ADVERTISEMENT

ಶಾಸಕರು, ಸಂಸದರ ಮಾನಹಾನಿ, ಕಾನೂನು ಕ್ರಮ: ಸುದರ್ಶನ

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ ಮೂಡುಬಿದಿರೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2021, 5:54 IST
Last Updated 5 ಜೂನ್ 2021, 5:54 IST
ಸುದರ್ಶನ ಎಂ.
ಸುದರ್ಶನ ಎಂ.   

ಮಂಗಳೂರು: ಕೆಲವು ಸ್ಥಾಪಿತ ಹಿತಾಸಕ್ತಿ ಗಳು ಸಾಮಾಜಿಕ ಜಾಲತಾಣದಲ್ಲಿ ಶಾಸಕರು, ಸಂಸದರ ಮಾನಹಾನಿ ಮಾಡುವ ಕಾರ್ಯ ಮಾಡುತ್ತಿದ್ದಾರೆ. ಈ ಬಗ್ಗೆ ಬಿಜೆಪಿ ಕಾನೂನು ಪ್ರಕೋಷ್ಠವು ಕ್ರಮ ವಹಿಸಲಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ ಮೂಡುಬಿದಿರೆ ಹೇಳಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪ್ರಚಾರ ಮಾಡಿದ ಕಾಂಗ್ರೆಸ್ ಮುಖಂಡರ ಮೇಲೆ ಕಾನೂನು ಕ್ರಮ ಕೈಗೊಂಡ ಬಗ್ಗೆ ಮಾಜಿ ಶಾಸಕ ಅಭಯಚಂದ್ರ ಜೈನ್ ಖಂಡಿಸಿದ್ದಾರೆ. ಆದರೆ, ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಮೂಡುಬಿದಿರೆ ಬ್ಯಾಂಕ್ ಉದ್ಯೋಗಿ ಯೋಗೀಶ್ ಪ್ರಭು ಮೇಲೆ ಇಂಥದ್ದೆ ಪ್ರಕರಣ ದಾಖಲಾದಾಗ ಮಾಜಿ ಶಾಸಕರ ಮನಸ್ಸಿಗೆ ಬೇಸರವಾಗಿಲ್ಲ. ಸುಪ್ರೀಂ ಕೋರ್ಟ್ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯ ಮಾನಹಾನಿ ಮಾಡಲು ಅವಕಾಶ ನೀಡಿಲ್ಲ’ ಎಂದರು.

‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯ ಜೊತೆ ಚುನಾವಣಾ ಪ್ರಚಾರ ಮಾಡಿದ್ದ, ಲೋಕಸಭಾ ಚುನಾವಣೆಯಲ್ಲಿ ನೋಟಾ ಹಾಕಬೇಕು ಎಂದು ಪ್ರಚಾರ ಮಾಡಿದ ವ್ಯಕ್ತಿ ಈಗ ಕಟ್ಟಾ ಬಿಜೆಪಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಆ ವ್ಯಕ್ತಿಗೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ಬಿಜೆಪಿಯ ಯೋಗ್ಯತೆಯ ಬಗ್ಗೆ ಕಾಂಗ್ರೆಸ್ ಸರ್ಟಿಫಿಕೆಟ್ ಕೊಡುವ ಅವಶ್ಯಕತೆ ಇಲ್ಲ. ಲಸಿಕೆ ನೀಡುವಲ್ಲಿ ಅವ್ಯವಹಾರ, ಭ್ರಷ್ಟಾಚಾರ ನಡೆಸುವ ದೌರ್ಭಾಗ್ಯ ಬಿಜೆಪಿಗೆ ಬಂದಿಲ್ಲ. ಲಸಿಕೆ ಬಗ್ಗೆ ದಿನಕ್ಕೊಂದು ಹೇಳಿಕೆ ನೀಡುವ ಶಾಸಕ ಯು.ಟಿ. ಖಾದರ್ ಅವರು ವೈದ್ಯಾಧಿಕಾರಿಯನ್ನು ಮನೆಗೆ ಕರೆಸಿಕೊಂಡು ಲಸಿಕೆ ತೆಗೆದುಕೊಂಡಿದ್ದು ಮಾತ್ರವಲ್ಲ, 45 ವರ್ಷದ ಕೆಳಗಿನ ತಮ್ಮ ಆಪ್ತ ಸಹಾಯಕರಿಗೆ ಲಸಿಕೆ ಕೊಡಿಸಿದ್ದಾರೆ. ಯಾವ ಮಾನದಂಡದಲ್ಲಿ ಅವರು ಲಸಿಕೆ ಕೊಡಿಸಿದ್ದಾರೆ’ ಎಂದು ಪ್ರಶ್ನಿಸಿದರು.

ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಸುಧೀರ್‌ ಶೆಟ್ಟಿ, ಕಸ್ತೂರಿ ಪಂಜ, ಈಶ್ವರ ಕಟೀಲ್, ವಿಜಯ ಕುಮಾರ್ ಶೆಟ್ಟಿ ಇದ್ದರು.

‘ದಾಖಲೆ ಇದ್ದರೆ ಕೊಡಿ’
‘ಶಾಸಕ ವೇದವ್ಯಾಸ್ ಕಾಮತ್ ಮನೆಯಲ್ಲಿ ಲಸಿಕೆಗೆ ಟೋಕನ್ ವಿತರಿಸಿದ ಬಗ್ಗೆ ದಾಖಲೆ ಇದ್ದರೆ ಕೊಡಿ. ಲಸಿಕೆ ವಿತರಣೆ ಕೇಂದ್ರದಲ್ಲಿ ನಿಮ್ಮ ಜನಪ್ರತಿನಿಧಿಗಳು ಹೋಗಿ ನಿಂತಿದ್ದ ದಾಖಲೆಗಳು ನಮ್ಮಲ್ಲಿ ಇವೆ. ಸೀಮಿತ ಸಂಖ್ಯೆಯಲ್ಲಿ ಲಸಿಕೆ ಬಂದಾಗ ಕಾಂಗ್ರೆಸ್ಸಿಗರು ತಮ್ಮ ವಾರ್ಡ್‍ಗಳಲ್ಲಿ ‘ನಾಳೆ ಲಸಿಕೆ ಬರುತ್ತದೆ ಎಲ್ಲರೂ ಬನ್ನಿ’ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಿದ ಪರಿಣಾಮ ಕೆಲವು ಲಸಿಕಾ ಕೇಂದ್ರಗಳಲ್ಲಿ ಜನಜಂಗುಳಿ ಆಗಿ, ಗದ್ದಲವಾಗಿದೆ. ಪಾಲಿಕೆಯ ಬಿಜೆಪಿ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿ ತಿಳಿವಳಿಕೆ ನೀಡಿ, ಲಸಿಕೆ ಕಾರ್ಯ ಸಮರ್ಪಕವಾಗಿ ನಡೆಯಲು ಸಹಕರಿಸುತ್ತಿದ್ದಾರೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.