ADVERTISEMENT

ಕುಕ್ಕೆ ದೇವಳ: ದೈವಗಳಿಗೆ ಗೋಪುರ ನಡಾವಳಿ ಸಂಪನ್ನ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2024, 15:57 IST
Last Updated 13 ಡಿಸೆಂಬರ್ 2024, 15:57 IST
ಕುಕ್ಕೆ ದೇವಳದಲ್ಲಿ ದೈವಗಳಿಗೆ ಗೋಪುರ ನಡಾವಳಿ ನಡೆಯಿತು
ಕುಕ್ಕೆ ದೇವಳದಲ್ಲಿ ದೈವಗಳಿಗೆ ಗೋಪುರ ನಡಾವಳಿ ನಡೆಯಿತು   

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಜಾತ್ರಾ ಮಹೋತ್ಸವದ ನಂತರ ರಕ್ಷಣಾ ದೈವಗಳಿಗೆ ಕೊಡುವ ಕಟ್ಟು ಕಟ್ಟಳೆಯ ಕೋಲ ಮತ್ತು ಪರ್ವಗಳನ್ನೊಳಗೊಂಡ ಗೋಪುರ ನಡಾವಳಿಯು ದೇವಳದಲ್ಲಿ ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗ್ಗಿನವರೆಗೆ ನಡೆಯಿತು.

ಶುಕ್ರವಾರ ಬೆಳಿಗ್ಗೆ ಕ್ಷೇತ್ರ ದೈವ ಪುರುಷರಾಯವು ಕುಮಾರಧಾರ ನದಿಗೆ ತೆರಳಿ ಮತ್ಸ್ಯ ತೀರ್ಥದಲ್ಲಿನ ಪವಿತ್ರ ಮೀನುಗಳಿಗೆ ಅಕ್ಕಿ ಹಾಕುವುದರ ಮೂಲಕ ಆಹಾರವನ್ನು ನೀಡಿ ಹರಸಿತು. ಗುರುವಾರ ರಾತ್ರಿ ದೈವಗಳ ಭಂಡಾರ ತೆಗೆಯಲಾಯಿತು. ಬಳಿಕ ಪುರೋಹಿತ ನಾರಾಯಣ ಭಟ್ ನೂಚಿಲ ಪ್ರಸಾದ ನೀಡಿದರು. ನಂತರ ದೈವಗಳಿಗೆ ಗಗ್ಗರ ಸೇವೆ ಆರಂಭವಾಯಿತು.

ಗೋಪುರದ ಧರ್ಮಸಮ್ಮೇಳನ ಮಂಟಪದಲ್ಲಿ ಕಾಚುಕುಜುಂಬ, ತೇರಕುಮಾರ ದೈವಗಳ ನೇಮ ನಡಾವಳಿಗಳು ನಡೆಯಿತು. ಬಳಿಕ ದೇವಳದ ಒಳಾಂಗಣಕ್ಕೆ ದೈವದ ಭಂಡಾರ ಪ್ರದಕ್ಷಿಣೆ ಹಾಕಿದ ಬಳಿಕ ಕ್ಷೇತ್ರ ರಕ್ಷಕಿ ಹೊಸಳಿಗಮ್ಮ ದೈವದ ನೇಮೋತ್ಸವ ನೆರವೇರಿತು. ದೈವದ ನರ್ತನಸೇವೆ ಮತ್ತು ಪ್ರಸಾದ ವಿತರಣೆ ನಡೆಯಿತು. ಆ ಬಳಿಕ ಉದ್ರಾಂಡಿ (ಉರಿಮಾರಿ) ಹಾಗೂ ಪೊಟ್ಟಭೂತಗಳಿಗೆ ನೇಮೋತ್ಸವ ನೆರವೇರಿತು. ಶುಕ್ರವಾರ ಮುಂಜಾನೆ ಪಂಜುರ್ಲಿ ದೈವದ ನೇಮೋತ್ಸವ ಜರುಗಿತು.

ADVERTISEMENT

ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ದೇವಳದ ಹೆಬ್ಬಾರ್ ಪ್ರಸನ್ನ ಭಟ್, ಪಾಟಾಳಿ ಲೋಕೇಶ್ ಎ.ಆರ್., ಸಿಬ್ಬಂದಿ ಎನ್.ಸಿ.ಲಕ್ಷ್ಮಣ, ಲೋಕೇಶ್ ಎಂ.ಆರ್., ಪ್ರಮುಖರಾದ ದಯಾನಂದ ದೋಣಿಮನೆ, ರಾಜೇಶ್ ಸುಬ್ರಹ್ಮಣ್ಯ ಭಾಗವಹಿಸಿದ್ದರು.

ಕುಕ್ಕೆ ದೇವಳದಲ್ಲಿ ದೈವಗಳಿಗೆ ಗೋಪುರ ನಡಾವಳಿ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.