ADVERTISEMENT

ಗುರುಗಳ ಪೂರ್ಣ ಅಧ್ಯಯನ ನಡೆಯಲಿ: ಬ್ರಹ್ಮಶ್ರೀ ಸಚ್ಚಿದಾನಂದ ಸ್ವಾಮೀಜಿ

ನಾರಾಯಣ ಗುರುಗಳ ಕೃತಿ ‘ಆತ್ಮೋಪದೇಶ ಶತಕಂ’ನ ಕನ್ನಡ ಅನುವಾದ ‘ಶ್ರೀ ಗುರು ಸದ್ದರ್ಶನ’ ಕೃತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 4:46 IST
Last Updated 7 ಜುಲೈ 2025, 4:46 IST
ಮಂಗಳೂರಿನ ಬ್ರಹ್ಮಶ್ರೀ ನಾರಾಯಣ ಗುರು ವೈದಿಕ ಪ್ರತಿಷ್ಠಾನದ ವತಿಯಿಂದ ಕುದ್ರೋಳಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಶ್ರೀ ನಾರಾಯಣ ಗುರುಗಳ ಕೃತಿ ‘ಆತ್ಮೋಪದೇಶ ಶತಕಂ’ನ ಕನ್ನಡ ಅನುವಾದ ‘ಶ್ರೀ ಗುರು ಸದ್ದರ್ಶನ’ ಕೃತಿಯನ್ನು ಬಿಡುಗಡೆ ಮಾಡಲಾಯಿತು
ಮಂಗಳೂರಿನ ಬ್ರಹ್ಮಶ್ರೀ ನಾರಾಯಣ ಗುರು ವೈದಿಕ ಪ್ರತಿಷ್ಠಾನದ ವತಿಯಿಂದ ಕುದ್ರೋಳಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಶ್ರೀ ನಾರಾಯಣ ಗುರುಗಳ ಕೃತಿ ‘ಆತ್ಮೋಪದೇಶ ಶತಕಂ’ನ ಕನ್ನಡ ಅನುವಾದ ‘ಶ್ರೀ ಗುರು ಸದ್ದರ್ಶನ’ ಕೃತಿಯನ್ನು ಬಿಡುಗಡೆ ಮಾಡಲಾಯಿತು   

ಮಂಗಳೂರು: ‘ಶ್ರೀ ನಾರಾಯಣ ದಿವ್ಯಪ್ರಭೇದ ಅಧ್ಯಯನ ಅಭಿಯಾನ ಕನ್ನಡ ಭಾಷೆಯಲ್ಲಿ ಕುದ್ರೋಳಿಯಲ್ಲೂ ನಡೆಸಬೇಕು. ಈ ಮೂಲಕ ಇಲ್ಲೂ ಶ್ರೀಗುರುಗಳ ಪೂರ್ಣ ಅಧ್ಯಯನ ಆಗಬೇಕು’ ಎಂದು ಕೇರಳ ವರ್ಕಳ ಶಿವಗಿರಿ ಮಠಾಧಿಪತಿ ಬ್ರಹ್ಮಶ್ರೀ ಸಚ್ಚಿದಾನಂದ ಸ್ವಾಮೀಜಿ ಹೇಳಿದರು.

ಮಂಗಳೂರಿನ ಬ್ರಹ್ಮಶ್ರೀ ನಾರಾಯಣ ಗುರು ವೈದಿಕ ಪ್ರತಿಷ್ಠಾನದ ವತಿಯಿಂದ ಭಾನುವಾರ ಕುದ್ರೋಳಿಯಲ್ಲಿ ನಡೆದ ಶ್ರೀ ನಾರಾಯಣ ಗುರುಗಳ ಕೃತಿ ‘ಆತ್ಮೋಪದೇಶ ಶತಕಂ’ನ ಕನ್ನಡ ಅನುವಾದ ‘ಶ್ರೀ ಗುರು ಸದ್ದರ್ಶನ’ ಕೃತಿ ಬಿಡುಗಡೆ ಮತ್ತು ಗುರು ವಂದನೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಕೇರಳದ ವರ್ಕಳದ ಶಿವಗಿರಿ ಮಠದಲ್ಲಿ ನಾರಾಯಣ ಗುರುಗಳ ಕುರಿತು ಶಾಸ್ತ್ರೋಕ್ತ ಅಧ್ಯಯನಕ್ಕಾಗಿಯೇ ಅಭಿಯಾನ ಕೈಗೊಳ್ಳಲಾಗಿದೆ. ಇದರಲ್ಲಿ ಸುಮಾರು 100 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಜಗದ್ಗುರುಗಳ ಪರಂಪರೆಯಲ್ಲಿ ಗುರುಗಳು ಆಧುನಿಕ ಭಾರತದ ವಿಶ್ವಗುರುಗಳಾಗಿ ಕಾಣಿಸಿಕೊಂಡಿದ್ದಾರೆ. ಗುರುಗಳ ಕೃತಿಗಳಲ್ಲಿ ಅವರ ನೇರ ಸ್ವರೂಪದ ದರ್ಶನ ಕಾಣಿಸಿಕೊಂಡಿದೆ ಎಂದು ಹೇಳಿದರು.

ADVERTISEMENT

ಗುರುಗಳ ಕೃತಿಗಳಲ್ಲಿ ನಾಲ್ಕು ವೇದಗಳ ಜತೆಯಲ್ಲಿ ವೇದಾಂತಗಳ ಹೂರಣ, ನಿಜವಾದ ದರ್ಶನ ಸಾರವಿದೆ. ಗುರು ಎಂದಿಗೂ ಪ್ರತ್ಯಕ್ಷ ದೇವರು. ಅವರ ಅನುಗ್ರಹ ಪೂರ್ಣವಾಗದೆ ದೇವರೂ ಕೈ ಹಿಡಿಯಲಾರ. ಗುರು ಪ್ರಸಾದ ಪಡೆದುಕೊಂಡವರೇ ಪುಣ್ಯವಂತರು. ಗುರುವಿನಲ್ಲಿ ಸಕಲ ದೇವರು ಇರುತ್ತಾರೆ ಎಂದರು.

‘ಶ್ರೀಗುರು ಸದ್ದರ್ಶನ’ ಕೃತಿಯನ್ನು ಮುಖಂಡ ಬಿ. ಜನಾರ್ದನ ಪೂಜಾರಿ ಬಿಡುಗಡೆ ಮಾಡಿದರು. ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಎಚ್.ಎಸ್. ಜೈರಾಜ್‌ ಕಾರ್ಯಕ್ರಮ ಉದ್ಘಾಟಿಸಿದರು.

ವೈದಿಕ ಪ್ರಶಸ್ತಿ ಪ್ರದಾನ: ಬ್ರಹ್ಮಶ್ರೀ ನಾರಾಯಣ ಗುರು ವೈದಿಕ ಪ್ರತಿಷ್ಠಾನದ ವತಿಯಿಂದ ಎಂಟು ಮಂದಿಗೆ ‘ಪಟ್ಲಕೆರೆ ಶ್ರೀನಾರಾಯಣ ಶಾಂತಿ ವೈದಿಕ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ತುಮಕೂರು ಸಿದ್ಧಗಂಗಾ ಮಠದ ವೇದ ಸಂಸ್ಕೃತ ಮಹಾವಿದ್ಯಾಲಯದ ಉಪನ್ಯಾಸಕ ಪ್ರಶಾಂತ್ ಭಟ್, ಸುಳ್ಯದ ಶ್ರೀಕೇಶವ ಕೃಪಾ ವೇದ ಹಾಗೂ ಕಲಾ ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ್ ಭಟ್, ಮಂಗಳೂರಿನ ವೈದಿಕ ವಿದ್ವಾಂಸ ಉಮೇಶ್ ಶರ್ಮಾ, ಕಂಕನಾಡಿ ಶ್ರೀಬ್ರಹ್ಮಬೈದರ್ಕಳ ಗರಡಿಯ ಕ್ಷೇತ್ರದ ವಾಸುದೇವ ಶಾಂತಿ, ಉಡುಪಿ ವೈದಿಕ ವಿದ್ವಾಂಸ ಕೇಶವ ಶಾಂತಿ ಬನ್ನಂಜೆ, ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದ ಪ್ರಧಾನ ಆರ್ಚಕ ಲಕ್ಷ್ಮಣ ಶಾಂತಿ, ಮೂಡುಬಿದಿರೆ ಆಚಾರ್ಯ ಜಗದ್ಗುರು ಅಯ್ಯಸ್ವಾಮಿ ಮಠದ ಬಿ. ವಿಶ್ವನಾಥ ಪುರೋಹಿತ, ಕಂಕನಾಡಿ ಶ್ರೀಬ್ರಹ್ಮಬೈದರ್ಕಳ ಗರಡಿಯ ಕ್ಷೇತ್ರದ ಪೂವಪ್ಪ ಶಾಂತಿ ಪ್ರಶಸ್ತಿ ಸ್ವೀಕರಿಸಿದರು.

ಕೇರಳ ವರ್ಕಳ ಶಿವಗಿರಿ ಮಠದ ಸತ್ಯಾನಂದ ಸ್ವಾಮೀಜಿ, ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್‌ ಆರ್. ಪೂಜಾರಿ, ಕಟಪಾಡಿ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಬಿ.ಎನ್. ಶಂಕರ ಪೂಜಾರಿ, ಕಂಕನಾಡಿ ಗರಡಿ ಬ್ರಹ್ಮಬೈದರ್ಕಳ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್, ಲೇಖಕಿ ಮೀನಾಕ್ಷಿ ರಾಮಚಂದ್ರ, ಭಾರತ್ ಬ್ಯಾಂಕ್ ಅಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ, ನಾರಾಯಣ ಗುರು ವಿಚಾರ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಸತ್ಯಜಿತ್ ಸುರತ್ಕಲ್‌, ಗೋಕರ್ಣನಾಥ ಕೊ–ಆಪರೇಟಿವ್‌ ಬ್ಯಾಂಕ್‍ ಅಧ್ಯಕ್ಷ ಚಂದ್ರಶೇಖರ್ ಕುಮಾರ್, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್, ಶ್ರೀಗುರು ಚಾರಿಟಬಲ್‌ ಟ್ರಸ್ಟ್‌ನ ಚಂದ್ರಶೇಖರ್, ಯುವವಾಹಿನಿ ಕೇಂದ್ರ ಸಮಿತಿಯ ಅಶೋಕ್ ಪಡ್ಪು, ಪ್ರಮುಖರಾದ ಶಶಿಧರ ಬಂಗೇರ ಪಟ್ಲಕೆರೆ, ಚಂದ್ರಶೇಖರ ಕರ್ಕೇರ, ಲೀಲಾಕ್ಷ ಕರ್ಕೇರ ಭಾಗವಹಿಸಿದ್ದರು.

ನಾರಾಯಣ ಗುರು ವೈದಿಕ ಪ್ರತಿಷ್ಠಾನ ಅಧ್ಯಕ್ಷ ಲೋಕೇಶ್ ಶಾಂತಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮಹೇಶ್ ಶಾಂತಿ ಹೆಜಮಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ದಿನೇಶ್ ರಾಯಿ ನಿರೂಪಿಸಿದರು.

ಶ್ರದ್ಧಾ ವಿದ್ಯಾ ಕೇಂದ್ರಗಳಿಂದ ಅಪರಿಮಿತ ಸಾಧನೆ

ಗುರುವಂದನೆ ಸ್ವೀಕರಿಸಿದ ಕನ್ಯಾಡಿ ಶ್ರೀರಾಮಕ್ಷೇತ್ರ ಮಹಾಸಂಸ್ಥಾನದ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಮಾತನಾಡಿ ನಾವು ಧರ್ಮದ ಅಂತರಾಳಕ್ಕೆ ಹೋಗಬೇಕು. ಹೋಗದೆ ಇರುವುದರಿಂದ ದುಃಖದಲ್ಲಿದ್ದೇವೆ. ಆತ್ಮನನ್ನು ಚೆನ್ನಾಗಿ ಅರಿತಾಗ ದುಃಖ ಇರುವುದಿಲ್ಲ. ಆತ್ಮದ ಉಪದೇಶಕ್ಕಾಗಿ ಸದ್ದರ್ಶನ ಗ್ರಂಥ ಬಿಡುಗಡೆ ಆಗಿದೆ ಎಂದರು. ಧರ್ಮದ ಜಾಗೃತಿ ಬಂದಾಗ ಮಾನವನ ಜಾಗೃತಿ ಆಗುತ್ತದೆ. ಸಮಾಜದ ಸದೃಢತೆಗೂ ಆಧ್ಯಾತ್ಮಿಕ ಶಕ್ತಿಬೇಕು. ಉದಯೋನ್ಮುಖ ನಾಯಕರಿಗೆ ಶಕ್ತಿ ತುಂಬಬೇಕು. ಆಧ್ಯಾತ್ಮಿಕ ಕ್ಷೇತ್ರದಲ್ಲಿ ಬೆಳೆಯಬೇಕು. ಇದಕ್ಕೆ ಗುಣತ್ರಗಳ ಅವಶ್ಯಕತೆ ಇದೆ. ಭಯಮುಕ್ತರಾಗಬೇಕು. ಶ್ರದ್ಧಾ ವಿದ್ಯಾ ಕೇಂದ್ರಗಳಿಂದ ಅಪರಿಮಿತ ಸಾಧನೆ ಮಾಡಬಹುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.