ADVERTISEMENT

ಭಾರತೀಯ ನೋಟದ ಇತಿಹಾಸದ ವಿಶ್ಲೇಷಣೆಯಾಗಲಿ: ಮೀನಾಕ್ಷಿ ಜೈನ್

ಮಂಗಳೂರು ಲಿಟ್ ಫೆಸ್ಟ್‌ ಪ್ರಶಸ್ತಿ ಸ್ವೀಕರಿಸಿದ ಇತಿಹಾಸ ತಜ್ಞೆ ಮೀನಾಕ್ಷಿ ಜೈನ್ ಅಭಿಮತ

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 19:44 IST
Last Updated 10 ಜನವರಿ 2026, 19:44 IST
‘ಮಂಗಳೂರು ಲಿಟ್ ಫೆಸ್ಟ್‌’ನಲ್ಲಿ ಇತಿಹಾಸ ತಜ್ಞೆ ಮಿನಾಕ್ಷಿ ಜೈನ್ ಅವರಿಗೆ ಮಂಗಳೂರು ಲಿಟ್ ಫೆಸ್ಟ್‌ ಪ್ರಶಸ್ತಿ ನೀಡಿ ಗೌರವಿಸಲಾಯಿತು. –ಪ್ರಜಾವಾಣಿ ಚಿತ್ರ
‘ಮಂಗಳೂರು ಲಿಟ್ ಫೆಸ್ಟ್‌’ನಲ್ಲಿ ಇತಿಹಾಸ ತಜ್ಞೆ ಮಿನಾಕ್ಷಿ ಜೈನ್ ಅವರಿಗೆ ಮಂಗಳೂರು ಲಿಟ್ ಫೆಸ್ಟ್‌ ಪ್ರಶಸ್ತಿ ನೀಡಿ ಗೌರವಿಸಲಾಯಿತು. –ಪ್ರಜಾವಾಣಿ ಚಿತ್ರ   

ಮಂಗಳೂರು: ‘ದೇಶದ ಇತಿಹಾಸವನ್ನು ಭಾರತೀಯ ಸೈದ್ಧಾಂತಿಕ ನೆಲೆಯಲ್ಲಿ ವಿಶ್ಲೇಷಿಸಿದಾಗ, ಇಲ್ಲಿನ ಶ್ರೀಮಂತ ಸಂಸ್ಕೃತಿಯನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಇತಿಹಾಸ ತಜ್ಞೆ, ರಾಜ್ಯಸಭಾ ಸದಸ್ಯೆ ಮೀನಾಕ್ಷಿ ಜೈನ್ ಶನಿವಾರ ಇಲ್ಲಿ ಅಭಿಪ್ರಾಯಪಟ್ಟರು.

ಭಾರತ ಫೌಂಡೇಷನ್ ಆಶ್ರಯದಲ್ಲಿ ಆರಂಭವಾದ ಎಂಟನೇ ಆವೃತ್ತಿಯ ‘ಮಂಗಳೂರು ಲಿಟ್ ಫೆಸ್ಟ್‌’ ಉದ್ಘಾಟನಾ ಸಮಾರಂಭದಲ್ಲಿ ‘ಮಂಗಳೂರು ಲಿಟ್ ಫೆಸ್ಟ್‌ ಪ್ರಶಸ್ತಿ’ಯನ್ನು ಸ್ವೀಕರಿಸಿ, ಬಳಿಕ ‘ಭಾರತೀಯ ನಾಗರಿಕತೆ; ಪರಂಪರೆಯ ಮರುಕೊಂಡಿ’ ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡಿದರು. 

ಆರಾಧನೆ, ಆಚರಣೆಗಳು ಜನಜೀವನದಲ್ಲಿ ಹಾಸುಹೊಕ್ಕಿರುವ ಪರಿಣಾಮವಾಗಿ, ಉಳಿದೆಲ್ಲ ನಾಗರಿಕತೆಗಳು ಅಳಿದರೂ ಜನರಿಂದ ರಕ್ಷಣೆಯಾದ ಸಿಂಧೂ ನಾಗರಿಕತೆ ಅಜರಾಮರವಾಗಿದೆ ಎಂದರು.

ADVERTISEMENT

ಹಿಂದೂ, ಜೈನ, ಬೌದ್ಧ ಧರ್ಮಗಳು ಪರಸ್ಪರ ಕಚ್ಚಾಡಿಕೊಳ್ಳುತ್ತಿದ್ದವು ಎಂದು ಇತಿಹಾಸ ಪಠ್ಯದಲ್ಲಿ ಬಿಂಬಿಸಿದ್ದನ್ನೇ ಓದಿಕೊಂಡು ಬಂದಿದ್ದೇವೆ. ಆದರೆ, ಈ ಧರ್ಮಗಳು ಅನ್ಯೋನ್ಯವಾಗಿದ್ದವು ಎಂಬುದನ್ನು ಉದಯಗಿರಿ ಗುಹೆಗಳು, ಅಜಂತಾ, ಎಲ್ಲೋರಾ, ಖಜುರಾಹೊ ದೇವಾಲಯಗಳು ಸಾಕ್ಷೀಕರಿಸುತ್ತವೆ. ಗುಪ್ತ ರಾಜವಂಶದ ಚಂದ್ರಗುಪ್ತ ಮೌರ್ಯ ಉದಯಗಿರಿಯ ಗುಹೆ ನಿರ್ಮಾಣ ಮಾಡಿದರೆ, ಮಂತ್ರಿಯೊಬ್ಬ ಶೈವಾರಾಧನೆಯ ಗುಹೆ ನಿರ್ಮಾಣ ಮಾಡಿದ್ದಾನೆ. ಪಾಶ್ಚಾತ್ಯ ದೃಷ್ಟಿಕೋನವನ್ನು ದೂರೀಕರಿಸಿ, ಭಾರತೀಯ ದೃಷ್ಟಿಯಲ್ಲಿ ಇತಿಹಾಸದ ವಿಶ್ಲೇಷಣೆ ಮಾಡಿದಾಗ ನೈಜ ಇತಿಹಾಸದ ಅರಿವು ಬೆಳಗುತ್ತದೆ ಎಂದರು.

ಕಾಶಿ ಜಾಗದ ವಿಚಾರ ಉಲ್ಲೇಖಿಸಿದ ಅವರು, ಕಾಶಿಗೆ 12ನೇ ಶತಮಾನಕ್ಕಿಂತಲೂ ಪೂರ್ವದ ಇತಿಹಾಸವಿದೆ ಎಂಬುದಕ್ಕೆ ಪುರಾವೆಗಳಿವೆ. 1936ರಲ್ಲಿ ವ್ಯಕ್ತಿಯೊಬ್ಬರು ಅದು ವಕ್ಫ್‌ಗೆ ಸೇರಿದ ಜಾಗವೆಂದು ದಾವೆ ಹೂಡಿದರು. ಬ್ರಿಟಿಷರ ಆಡಳಿತದಲ್ಲೇ ಅದರ ತನಿಖೆ ನಡೆಸಲಾಯಿತು. ಅಲ್ಲಿನ 35 ನಿವಾಸಿಗಳನ್ನು ಮಾತನಾಡಿಸಿ ಮಾಹಿತಿ ಸಂಗ್ರಹಿಸಲಾಯಿತು. ಸುಮಾರು ನಾಲ್ಕು ಸಾವಿರ ಪುಟಗಳಷ್ಟು ವರದಿಯನ್ನು ಸಲ್ಲಿಸಲಾಗಿದೆ ಎನ್ನುತ್ತ, ಅಯೋಧ್ಯೆ, ಮಥುರಾ, ಕಾಶಿ ಬಗ್ಗೆ ನಡೆಸಿರುವ ಅಧ್ಯಯನವನ್ನು ಉಲ್ಲೇಖಿಸಿದರು. 

‘ಮಥುರಾ 1947ರ ಪೂರ್ವದವರೆಗೂ ಅದು ಕೃಷ್ಣ ಜನ್ಮಭೂಮಿಯಾಗಿತ್ತು. ಕೃಷ್ಣ ಜನ್ಮಭೂಮಿ ಟ್ರಸ್ಟ್‌ನ  ಹೋರಾಟಗಳ ನಡುವೆಯೂ 13.37 ಎಕರೆ ಭೂಮಿಯಲ್ಲಿ 3 ಎಕರೆಯನ್ನು 1968ರಲ್ಲಿ ಅಧಿಕಾರದಲ್ಲಿದ್ದ ಸರ್ಕಾರ ಈದ್ಗಾಕ್ಕೆ ಹಸ್ತಾಂತರಿಸಿದೆ. ಕಾನೂನಾತ್ಮಕವಾಗಿ ಈ ಭೂಮಿ ಹಸ್ತಾಂತರಿಸಿದ್ದರಿಂದ ಇದನ್ನು ವಾಪಸ್ ಪಡೆಯುವುದು ಸುಲಭವಾಗಲಾರದು’ ಎಂದು ಪ್ರೇಕ್ಷಕರೊಬ್ಬರ ಪ್ರಶ್ನೆಗೆ ಉತ್ತರಿಸಿದರು. 

ಶತಾವಧಾನಿ ಆರ್. ಗಣೇಶ್ ಅವರು ಸಾಹಿತ್ಯ ಹಬ್ಬವನ್ನು ಉದ್ಘಾಟಿಸಿದರು. ಮಿಥಿಕ್ ಸೊಸೈಟಿ ಗೌರವ ಕಾರ್ಯದರ್ಶಿ ರವಿ ಎಸ್, ಸಂಸದ ಕ್ಯಾ. ಬ್ರಿಜೇಶ್ ಚೌಟ ಉಪಸ್ಥಿತರಿದ್ದರು.

‘ಆಂತರಿಕ ಭದ್ರತೆ’ಯ ಪ್ರಜ್ಞೆ ಮುಖ್ಯ

ಶತ್ರುಗಳನ್ನು ಹಣಿಯಲು ಮತ್ತು ದೇಶದ ಆಂತರಿಕ ಭದ್ರತೆಯನ್ನು ಗಟ್ಟಿಗೊಳಿಸಲು ವಿರೋಧ ಪಕ್ಷದಲ್ಲಿ ಪ್ರಜ್ಞಾವಂತಿಕೆ ಮತ್ತು ಸದ್ವಿಚಾರ ಇರಬೇಕು ಎಂದು ರಾ (ರೀಸರ್ಚ್‌ ಅ್ಯಂಡ್ ಅನಾಲಿಸಿಸ್‌ ವಿಂಗ್‌) ಮಾಜಿ ಮುಖ್ಯಸ್ಥ ವಿಕ್ರಂ ಸೂದ್ ಅಭಿಪ್ರಾಯಪಟ್ಟರು. ‘ಪಾಶ್ಚಿಮಾತ್ಯ ರಾಷ್ಟ್ರಗಳ ಕುಗ್ಗುವಿಕೆ ಮತ್ತು ಪೂರ್ವದೇಶಗಳ ಉತ್ಥಾನದಲ್ಲಿ ಬಲಪ್ರದರ್ಶನ’ ಎಂಬ ಗೋಷ್ಠಿಯಲ್ಲಿ ಮಾತನಾಡಿದ ಅವರು ‘ವಿರೋಧಪಕ್ಷಗಳ ಪ್ರತಿರೋಧ ಸಹಜ. ಆದರೆ ಹೊರಗೆ ಅಖಂಡವಾಗಿರಬೇಕು. ಇಲ್ಲವಾದರೆ ಶತ್ರುರಾಷ್ಟ್ರಗಳು ಒಳಜಗಳದ ಲಾಭ ಪಡೆದುಕೊಳ್ಳಲು ಪ್ರಯತ್ನಿಸುತ್ತವೆ’ ಎಂದರು.  ದೇಶದಲ್ಲಿ ಒಳರಾಜಕೀಯ ಇರುವುದು ಹೊರಗೆ ಗೊತ್ತಾದರೆ ಯಾರೂ ಗೌರವಿಸುವುದಿಲ್ಲ. ಆಂತರಿಕವಾಗಿ ಬಲಿಷ್ಠವಾಗಿರುವ ದೇಶವನ್ನು ಯಾವ ದೇಶವೂ ಕೆಣಕುವುದಿಲ್ಲ. ಅಗತ್ಯವಿದ್ದಾಗ ನುಗ್ಗಿ ಹೊಡೆಯುವ ಛಲ ಇರಬೇಕು. ಭಾರತದಲ್ಲಿ ಸದ್ಯ ಅಂಥ ಪೂರಕ ಮನಸ್ಥಿತಿ ಇದೆ ಎಂದು ಅವರು ಹೇಳಿದರು.  ವಿದೇಶಾಂಗ ವ್ಯವಹಾರಗಳ ತಜ್ಞೆ ಶ್ರೀಪರ್ಣ ಪಾಠಕ್ ಗೋಷ್ಠಿ ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.