ADVERTISEMENT

ಬೈಕಂಪಾಡಿಯಲ್ಲಿ ಮಾರುಕಟ್ಟೆ ಆರಂಭ

ಹಣ್ಣು, ತರಕಾರಿ ಸಗಟು ವ್ಯಾಪಾರ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2020, 16:02 IST
Last Updated 8 ಏಪ್ರಿಲ್ 2020, 16:02 IST
ಬೈಕಂಪಾಡಿಯ ಎಪಿಎಂಸಿ ಯಾರ್ಡ್‌ ಆವರಣದಲ್ಲಿ ಬುಧವಾರದಿಂದ ಕಾರ್ಯಾರಂಭ ಮಾಡಿರುವ ಮಂಗಳೂರಿನ ಹಣ್ಣು ಮತ್ತು ತರಕಾರಿ ಸಗಟು ಮಾರುಕಟ್ಟೆ
ಬೈಕಂಪಾಡಿಯ ಎಪಿಎಂಸಿ ಯಾರ್ಡ್‌ ಆವರಣದಲ್ಲಿ ಬುಧವಾರದಿಂದ ಕಾರ್ಯಾರಂಭ ಮಾಡಿರುವ ಮಂಗಳೂರಿನ ಹಣ್ಣು ಮತ್ತು ತರಕಾರಿ ಸಗಟು ಮಾರುಕಟ್ಟೆ   

ಮಂಗಳೂರು: ಈವರೆಗೂ ನಗರದ ಸೆಂಟ್ರಲ್‌ ಮಾರುಕಟ್ಟೆಯಲ್ಲಿ ನಡೆಯುತ್ತಿದ್ದ ಹಣ್ಣು ಮತ್ತು ತರಕಾರಿ ಸಗಟು ಮಾರಾಟ ಬುಧವಾರದಿಂದ ಬೈಕಂಪಾಡಿಯ ಕೃಷ್ಟಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಯಾರ್ಡ್‌ ಆವರಣಕ್ಕೆ ಸ್ಥಳಾಂತರ ವಾಗಿದೆ. ಮೊದಲ ದಿನವೇ ಹಲವು ವರ್ತಕರು ಅಲ್ಲಿ ವಹಿವಾಟು ನಡೆಸಿದರು.

ವಾರದ ಹಿಂದೆಯೇ ಮಾರುಕಟ್ಟೆಯ ಸ್ಥಳಾಂತರಕ್ಕೆ ಆದೇಶ ಹೊರಡಿಸಲಾಗಿತ್ತು. ಆದರೆ, ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳ ವಿರೋಧದಿಂದ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಈ ಕಾರಣದಿಂದ ಸೆಂಟ್ರಲ್‌ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಬಂದ್‌ ಮಾಡಿ ಮಂಗಳವಾರ ಆದೇಶ ಹೊರಡಿಸಲಾಗಿತ್ತು. ಬುಧವಾರ ಬೆಳಿಗ್ಗೆಯಿಂದಲೇ ಬೈಕಂಪಾಡಿ ಎಪಿಎಂಸಿ ಆವರಣದಲ್ಲಿ ಹೊಸ ಮಾರುಕಟ್ಟೆ ಕಾರ್ಯಾರಂಭ ಮಾಡಿತು.

ಹಣ್ಣು, ತರಕಾರಿ, ಈರುಳ್ಳಿ, ತೆಂಗಿನಕಾಯಿ ಮತ್ತಿತರ ಉತ್ಪನ್ನಗಳನ್ನು ತುಂಬಿದ ಹತ್ತಾರು ಲಾರಿಗಳು ಮಂಗಳವಾರ ಸಂಜೆಯೇ ಎಪಿಎಂಸಿ ಯಾರ್ಡ್‌ ಆವರಣ ತಲುಪಿದ್ದವು. ಬುಧವಾರ ಬೆಳಗ್ಗಿನ ಜಾವದಿಂದಲೇ ಮಾರುಕಟ್ಟೆಯಲ್ಲಿ ಚಟುವಟಿಕೆಗಳು ಆರಂಭವಾಗಿದ್ದವು.

ADVERTISEMENT

ಎಪಿಎಂಸಿ ಯಾರ್ಡ್‌ ಪ್ರವೇಶ ದ್ವಾರದ ಬಲ ಭಾಗದಲ್ಲಿ ತೆರೆದ ಶೆಡ್‌ ಮತ್ತು ಬಯಲು ಪ್ರದೇಶದಲ್ಲಿ ಹಣ್ಣು, ತರಕಾರಿ ಸಗಟು ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೇಡಿಕೆ ಆಧರಿಸಿ ಸಗಟು ವ್ಯಾಪಾರಿಗಳಿಗೆ ಸ್ಥಳ ಹಂಚಿಕೆ ಮಾಡಲಾಗಿದೆ. ಚಿಲ್ಲರೆ ವ್ಯಾಪಾರಿಗಳು ಅಲ್ಲಿಗೆ ಬಂದು ಖರೀದಿಸಿದರು.

‘ಸಗಟು ವ್ಯಾಪಾರಿಗಳಿಗೆ ನಿರ್ದಿಷ್ಟವಾಗಿ ಮಳಿಗೆಗಳನ್ನು ಹಂಚಿಕೆ ಮಾಡಿಲ್ಲ. ತಾತ್ಕಾಲಿಕವಾಗಿ ಖಾಲಿ ಜಾಗದಲ್ಲಿ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಎಪಿಎಂಸಿ ನಿರ್ಮಿಸಿರುವ ಮಳಿಗೆಗಳು ತುಂಬಾ ಹಳೆಯದಾಗಿವೆ. ದುರಸ್ತಿ ಬಳಿಕ ಮಳಿಗೆಗಳ ಹಂಚಿಕೆ ಕುರಿತು ಎಪಿಎಂಸಿ ಆಡಳಿತವೇ ಕ್ರಮ ಕೈಗೊಳ್ಳುತ್ತದೆ’ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪ್ರವೀಣ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.