ADVERTISEMENT

ಕೌಡಿಚ್ಚಾರು: ಹೆದ್ದಾರಿ ಬದಿ ಕಸ ಸುರಿದ ಲಾರಿ ಮಾಲೀಕನಿಗೆ ದಂಡ 

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 5:03 IST
Last Updated 14 ಸೆಪ್ಟೆಂಬರ್ 2025, 5:03 IST
ಪುತ್ತೂರು ತಾಲ್ಲೂಕಿನ ಕೌಡಿಚ್ಚಾರಿನ ಪಲ್ಲಮದಕ ಅಮೃತ ಸರೋವರ ಕೆರೆಯ ಬಳಿ ಹೆದ್ದಾರಿ ಬದಿಯಲ್ಲಿ ಸುರಿದು ಹೋದ ಕಸದ ಮೂಟೆಗಳನ್ನು ಅರಿಯಡ್ಕ ಗ್ರಾ.ಪಂ.ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ ಮತ್ತು ಕಾರ್ಯದರ್ಶಿ ವಿದ್ಯಾಧರ್ ಅವರು ಪರಿಶೀಲನೆ ಮಾಡಿದರು
ಪುತ್ತೂರು ತಾಲ್ಲೂಕಿನ ಕೌಡಿಚ್ಚಾರಿನ ಪಲ್ಲಮದಕ ಅಮೃತ ಸರೋವರ ಕೆರೆಯ ಬಳಿ ಹೆದ್ದಾರಿ ಬದಿಯಲ್ಲಿ ಸುರಿದು ಹೋದ ಕಸದ ಮೂಟೆಗಳನ್ನು ಅರಿಯಡ್ಕ ಗ್ರಾ.ಪಂ.ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ ಮತ್ತು ಕಾರ್ಯದರ್ಶಿ ವಿದ್ಯಾಧರ್ ಅವರು ಪರಿಶೀಲನೆ ಮಾಡಿದರು   

ಪುತ್ತೂರು: ತಾಲ್ಲೂಕಿನ ಅರಿಯಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೌಡಿಚ್ಚಾರು ಸಮೀಪದ ಪಲ್ಲಮದಕ ಅಮೃತ ಸರೋವರ ಕೆರೆಯ ಬಳಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಕೊಳೆತ ದ್ರಾಕ್ಷಿಯ ಕಸದಮೂಟೆಗಳನ್ನು ಎಸೆದು ಹೋದ ಲಾರಿಯನ್ನು ಪತ್ತೆ ಮಾಡಿರುವ  ಪಂಚಾಯಿತಿಯು, ಲಾರಿಯ ಮಾಲೀಕನಿಗೆ ದಂಡ ವಿಧಿಸಿ, ಕಸವನ್ನು ಅವರಿಂದಲೇ ವಿಲೇವಾರಿ ಮಾಡಿಸಿದೆ.

ಮೈಸೂರಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ದ್ರಾಕ್ಷಿ ಸಾಗಣೆಯ ಲಾರಿಯಲ್ಲಿದ್ದವರು ಕೌಡಿಚ್ಚಾರು ಸಮೀಪದ ಪಲ್ಲಮದಕ ಅಮೃತಸರೋವರ ಕೆರೆಯ ಬಳಿ ಹೆದ್ದಾರಿ ಬದಿಯಲ್ಲಿ ದಾಕ್ಷಿ ಕಸ ತುಂಬಿದ ಗೋಣಿ ಚೀಲಗಳನ್ನು ಮಂಗಳವಾರ ಸುರಿದು ಹೋಗಿದ್ದರು. ಲಾರಿಯಲ್ಲಿದ್ದ ತ್ಯಾಜ್ಯವನ್ನು ರಸ್ತೆ ಬದಿಗೆ ತಂದು ಸುರಿಯುವುದನ್ನು ಕಂಡಿದ್ದ ಸ್ಥಳೀಯರಾದ ಮಡ್ಯಂಗಳದ ಸತ್ಯವತಿ ಎಂಬುವರು ಲಾರಿಯ ನಂಬರ್‌ ನೋಟ್ ಮಾಡಿ ಪಂಚಾಯಿತಿಗೆ ಮಾಹಿತಿ ನೀಡಿದ್ದರು.

ಕಸ ಎಸೆದು ಹೋದವರ ಪತ್ತೆ ಕಾರ್ಯಾಚರಣೆಗಿಳಿದ ಅರಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಕಾರ್ಯದರ್ಶಿ ವಿದ್ಯಾಧರ್ ಅವರನ್ನು ಒಳಗೊಂಡ ತಂಡವು, ಲಾರಿಯ ನಂಬರ್‌ ಅನ್ನು ಸಂಪ್ಯ ಪೊಲೀಸರಿಗೆ ನೀಡಿ, ಪೊಲೀಸರ ಸಹಾಯದಿಂದ ಲಾರಿ ಮಾಲೀಕನನ್ನು ಪತ್ತೆ ಮಾಡಿ ವಿಚಾರಿಸಿದಾಗ ಅವರು, ತಾನು `ಸ್ವಚ್ಛ ಭಾರತ್' ಪರ ಇರುವವನು, ಲಾರಿಯ ಚಾಲಕ ಮತ್ತು ಕೆಲಸಗಾರರು ತನ್ನ ಅರಿವಿಗೆ ಬಾರದೆ ಈ ರೀತಿ ಮಾಡುವುದು ತಪ್ಪಾಗಿದೆ ಎಂದು ಒಪ‍್ಪಿಕೊಂಡಿದ್ದಾರೆ. ಅಲ್ಲದೇ ಪಂಚಾಯಿತಿ ವತಿಯಿಂದ ವಿಧಿಸಿದ್ದ ₹5 ಸಾವಿರ ದಂಡವನ್ನು ಪಾವತಿಸಿದ್ದಾರೆ. ಶುಕ್ರವಾರ ಜನ ಕಳುಹಿಸಿ ಸುರಿಯಲಾದ ಕಸವನ್ನು ತೆರವುಗೊಳಿಸಿದ್ದಾರೆ.

ADVERTISEMENT

ಅಮೃತ ಸರೋಪರ ಕೆರೆಯ ಸಮೀಪವೇ ಇನ್ನೊಂದು ಕಡೆ ಯಾರೊ ಏಫೆಲ್ ಹಣ್ಣುಗಳ ಫ್ಯಾಕಿಂಗ್ ಕಸವನ್ನು ಸುರಿದು ಹೋಗಿದ್ದಾರೆ. ಅಲ್ಲಿ ತ್ಯಾಜ್ಯ ಸುರಿದವರ ಪತ್ತೆ ಹಚ್ಚುವ ಕೆಲಸ ಮಾಡಲಾಗುತ್ತಿದೆ ಎಂದು ಪಂಚಾಯಿತಿ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.