ADVERTISEMENT

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ | ಆರೋಪಿಯ ದೇಹ ಸ್ಥಿತಿ ಇನ್ನೂ ಗಂಭೀರ

ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಆರೋಪಿಯ ಆರೋಗ್ಯ ಸ್ಥಿತಿ ಈಗಲೂ ಗಂಭೀರ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2022, 7:34 IST
Last Updated 22 ನವೆಂಬರ್ 2022, 7:34 IST
ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪಿ ಶಾರಿಕ್
ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪಿ ಶಾರಿಕ್   

ಮಂಗಳೂರು: 'ಇಲ್ಲಿನ ಗರೋಡಿಯಲ್ಲಿ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಆರೋಪಿಯ ಆರೋಗ್ಯ ಸ್ಥಿತಿ ಈಗಲೂ ಗಂಭೀರವಾಗಿಯೇ ಇದೆ. ಅವನು ಮಾತನಾಡುವ ಸ್ಥಿತಿಯಲ್ಲಿ ಇಲ್ಲ' ಎಂದು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದರು.

ಇಲ್ಲಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪಿ ಶಾರಿಕ್ ಹಾಗೂ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿಯವರನ್ನು ಮಂಗಳವಾರ ಭೇಟಿಯಾದ ಅವರು ಬಳಿಕ ಇಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು.

ಗರೋಡಿಯಲ್ಲಿ ಶನಿವಾರ ನಡೆದ ಕುಕ್ಕರ್ ಬಾಂಬ್ ಸ್ಪೋಟದಿಂದ ಆಟೊ ಚಾಲಕ ಪುರುಷೋತ್ತಮ ಅವರ ಎರಡೂ ಕೈಗಳಿಗೆ, ಬೆನ್ನಿಗೆ ಮುಖದಲ್ಲಿ ಗಾಯಗಳಾಗಿದ್ದವು. ಅವರ ದೇಹದಲ್ಲಿ ಶೇ 25 ರಷ್ಟು ಸುಟ್ಟ ಗಾಯಗಳಾಗಿದ್ದವು. ಆರೋಪಿ ಶಾರಿಕ್ ನ ಎರಡೂ ಕೈಗಳಲ್ಲಿ, ಬೆರಳುಗಳಲ್ಲಿ, ಎರಡೂ ಕಾಲುಗಳಲ್ಲಿ, ಮುಖದಲ್ಲಿ, ಬೆನ್ನಿನಲ್ಲಿ ಗಾಯಗಳಾಗಿದ್ದವು. ಆತನ ದೇಹದಲ್ಲಿ ಶೇ 45ರಷ್ಟು ಸುಟ್ಟ ಗಾಯಗಳಾಗಿತ್ತು.

ADVERTISEMENT

'ಆರೋಪಿ ಚಿಕಿತ್ಸೆಗೆ ದಾಖಲಾದ ದಿನದಿಂದ ಇಲ್ಲಿಯವರೆಗೆ ಆತನ ಆರೋಗ್ಯದಲ್ಲಿ ಎಷ್ಟು ಚೇತರಿಕೆ ಕಂಡು ಬಂದಿದೆ ಎನ್ನುವುದನ್ನು ಸದ್ಯ ಹೇಳಲಾಗದು. ಆತನ ಆರೋಗ್ಯ ಸುಧಾರಣೆಯ ಬಗ್ಗೆ ವಿಶೇಷ ನಿಗಾ ವಹಿಸಲಾಗಿದೆ' ಎಂದರು.'ಆರೋಪಿಯು ಸಂಪೂರ್ಣ ಚೇತರಿಸಿಕೊಂಡಿದ್ದಾನೆ ಎಂದು ವೈದ್ಯರು ಪ್ರಮಾಣ ಪತ್ರ ನೀಡಿದ ಬಳಿಕ ಆತನನ್ನು ವಶಕ್ಕೆ ಪಡೆದು ಮುಂದಿನ ವಿಚಾರಣೆ ನಡೆಸುತ್ತೇವೆ' ಎಂದರು.

ಈಶಾ ಫೌಂಡೇಷನ್ ಅನ್ನು ಗುರಿಯಾಗಿಸಿ ಕೊಯಮತ್ತೂರಿನಲ್ಲಿ ನಡೆದ ಸ್ಫೋಟಕ್ಕೂ ಆರೋಪಿಗೂ ನಂಟು ಇದೆಯೇ ಎಂಬ ಪ್ರಶ್ನೆಗೆ 'ನಾವು ಪ್ರಕರಣದ ಸಮಗ್ರ ತನಿಖೆಯನ್ನು ನಡೆಸುತ್ತೇವೆ. ಈ ಆಯಾಮದ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು' ಎಂದು ತಿಳಿಸಿದರು.

'ಆಟೋರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ನಡೆದ ಸ್ಥಳದ ಸಮೀಪದಲ್ಲಿರುವ ವೈನ್ ಶಾಪ್ ಗೆ ಇಬ್ಬರು ಯುವಕರು ಭೇಟಿ ನೀಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಆರೋಪಿಯ ಜೊತೆ ಇನ್ನೊಬ್ಬ ಇದ್ದ ಎಂದು ಸುದ್ದಿ ಹಬ್ಬಿಸಲಾಗುತ್ತಿದೆ. ಈ ವಿಡಿಯೊದಲ್ಲಿ ಇರುವುದು ಆರೋಪಿ ಅಲ್ಲ. ಅದರಲ್ಲಿ ಬಿಳಿ ಹಾಗೂ ನೀಲಿ ಅಂಗಿ ಧರಿಸಿದ್ದ ಇಬ್ಬರು ಯುವಕರು ರೈಲ್ವೆ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು. ಈ ವಿಡಿಯೊಗೂ ಘಟನೆಗೂ ಯಾವುದೇ ಸಂಬಂಧ ಇಲ್ಲ' ಎಂದು ಸ್ಪಷ್ಟಪಡಿಸಿದರು.

'ಯಾರು ಕೂಡಾ, ಪೊಲೀಸರು ದೃಢಪಡಿಸದ ಹೊರತು ವದಂತಿಗಳನ್ನು ಹಬ್ಬಿಸಬಾರದು' ಎಂದು ಅವರು ಕೋರಿದರು.

'ಘಟನೆಗೂ ಮುನ್ನ ಆರೋಪಿ ಮಸೀದಿಗೆ ಹೋಗಿ ಬಂದಿದ್ದ ಎಂದು ಸುದ್ದಿ ಹಬ್ಬಿಸಲಾಗುತ್ತಿದೆ. ಇದು ಕೂಡ ನಿಜವಲ್ಲ. ನಮ್ಮ ತನಿಖೆಯಲ್ಲಿ ಅಂತಹ ಯಾವುದೇ ವಿಚಾರ ಕಂಡು ಬಂದಿಲ್ಲ' ಎಂದು ಸ್ಪಷ್ಟಪಡಿಸಿದರು.

'ಆರೋಪಿಯು ಎಲ್ಲಿಗೆ ಎಲ್ಲ ಭೇಟಿ ನೀಡಿದ್ದ. ಯಾರನ್ನೆಲ್ಲ ಭೇಟಿಯಾಗಿದ್ದ ಎಂಬ ಎಲ್ಲಾ ಅಂಶಗಳನ್ನು ಕೂಲಂಕಷವಾಗಿ ತನಿಖೆಗೆ ಒಳಪಡಿಸುತ್ತೇವೆ'ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.