ADVERTISEMENT

ಮಂಗಳೂರು | ಕಾರ್ಮಿಕ ಹಿತಾಸಕ್ತಿ ನಿರ್ಲಕ್ಷ್ಯ: ಆರೋಪ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 2:45 IST
Last Updated 6 ಫೆಬ್ರುವರಿ 2026, 2:45 IST
ಜಿಲ್ಲಾ ಮಟ್ಟದ ವಾಹನ ಪ್ರಚಾರ ಜಾಥಾ ಉದ್ಘಾಟಿಸಿದ ಫಣೀಂದ್ರ ಕೆ ಮಾತನಾಡಿದರು
ಜಿಲ್ಲಾ ಮಟ್ಟದ ವಾಹನ ಪ್ರಚಾರ ಜಾಥಾ ಉದ್ಘಾಟಿಸಿದ ಫಣೀಂದ್ರ ಕೆ ಮಾತನಾಡಿದರು   

ಮಂಗಳೂರು: ಕಾರ್ಮಿಕ ವರ್ಗದ ಹಿತಾಸಕ್ತಿ ಕಾಪಾಡಬೇಕಾದ ಕೇಂದ್ರ ಸರ್ಕಾರವು ನಿರಂತರವಾಗಿ ಕಾರ್ಪೊರೇಟ್ ಹಿತಾಸಕ್ತಿಗಳನ್ನು ಕಾಪಾಡುತ್ತಿದೆ. ಹಸಿವು ಮುಕ್ತ, ಬಡತನ ಮುಕ್ತ, ನಿರುದ್ಯೋಗ ಮುಕ್ತ ಭಾರತವಾಗಿ ನಿರ್ಮಾಣ ಮಾಡುವ ಬದಲು ಯೂನಿಯನ್ ಮುಕ್ತ ಭಾರತವನ್ನಾಗಿ ನಿರ್ಮಿಸಲು ಹೊರಟಿದೆ. ಈ ಮೂಲಕ ಕಾರ್ಮಿಕ ವರ್ಗವನ್ನು ಮತ್ತೆ ಗುಲಾಮರನ್ನಾಗಿಸಿ ಹೀನಾಯವಾಗಿ ಶೋಷಣೆ ಮಾಡಲು ಹೊರಟಿದೆ ಎಂದು ಕರ್ಣಾಟಕ ಬ್ಯಾಂಕ್ ನೌಕರರ ಸಂಘಟನೆಯ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಫಣೀಂದ್ರ ಕೆ ಆರೋಪಿಸಿದರು.

ಕೇಂದ್ರ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಫೆ.12ರ ಅಖಿಲ ಭಾರತ ಮಹಾಮುಷ್ಕರದ ಪ್ರಚಾರಾರ್ಥವಾಗಿ ನಡೆದ ಜಿಲ್ಲಾ ಮಟ್ಟದ ವಾಹನ ಪ್ರಚಾರ ಜಾಥಾ ಉದ್ಘಾಟಿಸಿ ಅವರು ಮಾತನಾಡಿದರು.

ಬ್ಯಾಂಕ್ ನೌಕರರ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನ್ಸೆಂಟ್ ಡಿಸೋಜ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ವಿಲೀನಗೊಳಿಸುವ ಹೆಸರಿನಲ್ಲಿ ಸರ್ವನಾಶ ಮಾಡಿ ದೇಶದ ಅರ್ಥ ವ್ಯವಸ್ಥೆಯನ್ನು ಬಿಕ್ಕಟ್ಟಿಗೆ ಸಿಲುಕಿಸಲಾಗಿದೆ. ವಿಮಾ ಕ್ಷೇತ್ರದಲ್ಲೂ ಶೇ100ರಷ್ಟು ವಿದೇಶಿ ನೇರ ಹೂಡಿಕೆಯನ್ನು ಮಾಡಿ ವಿದೇಶಿ ವಿಮಾ ಸಂಸ್ಥೆಗಳಿಗೂ ಕೇಂದ್ರ ಸರ್ಕಾರ ಮುಕ್ತ ಅವಕಾಶ ನೀಡಿದೆ ಎಂದರು.

ADVERTISEMENT

ಪ್ರಾಸ್ತಾವಿಕವಾಗಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ದೇಶದ ಶೇ 70ಕ್ಕಿಂತ ಹೆಚ್ಚಿನ ಕಾರ್ಖಾನೆಗಳು ಕಾರ್ಮಿಕ ಸಂಹಿತೆಗಳಿಂದ ಹೊರಗುಳಿಯುವ ಮೂಲಕ ಶೇ 90ರಷ್ಟು ಕಾರ್ಮಿಕರು ಯಾವುದೇ ಕಾನೂನಿನ ರಕ್ಷಣೆಯಿಲ್ಲದೆ ಬೀದಿ ಪಾಲಾಗಲಿದ್ದಾರೆ ಎಂದರು.

ಬ್ಯಾಂಕ್ ನೌಕರರ ರಾಜ್ಯ ಮುಖಂಡ ಬಿ.ಎಂ. ಮಾಧವ, ಮುಖಂಡರಾದ ಬಿ‌.ಎಂ.ಭಟ್, ವಸಂತ ಆಚಾರಿ, ಯೋಗೀಶ್ ಜಪ್ಪಿನಮೊಗರು, ವಸಂತಿ, ಲೋಲಾಕ್ಷಿ, ರೋಹಿದಾಸ್, ಜಯಲಕ್ಷ್ಮಿ, ಜಯಶ್ರೀ, ಸೀತಾರಾಮ ಬೇರಿಂಜ, ಬಿ ಶೇಖರ್, ವಿ ಕುಕ್ಯಾನ್, ಎಚ್.ವಿ. ರಾವ್, ಸುಧಾಕರ, ಪುರುಷೋತ್ತಮ ಪೂಜಾರಿ, ಬಿ.ಎನ್.ದೇವಾಡಿಗ, ಅಲ್ಬನ್ ಮಸ್ಕರೇನಸ್, ವಸಂತ ಕುಮಾರ್, ಮೋಹನ್, ಕಿರಣ್ ರಾಜ್, ಪ್ರಮೀಳಾ ಶಕ್ತಿನಗರ, ಫ್ಲೇವಿಕ್ರಾಸ್ತಾ, ಯೋಗಿತಾ, ಹಸನ್ ಕುದ್ರೋಳಿ, ಸಿಕಂದರ್, ಹಂಝ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.