
ಉಜಿರೆ: ಸಮೀಪದ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದ ಲಕ್ಷದೀಪೋತ್ಸವ ಕಾರ್ಯಕ್ರಮ ನ.15ರಿಂದ 19ರವರೆಗೆ ನಡೆಯಲಿವೆ.
18ರಂದು ಸಂಜೆ 5ರಿಂದ ಸರ್ವಧರ್ಮ ಸಮ್ಮೇಳನದ 93ನೇ ಅಧಿವೇಶನ ನಡೆಯಲಿದ್ದು, ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ ಸಚಿವ ಎಂ.ಬಿ.ಪಾಟೀಲ್ ಅಧಿವೇಶನ ಉದ್ಘಾಟಿಸುವರು. ಹರಿಹರಪುರದ ಸ್ವಯಂಪ್ರಕಾಶ್ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಪತ್ರಕರ್ತ ಎ.ಸೂರ್ಯಪ್ರಕಾಶ್ ಪಂಡಿತ್, ಅಂಕಣಕಾರ ತನ್ವೀರ್ ಅಹಮ್ಮದ್ ಉಲ್ಲಾ ಉಪನ್ಯಾಸ ನೀಡುವರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 8.30ರಿಂದ ಚೆನ್ನೈನ ಶ್ರೀದೇವಿ ನೃತ್ಯಾಲಯದ ಕಲಾವಿದರಿಂದ ಭರತನಾಟ್ಯ ನೃತ್ಯ ಪ್ರದರ್ಶನವಿದೆ.ರಾತ್ರಿ ಕಂಚಿಮಾರು ಕಟ್ಟೆ ಉತ್ಸವ ನಡೆಯಲಿದೆ.
19ರಂದು ಸಂಜೆ 5 ಗಂಟೆಗೆ ಸಾಹಿತ್ಯ ಸಮ್ಮೇಳನದ 93ನೇ ಅಧಿವೇಶನವನ್ನು ಹಿರಿಯ ಸಾಹಿತಿ ಪ್ರೊ.ಪ್ರೇಮಶೇಖರ ಉದ್ಘಾಟಿಸುವರು. ಪತ್ರಕರ್ತ ವಿಶ್ವೇಶ್ವರ ಭಟ್ ಅಧ್ಯಕ್ಷತೆ ವಹಿಸುವರು. ಲೇಖಕಿ ಶಾಂತಾ ನಾಗಮಂಗಲ, ವಿವೇಕಹಂಸ ಮಾಸಪತ್ರಿಕೆಯ ಸಂಪಾದಕ ರಘು ವಿ., ಸಾಹಿತಿ ಬಿ.ಎಂ.ಶರಭೇಂದ್ರ ಸ್ವಾಮಿ ಉಪನ್ಯಾಸ ನೀಡುವರು.
ರಾತ್ರಿ 8.30ರಿಂದ ಬೆಂಗಳೂರಿನ ರಾಹುಲ್ ವೆಲ್ಲಾಲ್ ಮತ್ತು ಬಳಗದವರಿಂದ ಸಂಗೀತ ಕಾರ್ಯಕ್ರಮವಿದೆ.ರಾತ್ರಿ 9.45ರಿಂದ ದಕ್ಷಯಜ್ಞ ಯಕ್ಷಗಾನ ಪ್ರದರ್ಶನವಿದೆ. ರಾತ್ರಿ 12 ಗಂಟೆ ಬಳಿಕ ಗೌರಿಮಾರುಕಟ್ಟೆ ಉತ್ಸವದೊಂದಿಗೆ ಲಕ್ಷದೀಪೋತ್ಸವ ನಡೆಯಲಿದೆ. 20ರ ಬೆಳಗಿನ ಜಾವ ಲಕ್ಷ ದೀಪೋತ್ಸವ ಸಮಾಪನಗೊಳ್ಳುತ್ತದೆ.
ಲಕ್ಷ ದೀಪೋತ್ಸವದಲ್ಲಿ ನಾಡಿನ ವಿವಿಧೆಡೆಯಿಂದ ಭಕ್ತರು ಬರಲಿದ್ದು, ರಾಜ್ಯದ ವಿವಿಧ ಭಾಗಗಳಿಂದ ಚೆಂಡೆ, ಕೊಂಬು, ಕಹಳೆ, ವಾಲಗ, ನಾಗಸ್ವರ ಮೊದಲಾದ ಸಾವಿರಾರು ಕಲಾವಿದರು ರಾತ್ರಿ ಇಡೀ ಕಲಾಸೇವೆ ಮಾಡುವರು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.