ADVERTISEMENT

ಸೇವೆ, ತ್ಯಾಗದ ಮೂಲಕ ಸಮಾಜಕ್ಕಾಗಿ ಬದುಕಿ: ಡಾ.ಪ್ರಭಾಕರ ಭಟ್ ಕಲ್ಲಡ್ಕ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2025, 14:04 IST
Last Updated 10 ಫೆಬ್ರುವರಿ 2025, 14:04 IST
ಪಜೀರು ಗ್ರಾಮದ ತದ್ಮ ಎಂಬಲ್ಲಿ ಸಂತೋಷ್ ಬೋಳಿಯಾರ್ ಅವರು ನಿರ್ಮಿಸಿಕೊಟ್ಟ ಮನೆಯ ಕೀಲಿ ಕೈಯನ್ನು ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಅವರು ದೇವಕಿ, ಕುಟುಂಬಿಕರಿಗೆ ಹಸ್ತಾಂತರಿಸಿದರು
ಪಜೀರು ಗ್ರಾಮದ ತದ್ಮ ಎಂಬಲ್ಲಿ ಸಂತೋಷ್ ಬೋಳಿಯಾರ್ ಅವರು ನಿರ್ಮಿಸಿಕೊಟ್ಟ ಮನೆಯ ಕೀಲಿ ಕೈಯನ್ನು ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಅವರು ದೇವಕಿ, ಕುಟುಂಬಿಕರಿಗೆ ಹಸ್ತಾಂತರಿಸಿದರು   

ಉಳ್ಳಾಲ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿರುವ ಸಂತೋಷ್ ಬೋಳಿಯಾರ್ ಅವರು ದೇವಕಿ ಮುಗೇರ ಅವರಿಗೆ ಮನೆ ನಿರ್ಮಿಸಿ ಸಂಘದ ಪ್ರೇರಣೆ, ಚಿಂತನೆಯಂತೆ ಸಮಾಜಕ್ಕೆ ಮಾದರಿಯಾಗುವ ಸಾರ್ಥಕ ಕಾರ್ಯ ಮಾಡಿದ್ದಾರೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.

ಬಿಜೆಪಿ ಮುಖಂಡ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರು ಬಡ ಮಹಿಳೆ ದೇವಕಿ ಮುಗೇರ ಅವರಿಗೆ ಗ್ರಾಮವಿಕಾಸ ಸಮಿತಿ ಪಜೀರು ಸಂಘದ ಶತಾಬ್ದಿ ನಿಮಿತ್ತ ಉಳ್ಳಾಲ ತಾಲ್ಲೂಕಿನ ಪಜೀರು ಗ್ರಾಮದ ತದ್ಮ ಎಂಬಲ್ಲಿ ನಿರ್ಮಿಸಿದ ‘ನಮೋ ಕುಟೀರ’ ನೂತನ ಮನೆಯ ಕೀಲಿ ಕೈಯನ್ನು ಸೋಮವಾರ ಹಸ್ತಾಂತರಿಸಿ ಅವರು ಮಾತನಾಡಿದರು.

ಸಮಾಜಕ್ಕಾಗಿ ಬದುಕಿದವರನ್ನು ಸಮಾಜವೇ ಗುರುತಿಸುತ್ತದೆ. ಅಶಕ್ತರಿಗೆ ಮನೆ ಕಟ್ಟಿಕೊಡುವ ಹೃದಯ ವೈಶಾಲ್ಯ ಹಿಂದೂ ಸಮಾಜದಲ್ಲಿಬೇಕು. ಹಿಂದೂ ಸಮಾಜವು ಜಗತ್ತಿಗೇ ಒಳಿತನ್ನು ಮಾಡಿದೆ. ತ್ಯಾಗ, ಸೇವೆಯೇ ಇಲ್ಲಿಯ ಮೂಲವಾಗಿದ್ದು, ಸಮಾಜದ ಸಂಕಷ್ಟಕ್ಕೆ ಜತೆಯಾಗಿ ಸ್ಪಂದಿಸೋಣ ಎಂದರು.

ADVERTISEMENT

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ್ಯದ ಪ್ರಾಂತ್ಯವಾಹಕ ಪ್ರಕಾಶ್ ಪಿ.ಎಸ್. ಮಾತನಾಡಿ, ಮನೆಯು ಮಕ್ಕಳಿಗೆ ಸಂಸ್ಕಾರವನ್ನು ನೀಡುವ ವಿದ್ಯಾಲಯಬೇಕು. ಭಕ್ತಿಯಿಂದ ದೇವರನ್ನು ಆರಾಧಿಸುವ ದೇವಾಲಯವಾಗಬೇಕು. ಜಾತಿ, ಭೇದವಿಲ್ಲದ ಹಿಂದೂ ಸಮಾಜದ ಎಲ್ಲರನ್ನೂ ಸ್ವಾಗತಿಸಿ ಆತಿಥ್ಯ ನೀಡುವ ಆಧಾರಾಲಯವಾಗಬೇಕು, ಮನೆ ಸೇವಾಲಯವಾಬೇಕು ಎಂದರು.

ಬಿಜೆಪಿ ಮುಖಂಡ ನಳಿನ್ ಕುಮಾರ್ ಕಟೀಲ್ ಮಾತನಾಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಚಾರವನ್ನು ಮೈಗೂಡಿಸಿಕೊಂಡು, ಸಾಮಾಜಿಕ ಚಿಂತನೆಯೊಂದಿಗೆ ಸಂತೋಷ್ ಕುಮಾರ್ ಬೋಳಿಯಾರ್ ಅವರು ಸಮಾಜದ ಸೇವೆ ಮಾಡಿದ್ದಾರೆ. ಇದು ಎಲ್ಲರಿಗೂ ಸ್ಫೂರ್ತಿಯಾಗಿದೆ ಎಂದರು.

ಶಾಸಕ ವೇದವ್ಯಾಸ ಕಾಮತ್, ಮುಗೇರ ಸಂಘದ ರಾಜ್ಯ ಘಟಕದ ಅಧ್ಯಕ್ಷ ನಂದರಾಜ್ ಸಂಕೇಶ್ವರ ಮಾತನಾಡಿದರು.

ಶಾಸಕರಾದ ಭಾಗೀರಥಿ ಮುರುಳ್ಯ, ಪ್ರತಾಪ್ ಸಿಂಹ ನಾಯಕ್, ಕಿಶೋರ್ ಕುಮಾರ್ ಪುತ್ತೂರು, ಕೈರಂಗಳ ಶಾರದಾ ಗಣಪತಿ ವಿದ್ಯಾಕೇಂದ್ರದ ಸಂಚಾಲಕ ಟಿ.ಜಿ.ರಾಜಾರಾಂ ಭಟ್, ಕಣಂತೂರು ಕ್ಷೇತ್ರದ ಗಡಿಕಾರರಾದ ನಾರ್ಯಗುತ್ತು ಪದ್ಮನಾಭ ರೈ ಯಾನೆ ಮಂಜು ಭಂಡಾರಿ, ಮುಗೇರ ಸಂಘದ ಪುತ್ತೂರು ತಾಲ್ಲೂಕು ಘಟಕದ ಅಧ್ಯಕ್ಷ ಸುಂದರ, ಉಳ್ಳಾಲ ತಾಲ್ಲೂಕು ಘಟಕದ ಅಧ್ಯಕ್ಷ ನಾಗೇಶ್ ಉಳ್ಳಾಲ್, ಹಿರಿಯರಾದ ಸೇಸಪ್ಪ ಟೈಲರ್, ಮಂಗಳೂರು ತಾಲ್ಲೂಕು ಮುಗೇರ ಸಂಘದ ಅಧ್ಯಕ್ಷ ಸೀತಾರಾಮ ಕೊಂಚಾಡಿ, ಸುಳ್ಯ ನಗರ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ, ದೇವಕಿ ಭಾಗವಹಿಸಿದ್ದರು.

ಗುತ್ತಿಗೆದಾರ ಜಯರಾಮ ಶೆಟ್ಟಿ ಕಂಬಳಪದವು ಅವರನ್ನು ಗೌರವಿಸಲಾಯಿತು.

ಸಂತೋಷ್ ಕುಮಾರ್ ಬೋಳಿಯಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ‘ಅಂದು ಮನೆಗೆ ಬಂದು ಕಷ್ಟವನ್ನು ಹೇಳಿ ಕಣ್ಣೀರು ಹಾಕಿದ್ದ ದೇವಕಿ ಅವರ ಕಣ್ಣಲ್ಲಿ ಇಂದು ಸಂತಸ ಕಾಣುತ್ತಿದೆ. ಇದು ಜೀವನದ ಸಾರ್ಥಕತೆಯ ಕ್ಷಣ’ ಎಂದರು.

ರವಿ ರೈ ಪಜೀರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.