ADVERTISEMENT

ಕುಕ್ಕೆ ಸುಬ್ರಹ್ಮಣ್ಯ: ಸಂಭ್ರಮದ ಲಕ್ಷದೀಪೋತ್ಸವ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 6:19 IST
Last Updated 21 ನವೆಂಬರ್ 2025, 6:19 IST
   

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ರಾತ್ರಿ ಲಕ್ಷದೀಪೋತ್ಸವ ನೆರವೇರಿತು.

ಸಾಲು ಹಣತೆ ದೀಪಗಳ ನಡುವೆ ಕುಕ್ಕೆ ಸುಬ್ರಹ್ಮಣ್ಯ ದೇವರ ಲಕ್ಷದೀಪೋತ್ಸವವು ಸಡಗರದಿಂದ ನಡೆಯಿತು. ಚಂದ್ರಮಂಡಲ ರಥದಲ್ಲಿ ಸುಬ್ರಹ್ಮಣ್ಯ ದೇವರ ಉತ್ಸವ ನಡೆಯಿತು.

ದೇವಳದ ಅರ್ಚಕರು ಉತ್ಸವದ ವಿಧಿವಿಧಾನ ನೆರವೇರಿಸಿದರು. ರಥಬೀದಿ ಯಿಂದ ಕಾಶಿಕಟ್ಟೆವರೆಗೆ ಬೆಳಗಿದ ಲಕ್ಷ ಹಣತೆ ದೀಪದ ನಡುವೆ ದೇವರ ಉತ್ಸವ ನೆರವೇರಿತು. ದೇವಳದ, ಸಾರ್ವಜನಿಕ ಭಕ್ತರ, ಸಂಘ ಸಂಸ್ಥೆಗಳ ಸಹಕಾರದಿಂದ ಲಕ್ಷ ಹಣತೆಗಳು ಬೆಳಗಿದವು.

ADVERTISEMENT

ದೇವಳದ ಗೋಪುರದಿಂದ ಕಾಶಿಕಟ್ಟೆವರೆಗೆ, ಅಭಯ ಆಂಜನೇಯ ಗುಡಿ, ಸವಾರಿ ಮಂಟಪ, ಆದಿಸುಬ್ರಹ್ಮಣ್ಯ, ಬೈಪಾಸ್ ರಸ್ತೆ, ಕಾಶಿಕಟ್ಟೆ ಸುತ್ತಲಿನ ಆವರಣ, ಗ್ರಾಮ ಪಂಚಾಯಿತಿ, ಪೊಲೀಸ್ ಠಾಣೆ, ಕಾಶಿಕಟ್ಟೆಯಿಂದ ಅಡ್ಡಬೀದಿ ವೃತ್ತದ ವರೆಗೆ ರಸ್ತೆಯ ಎರಡೂ ಬದಿ ಸಾರ್ವಜನಿಕರು, ಸಂಘ ಸಂಸ್ಥೆಗಳ ಸಹಕಾರದಲ್ಲಿ ಹಣತೆ ದೀಪ ಬೆಳಗಿತು.

ಮಹಾಪೂಜೆಯ ಬಳಿಕ ದೇವರ ಹೊರಾಂಗಣ ಉತ್ಸವ ಆರಂಭವಾಯಿತು. ಪ್ರಥಮವಾಗಿ ಕಾಚುಕುಜುಂಬ ದೈವ ದೇವರನ್ನು ಭೇಟಿಯಾಯಿತು. ನಂತರ ಸಾಲುದೀಪಗಳ ನಡುವೆ ದೇವರ ಶೇಷವಾಹನಯುಕ್ತ ಬಂಡಿ ಉತ್ಸವ ಮತ್ತು ಪಾಲಕಿ ಉತ್ಸವ ಮತ್ತು ವಿವಿಧ ಸಂಗೀತ ವಾದ್ಯಗಳ ಸುತ್ತುಗಳು ನೆರವೇರಿದವು. ಅಂತಿಮವಾಗಿ ದೇವರು ರಥಬೀದಿ ಪ್ರವೇಶಿಸಿದರು.

ಹೊರಾಂಗಣ ಉತ್ಸವದ ಬಳಿಕ ರಥಬೀದಿಗೆ ಬಂದ ದೇವರು ರಥದಲ್ಲಿ ಆರೂಢರಾಗಿ ಪೂಜೆ ಸ್ವೀಕರಿಸಿದರು. ಬಳಿಕ ದೇವಳದಿಂದ ಕಾಶಿಕಟ್ಟೆವರೆಗೆ ಉತ್ಸವ ನೆರವೇರಿತು. 

ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಜಾತ್ರೋತ್ಸವವನ್ನು ಸಸೂತ್ರವಾಗಿ ನಡೆಸಲು ಸಂಪೂರ್ಣ ರಕ್ಷಣೆ ನೀಡುವುದಾಗಿ ದೇವರಲ್ಲಿ ದೈವಗಳು ನುಡಿಗಟ್ಟು ಮೂಲಕ ತಿಳಿಸಿದವು.

ಲಕ್ಷದೀಪೋತ್ಸವದ ದಿನ ದೇವರ ಹೊರಾಂಗಣ ಉತ್ಸವದ ಆರಂಭದಲ್ಲಿ ಕಾಚು ಕುಜುಂಬ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವರ ಮುಖಾಮುಖಿ ನೆರವೇರಿತು. ಈ ಸಂದರ್ಭದಲ್ಲಿ ಕಾಚುಕುಜುಂಬ ದೈವವು ಅಭಯ ನುಡಿ ನೀಡಿತು.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್.ಇಂಜಾಡಿ ಮತ್ತು ಕಾರ್ಯನಿರ್ವಹಣಾಧಿ
ಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಎಇಒ ಯೇಸುರಾಜು ಅವರಿಗೆ ದೈವವು ಆಶೀರ್ವಾದ ನುಡಿ ನೀಡಿತು.

ಭಜನಾ ಸಂಭ್ರಮದಲ್ಲಿ ಸುಮಾರು 131 ಕುಣಿತ ಭಜನಾ ತಂಡಗಳು ಭಾಗವಹಿಸಿದ್ದವು. ತಲಾ 12 ಸದಸ್ಯರಂತೆ ಏಕ ಕಾಲದಲ್ಲಿ 1,572 ಮಂದಿ ಸೇವೆ ನೆರವೇರಿಸಿದರು. ಭಜನಾ ಸಂಘಟಕ ಗಣೇಶ್ ಪರ್ವತಮುಖಿ ಅವರನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್.ಇಂಜಾಡಿ ಗೌರವಿಸಿದರು. ದೇವಸ್ಥಾನದ ಸಿಬ್ಬಂದಿ ಮಹೇಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.