ಮಹೇಶ್ ಶೆಟ್ಟಿ ತಿಮರೋಡಿ
ಉಜಿರೆ (ದಕ್ಷಿಣ ಕನ್ನಡ): ಮಹೇಶ್ ಶೆಟ್ಟಿ ತಿಮರೋಡಿ ಅವರ ಗಡಿಪಾರು ಆದೇಶದ ವಿರುದ್ಧ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯು ಬೆಳ್ತಂಗಡಿಯಲ್ಲಿ ಇದೇ 29ರಂದು ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಗೆ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಅನುಮತಿ ನಿರಾಕರಿಸಿದ್ದಾರೆ.
ತಿಮರೋಡಿ ಅವರನ್ನು ರಾಯಚೂರು ಜಿಲ್ಲೆಗೆ ವರ್ಷದ ಮಟ್ಟಿಗೆ ಗಡಿಪಾರು ಮಾಡಿ ಪುತ್ತೂರು ಉಪ ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗಿಸ್ ಈಚೆಗೆ ಆದೇಶಿಸಿದ್ದರು. ಇದರ ವಿರುದ್ಧ ಪ್ರತಿಭಟನೆಗೆ ಅನುಮತಿ ಕೋರಿ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಅನಿಲ್ ಕುಮಾರ್, ತಹಶೀಲ್ದಾರ್‌ರಿಗೆ ಅರ್ಜಿ ಸಲ್ಲಿಸಿದ್ದರು.
‘ಅನುಮತಿ ನೀಡಿದರೆ, ಸಾರ್ವಜನಿಕ ಶಾಂತಿಗೆ ಭಂಗ ಆಗುವ ಸಾಧ್ಯತೆ ಇದೆ ಎಂದು ಪೊಲೀಸರು ವರದಿ ನೀಡಿದ್ದಾರೆ. ಹಾಗಾಗಿ ಅನುಮತಿ ನೀಡಲಾಗದು’ ಎಂದು ತಹಶೀಲ್ದಾರ್ ಹಿಂಬರಹ ನೀಡಿದ್ದಾರೆ.
ವಿಚಾರಣೆ ಮುಂದೂಡಿಕೆ: ಮನೆಯಲ್ಲಿ ಶಸ್ತ್ರಾಸ್ತ್ರ ಪತ್ತೆ ಪ್ರಕರಣದಲ್ಲಿ ತಿಮರೋಡಿ ಅವರಿಗೆ ನಿರೀಕ್ಷಣಾ ಜಾಮೀನು ಕೋರಿದ್ದ ಅರ್ಜಿ ವಿಚಾರಣೆಯನ್ನು ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಇದೇ 30ಕ್ಕೆ ಮುಂದೂಡಿದೆ ಎಂದು ವಕೀಲ ದಿನೇಶ್ ಹೆಗ್ಡೆ ಉಳೇಪಾಡಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.