾಗುವವರಿಗೆ ಅಲ್ಲಲ್ಲಿ ಕುಡಿಯುವ ನೀರು ಹಾಗೂ ಪಾನೀಯಗಳ ವ್ಯವಸ್ಥೆ ಮಾಡಲಾಗಿತ್ತು. ಕೊರಗಜ್ಜನ ಭಕ್ತೆಯಾಗಿರುವ ತಿಪಟೂರಿನ 103 ವರ್ಷ ವಯಸ್ಸಿನ ಶಿವಮ್ಮ ಅವರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಈ ವಯಸ್ಸಿನಲ್ಲೂ ಅವರು ಉತ್ಸಾಹದಿಂದ ಹೆಜ್ಜೆಹಾಕಿದರು. ಕುತ್ತಾರಿನಲ್ಲಿ ಅವರನ್ನು ಸನ್ಮಾನಿಸಲಾಯಿತು.

ADVERTISEMENT

ಕುತ್ತಾರಿನಲ್ಲಿ ನಡೆದ ಪಾದಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ, ರಾಜ್ಯದಲ್ಲಿ ಹಿಂದೂಗಳ ಕುರಿತು ತರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದರು.

‘ಮುಸ್ಲಿಂ ವಿದ್ಯಾರ್ಥಿ ಉನ್ನತ ಶಿಕ್ಷಣ ಪಡೆಯಲು ಪರೀಕ್ಷೆ ಬರೆಯುವ ಶುಲ್ಕದ ಶೇ 50ರಷ್ಟನ್ನು ಮರುಪಾವತಿ ಮಾಡಲಾಗುತ್ತದೆ. ವಿದೇಶದಲ್ಲಿ ಅಧ್ಯಯನ ನಡೆಸಲು ₹ 25 ರಿಂದ 30 ಲಕ್ಷವನ್ನು ಮುಸ್ಲಿಂ ವಿದ್ಯಾರ್ಥಿಗೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಹಿಂದೂಗಳಿಗೆ ಏನೂ ಇಲ್ಲದಂತಾಗಿದೆ’ ಎಂದರು.

‘2013ಲ್ಲಿ ಪವಿತ್ರ ಕುಂಭ ಮೇಳದ ಉಸ್ತುವಾರಿಯನ್ನಾಗಿ ಅಂದಿನ ಸರ್ಕಾರ ಅಝಮ್ ಖಾನ್ ಅವರನ್ನು ನೇಮಿಸಿತ್ತು. ಆಗಿನ ಉಸ್ತುವಾರಿಗಿಂತ ಈಗಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಉಸ್ತುವಾರಿಯಲ್ಲಿ ನಡೆದ ಕುಂಭಮೇಳ ಅತ್ಯಂತ ಯಶಸ್ವಿಯಾಯಿತು. ಕುಂಭ ಮೇಳವನ್ನು ಹೇಗೆ ನಡೆಸಬಹುದು ಎಂದು ಯೋಗಿ ಆದಿತ್ಯನಾಥ್ ತೋರಿಸಿಕೊಟ್ಟಿದ್ದಾರೆ’ ಎಂದರು.

ವಿಶ್ವ ಹಿಂದೂ ಪರಿಷತ್‌ ದಕ್ಷಿಣ ಪ್ರಾಂತ ಸಹಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌, ಸಹಸೇವಾ ಪ್ರಮುಖ್‌ ಗೋಪಾಲ ಕುತ್ತಾರು,  ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ.ಪುರುಷೋತ್ತಮ, ಹಿರಿಯರಾದ ಕುತ್ತಾರುಗುತ್ತು ರತ್ನಾಕರ ಕಾವ, ಪಂಜಂದಾಯ ಬಂಟ ವೈದ್ಯನಾಥ ಸೇವಾ ಟ್ರಸ್ಟ್ ಅಧ್ಯಕ್ಷ ಜಯರಾಮ ಭಂಡಾರಿ, ಪ್ರಮುಖರಾದ ವಿನೋದ್ ಶೆಟ್ಟಿ ಬೊಲ್ಯಗುತ್ತು ಭಾಗವಹಿಸಿದ್ದರು.

ವಿಎಚ್‌ಪಿಯ ಜಿಲ್ಲಾ ಸಂಪರ್ಕ ಪ್ರಮುಖ್ ಪ್ರವೀಣ್ ಕುತ್ತಾರು ಸ್ವಾಗತಿಸಿದರು. ಪ್ರವೀಣ್ ಬಸ್ತಿ ಮತ್ತು ಆಶಿಕ್ ಗೋಪಾಲಕೃಷ್ಣ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.