ಪಾದಯಾತ್ರೆಯ ಕರಪತ್ರ ಬಿಡುಗಡೆ ಗೊಳಿಸಲಾಯಿತು
ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ನೇತೃತ್ವದಲ್ಲಿ ವಿವಿಧ ಬಿಲ್ಲವ ಸಂಘಟನೆಗಳ ಸಹಯೋಗದಲ್ಲಿ 'ಕುದ್ರೋಳಿ ತೀರ್ಥಾಟನೆ' ನಮ್ಮ ನಡಿಗೆ ಶ್ರೀ ಗುರುವಿನೆಡೆಗೆ ಪಾದಯಾತ್ರೆಯು ಫೆ. 21ರಂದು ಮಂಗಳೂರಿನಲ್ಲಿ ನಡೆಯಲಿದೆ ಎಂದು ಕುದ್ರೋಳಿ ಕ್ಷೇತ್ರದ ಆಡಳಿತ ಮಂಡಳಿ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ ಹೇಳಿದರು.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಸ್ಪ್ರಶ್ಯತೆಯ ಕಾರಣಕ್ಕೆ ಹಿಂದುಳಿದ ವರ್ಗಗಳಿಗೆ ದೇವಾಲಯಗಳಿಗೆ ಪ್ರವೇಶ ಇರಲಿಲ್ಲ. ಆ ಕಾಲದಲ್ಲಿ ಸಮಾನತೆಯ ಹರಿಕಾರರಾದ
ಬ್ರಹ್ಮಶ್ರೀ ನಾರಾಯಣ ಗುರುಗಳು ಕುದ್ರೋಳಿ ಕ್ಷೇತ್ರದಲ್ಲಿ ಶಿವಲಿಂಗ ಪ್ರತಿಷ್ಠಾಪನೆ ಮಾಡಿದರು. 1912 ಫೆಬ್ರುವರಿ 21, ಶಿವಲಿಂಗ ಪ್ರತಿಷ್ಠಾಪನೆ ಮಾಡಿದ ದಿನ ಮಾತ್ರವಲ್ಲ, ಶೋಷಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯದ ಹೊಸ ದಿಕ್ಕನ್ನು ತೋರಿದ ಕ್ಷಣವಾಗಿತ್ತು. ಈ ದಿನದ ನೆನಪಿನಲ್ಲಿ ಫೆ. 21ರಂದು ನಗರದ ರೈಲ್ವೆ ನಿಲ್ದಾಣದಿಂದ ಕುದ್ರೋಳಿ ಕ್ಷೇತ್ರದವರೆಗೆ 'ಓಂ ಶ್ರೀ ನಾರಾಯಣ ಪರಮ ಗುರುವೇ ನಮಃ' ಮಂತ್ರೋಚ್ಛಾರಣೆಯೊಂದಿಗೆ ಪಾದಯಾತ್ರೆ ನಡೆಸಲಾಗುವುದು ಎಂದರು.
ಶ್ರೀ ಗುರುಗಳ ಜ್ಞಾನದ ಸಂಕೇತವಾದ ಹಳದಿ ವಸ್ತ್ರಧಾರಣೆಯೊಂದಿಗೆ 10 ಸಾವಿರಕ್ಕೂ ಹೆಚ್ಚು ಭಕ್ತರು ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಕುದ್ರೋಳಿ ತೀರ್ಥಾಟನೆ ಕಾರ್ಯಕ್ರಮ ವನ್ನು ಈ ವರ್ಷ ಪ್ರಾರಂಭಿಸಲಾಗುತ್ತಿದ್ದು, ಇನ್ನು ಮುಂದೆ ಪ್ರತಿ ವರ್ಷ ಈ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ ಎಂದು ತಿಳಿಸಿದರು.
ಆಡಳಿತ ಮಂಡಳಿಯ ಅಧ್ಯಕ್ಷ ಜಯರಾಜ ಸೋಮಸುಂದರಂ, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.