ADVERTISEMENT

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಸ್ ಸಂಚಾರ ಏರಿಕೆ: ಸಚಿವ ಕೋಟ ಹರ್ಷ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2021, 11:55 IST
Last Updated 11 ಏಪ್ರಿಲ್ 2021, 11:55 IST
ಕೋಟ ಶ್ರೀನಿವಾಸ ಪೂಜಾರಿ
ಕೋಟ ಶ್ರೀನಿವಾಸ ಪೂಜಾರಿ   

ಮಂಗಳೂರು: ಕೋವಿಡ್‌–19 ನಿಂದಾಗಿ ಜನತೆ ಆತಂಕ ಪಡುತ್ತಿರುವ ಸಂದರ್ಭದಲ್ಲಿ ಮುಷ್ಕರ ಮಾಡುವ ಮೂಲಕ ಸಾರ್ವಜನಿಕರನ್ನು ಇನ್ನಷ್ಟು ಸಂಕಷ್ಟಕ್ಕೆ ಒಳಪಡಿಸುವುದು ಸರಿಯಲ್ಲ. ಸರ್ಕಾರದ ಮೇಲೆ ವಿಶ್ವಾಸವಿಡಿ. ಮುಂದಿನ ದಿನಗಳಲ್ಲಿ ಸಮಸ್ಯೆಗಳು ಪರಿಹಾರವಾಗಲಿವೆ ಎಂಬ ಭರವಸೆಯೊಂದಿಗೆ ಕರ್ತವ್ಯಕ್ಕೆ ಹಾಜರಾಗಿ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದ್ದಾರೆ.

ಆರನೇ ವೇತನ ಆಯೋಗದ ಶಿಫಾರಸು ಅನುಷ್ಠಾನಕ್ಕೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಕೂಟ ನಡೆಸುತ್ತಿರುವ ಅನಿರ್ದಿಷ್ಟಾವಧಿಯ ಮುಷ್ಕರ ಐದನೇ ದಿನವೂ ಮುಂದುವರಿದಿದೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮತ್ತು ಪುತ್ತೂರು ವಿಭಾಗದಿಂದ ಬಸ್‌ಗಳ ಓಡಾಟದ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ತಿಳಿಸಿದ್ದಾರೆ.

ಮಂಗಳೂರು ವಿಭಾಗದಿಂದ ನಿತ್ಯ ಸುಮಾರು 480 ಮಾರ್ಗದಲ್ಲಿ ಬಸ್‌ಗಳು ಕಾರ್ಯಾಚರಣೆ ಮಾಡುತ್ತಿವೆ. ಸದ್ಯ ಮುಷ್ಕರದ ಅವಧಿಯಲ್ಲಿ ಶನಿವಾರ ಸುಮಾರು 140 ಬಸ್‌ಗಳು ಬೆಂಗಳೂರು, ಮೈಸೂರು, ಧರ್ಮಸ್ಥಳ, ಹುಬ್ಬಳ್ಳಿ, ಕಾಸರಗೋಡು ಹೈದರಾಬಾದ್‌, ಮದುರೈ, ಕೊಯಮತ್ತೂರು, ಮಂತ್ರಾಲಯ ಮುಂತಾದ ಮಾರ್ಗಗಳಲ್ಲಿ ಸಂಚರಿಸಿವೆ ಎಂದು ಹೇಳಿದ್ದಾರೆ.

ADVERTISEMENT

ಭಾನುವಾರ ಸುಮಾರು 200 ವಾಹನಗಳಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಸಾರಿಗೆ ಸೌಲಭ್ಯ ಕಲ್ಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಬಸ್‌ಗಳನ್ನು ಓಡಿಸಲು ಅಗತ್ಯ ಯೋಜನೆಗಳನ್ನು ಮಂಗಳೂರು ವಿಭಾಗದಿಂದ ಹಮ್ಮಿಕೊಳ್ಳಲಾಗಿದೆ. ವಿಭಾಗದ ಚಾಲನಾ ಮತ್ತು ತಾಂತ್ರಿಕ ಸಿಬ್ಬಂದಿಗಳು ಸಕಾರಾತ್ಮಕವಾಗಿ ಸ್ಪಂದಿಸಿ, ಕರ್ತವ್ಯಕ್ಕೆ ಮರಳುತ್ತಿದ್ದು, ಇನ್ನೂ ಹೆಚ್ಚಿನ ಬಸ್‌ಗಳನ್ನು ಓಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪುತ್ತೂರು ವಿಭಾಗದಲ್ಲಿಯೂ ಬಸ್‌ಗಳ ಓಡಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಶನಿವಾರ 47 ಬಸ್‌ಗಳು ಸಂಚರಿಸಿದ್ದು, ಭಾನುವಾರ 75 ಬಸ್‌ಗಳನ್ನು ಬೆಂಗಳೂರು, ಮೈಸೂರು, ಶಿವಮೊಗ್ಗ, ಮಡಿಕೇರಿ ಮುಂತಾದ ಮಾರ್ಗಗಳಲ್ಲಿ ಓಡಿಸಲಾಗುತ್ತಿದೆ.

ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗ ಹಾಗೂ ಪುತ್ತೂರು ವಿಭಾಗಗಳ ವತಿಯಿಂದ ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಬಸ್‌ಗಳನ್ನು ನಿಯೋಜಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ಈಗಾಗಲೇ ಕರ್ತವ್ಯಕ್ಕೆ ಹಾಜರಾದ ನೌಕರರೆಲ್ಲರಿಗೆ ಅಭಿನಂದನೆ ಸಲ್ಲಿಸಿರುವ ಅವರು, ಇನ್ನುಳಿದ ನೌಕರರು ಕೂಡ ಕರ್ತವ್ಯಕ್ಕೆ ಹಾಜರಾಗಿ ಈ ಸಂಕಷ್ಟ ಕಾಲದಲ್ಲಿ ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.