ADVERTISEMENT

ಮಂಗಳೂರು: ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ

ಮಾರುಕಟ್ಟೆಯಲ್ಲಿ ಹೂ, ಹಣ್ಣುಗಳ ಮಾರಾಟದ ಭರಾಟೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 5:35 IST
Last Updated 15 ಆಗಸ್ಟ್ 2025, 5:35 IST
ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮಂಗಳೂರಿನ ಹಂಪನಕಟ್ಟೆ ಸುತ್ತಮುತ್ತ ಹೊರ ಜಿಲ್ಲೆಗಳಿಂದ ಬಂದ ವ್ಯಾಪಾರಿಗಳು ಹೂ ಮಾರಾಟ ಮಾಡಿದರು
ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮಂಗಳೂರಿನ ಹಂಪನಕಟ್ಟೆ ಸುತ್ತಮುತ್ತ ಹೊರ ಜಿಲ್ಲೆಗಳಿಂದ ಬಂದ ವ್ಯಾಪಾರಿಗಳು ಹೂ ಮಾರಾಟ ಮಾಡಿದರು   

ಮಂಗಳೂರು: ಈ ಬಾರಿ ಶ್ರೀಕೃಷ್ಣ ಜನ್ಮಾಷ್ಟಮಿ ಎರಡು ಪ್ರತ್ಯೇಕ ದಿನಗಳಲ್ಲಿ ಬಂದಿರುವುದರಿಂದ ನಗರದ ಪಿವಿಎಸ್ ಕಲಾಕುಂಜದ ಇಸ್ಕಾನ್ ಮಂದಿರ, ಕುಳಾಯಿಯ ರಾಧಾ ಗೋವಿಂದ ಮಂದಿರ ಹಾಗೂ ನಗರದ ಕೆಲವು ಕಡೆಗಳಲ್ಲಿ, ಕೆಲವು ಸಮುದಾಯಗಳ ಮನೆಗಳಲ್ಲಿ ಶುಕ್ರವಾರ ಜನ್ಮಾಷ್ಟಮಿ ಆಚರಣೆಗೆ ಸಿದ್ಧತೆಗಳು ನಡೆದಿವೆ.

ಹಂಪನಕಟ್ಟೆ ಸುತ್ತಮುತ್ತ ಸೇವಂತಿಗೆ, ಚೆಂಡು ಹೂ, ಗುಲಾಬಿ, ಮಲ್ಲಿಗೆ ಹೂಗಳ ಮಾರಾಟ ಭರದಿಂದ ನಡೆಯಿತು.

ಕುಳಾಯಿಯ ರಾಧಾ ಗೋವಿಂದ ಮಂದಿರದಲ್ಲಿ ಈಗಾಗಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದು, ಆಗಸ್ಟ್ 17ರವರೆಗೆ ಮುಂದುವರಿಯಲಿದೆ. ಹೊರ ಜಿಲ್ಲೆಗಳ ಭಕ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಪಿವಿಎಸ್ ಕಲಾಕುಂಜದ ಇಸ್ಕಾನ್ ಮಂದಿರದಲ್ಲಿ ಆ.15 ಮತ್ತು 16ರಂದು ವಿವಿಧ ಕೃಷ್ಣ ಸೇವೆಗಳು ನಡೆಯಲಿವೆ.

ADVERTISEMENT

ಸೌರಮಾನ ಆಚರಣೆಯ ಪ್ರಕಾರ ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಶನಿವಾರ (ಆ.16) ಸಿಂಹ ಸಂಕ್ರಮಣದ ಸಂಭ್ರಮ. ಶುಕ್ರವಾರದವರೆಗೆ ಕರ್ಕಾಟಕ ಮಾಸ (ಅಂದರೆ ಆಟಿ ತಿಂಗಳು) ಇರುವುದರಿಂದ ಯಾವುದೇ ಹಬ್ಬ ಆಚರಣೆ ಮಾಡುವ ಕ್ರಮವಿಲ್ಲ. ವರಮಹಾಲಕ್ಷ್ಮಿ ಸೇರಿದಂತೆ ಇತರ ವ್ರತಾಚಾರಣೆಯನ್ನಷ್ಟೇ ಮಾಡುವುದು ವಾಡಿಕೆ. ಈ ಹಿನ್ನೆಲೆಯಲ್ಲಿ, ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮವನ್ನು ಮುಂದಿನ ಕೃಷ್ಣಪಕ್ಷದ ಅಷ್ಟಮಿ ತಿಥಿಯಂದು ಆಚರಿಸಲಾಗುತ್ತಿದೆ. ಆದರೆ, ಚಾಂದ್ರಮಾನ ವರ್ಷಾಚರಣೆಯ ಪ್ರಕಾರ ಈಗಾಗಲೇ ಆಷಾಢ ಮಾಸವು ಭೀಮನ ಅಮಾವಾಸ್ಯೆಯ ದಿನದಂದು ಮುಕ್ತಾಯವಾಗಿದ್ದು, ಶ್ರಾವಣ ಮಾಸ ಆರಂಭವಾಗಿದೆ. ಹೀಗಾಗಿ, ಕರಾವಳಿಯಲ್ಲಿ ಚಾಂದ್ರಮಾನ ಪದ್ಧತಿಯನ್ನು ಅನುಸರಿಸುವ ಎಲ್ಲ ಸಮುದಾಯದವರು ಶುಕ್ರವಾರ (ಆ.14) ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುತ್ತಾರೆ.

‘ಕೃಷ್ಣ ಜನ್ಮಾಷ್ಟಮಿಯಂದು ಪ್ರಕೃತಿದತ್ತವಾಗಿ ದೊರೆಯುವ ತರಕಾರಿ ಹೆಚ್ಚು ಪ್ರಾಶಸ್ತ್ಯ. ಶ್ರೀಕೃಷ್ಣನಿಗೆ ತುಳಸಿ ಅರ್ಚನೆ ಮಾಡಲೇ ಬೇಕು. ಹರಿವೆ ಸೊಪ್ಪಿನ ಸಾರು, ಬೆಂಡೆಕಾಯಿ, ಅಂಬಟೆ (ಅಮಟೆಕಾಯಿ), ಹೆಸರುಕಾಳು, ಕಡ್ಲೆ, ತೊಂಡೆಕಾಯಿ ಬಳಸಿ ಅಡುಗೆ ಸಿದ್ಧಪಡಿಸಲಾಗುತ್ತದೆ. ದೇವರಿಗೆ ಅವಲಕ್ಕಿ, ಚಕ್ಕುಲಿ, ಪಂಚಕಜ್ಜಾಯ ನೈವೇದ್ಯ ಮಾಡುತ್ತೇವೆ’ ಎಂದು ಗುರುಪ್ರಸಾದ್ ತಿಳಿಸಿದರು.

‘ಮೊಸರು ಕುಡಿಕೆ ಮುಂದಿನ ತಿಂಗಳು’

ಶತಮಾನದ ಇತಿಹಾಸ ಇರುವ ಅತ್ತಾವರ ಕಟ್ಟೆಯ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಉತ್ಸವ ಹಾಗೂ ಶ್ರೀಕೃಷ್ಣ ಜನ್ಮಮಹೋತ್ಸವ ಸಮಿತಿಯು ಕದ್ರಿ ರಾಜಾಂಗಣದಲ್ಲಿ ಹಮ್ಮಿಕೊಳ್ಳುವ ಮೊಸರು ಕುಡಿಕೆ ಸಂಭ್ರಮ ಸೆಪ್ಟೆಂಬರ್‌ನಲ್ಲಿ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.