ADVERTISEMENT

ಬೆಳ್ತಂಗಡಿ | ‘ಗಣಿ, ರೆಸಾರ್ಟ್, ಕೈಗಾರಿಕೆ ಬೇಡ’

*ಪ್ರಥಮ ಮಲೆಕುಡಿಯ ಆದಿವಾಸಿ ಸಮಾವೇಶ*: ಹೋರಾಟಗಾರರ ಬಿಡುಗಡೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 19:54 IST
Last Updated 26 ಡಿಸೆಂಬರ್ 2025, 19:54 IST
ಬೆಳ್ತಂಗಡಿಯ ಕುತ್ಲೂರು ಮಲೆಯಲ್ಲಿ ನಡೆದ ಮಲೆಕುಡಿಯ ಆದಿವಾಸಿ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಮಾತನಾಡಿದರು 
ಬೆಳ್ತಂಗಡಿಯ ಕುತ್ಲೂರು ಮಲೆಯಲ್ಲಿ ನಡೆದ ಮಲೆಕುಡಿಯ ಆದಿವಾಸಿ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಮಾತನಾಡಿದರು    

ಬೆಳ್ತಂಗಡಿ (ದಕ್ಷಿಣ ಕನ್ನಡ): ‘ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಪ್ರದೇಶದಲ್ಲಿ ಗಣಿ, ರೆಸಾರ್ಟ್, ಕೈಗಾರಿಕೆ ಮತ್ತು ಅಭಿವೃದ್ಧಿ ಯೋಜನೆ, ಎನ್‌ಜಿಒಗಳ ಜೀವವೈವಿಧ್ಯ ಕೇಂದ್ರ, ಅಧ್ಯಯನ ಚಟುವಟಿಕೆ ನಿಲ್ಲಿಸಬೇಕು’ ಎಂದು ತಾಲ್ಲೂಕಿನ ಕುತ್ಲೂರುಮಲೆಯಲ್ಲಿ ಗುರುವಾರ ನಡೆದ ಮಲೆಕುಡಿಯ ಆದಿವಾಸಿ ಸಮಾವೇಶ ಆಗ್ರಹಿಸಿತು.

ನಕ್ಸಲ್ ಚಳವಳಿಯಿಂದ ಮುಕ್ತಗೊಂಡ ಬಳಿಕ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ನಡೆದ ಮೊದಲ ಸಮಾವೇಶದ ನಿರ್ಣಯಗಳಲ್ಲಿ ಈ ವಿಷಯ ಪ್ರಸ್ತಾಪಿಸಲಾಗಿದ್ದು ನಗರದತ್ತ ಬರುವ ಪ್ರಾಣಿ, ಸರೀಸೃಪಗಳನ್ನು ಮಲೆಗಳಲ್ಲಿರುವ ಜನವಸತಿ ಪ್ರದೇಶದಲ್ಲಿ ಬಿಡುವುದನ್ನು ನಿಲ್ಲಿಸಬೇಕು, ಮಲೆಕುಡಿಯ ಕುಟುಂಬಗಳಿಗೆ ವೈಯಕ್ತಿಕ ಮತ್ತು ಸಮೂಹ ಅರಣ್ಯ ಉತ್ಪನ್ನ ಸಂಗ್ರಹದ ಹಕ್ಕು ನೀಡಬೇಕು, ಭೂದಾಖಲೆ ಒದಗಿಸಬೇಕು, ಕುತ್ಲೂರಿನ ಸುಂದರಿ ಸೇರಿದಂತೆ ಆದಿವಾಸಿ ಮಲೆಕುಡಿಯ ಹೋರಾಟಗಾರರನ್ನು ಬಿಡುಗಡೆ ಮಾಡಬೇಕು, ಆದಿವಾಸಿ ಮಲೆಕುಡಿಯರಿಗೆ ಗ್ರಾಮಪಂಚಾಯಿತಿಗಳಲ್ಲಿ ರಾಜಕೀಯ ಪ್ರಾತಿನಿಧ್ಯ ನೀಡಬೇಕು. ಪುರ್ಸ ಪೂಜೆ, ಸುದೆ ಪೂಜೆ ಸೇರಿದಂತೆ ಎಲ್ಲ ಆಚರಣೆ, ಕಿರು ಸಂಸ್ಕೃತಿ, ಪ್ರಕೃತಿ ಆರಾಧನಾ ಪದ್ಧತಿ ರಕ್ಷಣೆಗೆ ಮುಂದಾಗಬೇಕು ಎಂಬ ಬೇಡಿಕೆ ಮಂಡಿಸಲಾಯಿತು. 

ಸಮಾವೇಶವನ್ನು ಪತ್ರಕರ್ತ ನವೀನ್ ಸೂರಿಂಜೆ ಉದ್ಘಾಟಿಸಿದರು. ಸಮಾರೋಪ ಭಾಷಣ ಮಾಡಿದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ‘ನಕ್ಸಲ್ ಚಳವಳಿಯ ನಾಯಕರ ಪೈಕಿ ಕೆಲವರನ್ನು ಗುಂಡು ಹಾರಿಸಿ ಕೊಲ್ಲಲಾಯಿತು. ಉಳಿದವರನ್ನು ಶರಣಾಗತಿಯ ಹೆಸರಿನಲ್ಲಿ ಜೈಲಿನಲ್ಲಿ ಇಡಲಾಗಿದೆ. ಆದರೆ ಅವರು ಎತ್ತಿದ ಪ್ರಶ್ನೆಗಳು ಹಾಗೆಯೇ ಉಳಿದಿದೆ. ಹೋರಾಟದ ಮಾರ್ಗ ತಪ್ಪಾಗಿರ ಬಹುದು. ಆದರೆ ಅವರ ಪ್ರಶ್ನೆಗಳಿಗೆ ಪ್ರಜಾಸತ್ತಾತ್ಮಕ ಹೋರಾಟದ ಮೂಲಕ ಉತ್ತರ ಕಂಡುಕೊಳ್ಳಬೇಕಿದೆ’ ಎಂದರು.

ADVERTISEMENT

ಸುಕುಮಾರ ಮಲೆಕುಡಿಯ ದಿಡುಪೆ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಕೃಷ್ಣಪ್ಪ ಕೊಂಚಾಡಿ, ಬಿ.ಎಂ ಭಟ್, ಶಿಶಿಲ ರಾಮಚಂದ್ರ, ಈಶ್ವರಿ ಪದ್ಮುಂಜ,  ಚೀಂಕ್ರ ಮಲೆಕುಡಿಯ, ಪೂವಪ್ಪ ಮಲೆಕುಡಿಯ, ಜಯಾನಂದ ಮಲೆಕುಡಿಯ, ಯಶೋಧರ ಮಲೆಕುಡಿಯ ಪಾಲ್ಗೊಂಡಿದ್ದರು.

ಬೆಳ್ತಂಗಡಿಯ ಕುತ್ಲೂರು ಮಲೆಯಲ್ಲಿ ನಡೆದ ಮಲೆಕುಡಿಯ ಆದಿವಾಸಿ ಸಮಾವೇಶದಲ್ಲಿ ಪಾಲ್ಗೊಂಡವರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.